45 ವರ್ಷಗಳ ಹಿಂದೆ ನಾನು ತಾಳಿ ಕಟ್ಟದೆ ಮದುವೆಯಾಗಿ ಸುಖವಾಗಿ ದಾಂಪತ್ಯ ನಡೆಸಿದ್ದೇನೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಬನ್ನೂರು ರಸ್ತೆ ಹಾಲಿನ ಡೈರಿ ಪಕ್ಕದಲ್ಲಿರುವ ಶಿಕ್ಷಕರ ಭವನದ ಸಭಾಂಗಣದಲ್ಲಿ ಟಿ.ಎಸ್. ಪ್ರಸೇನ್ ಜಿತ್ ಮತ್ತು ಪಿ. ನಿಕಿತಾ ಅವರು ಭಾನುವಾರ ಕುವೆಂಪು ಮಂತ್ರಮಾಂಗಲ್ಯದ ಆಶಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ವಧುವರರಿಗೆ ಮಂತ್ರ ಮಾಂಗಲ್ಯ ಪ್ರಮಾಣ ವಚನವನ್ನು ಬೋಧಿಸಿದ ಭಾರತೀಯ ವಿಚಾರವಾದಿ ವೇದಿಕೆಯ ಅಧ್ಯಕ್ಷ ಪ್ರೊ. ನರೇಂದ್ರನಾಯಕ್ ಮಾತನಾಡಿ, ಮದುವೆ ಎನ್ನುವುದು ಆಡಂಬರ ಮತ್ತು ಮೌಢ್ಯದಿಂದ ಕೂಡಿರಬಾರದು. ಪರಸ್ಪರ ಪ್ರೀತಿ ವಿಶ್ವಾಸಗಳಿದ್ದರೆ ಸಾಕು. ತಾಳಿ ಎಂಬ ಕಟ್ಟುಪಾಡು ಸಹ ಅಗತ್ಯವಿಲ್ಲ ಎಂದರು.45 ವರ್ಷಗಳ ಹಿಂದೆ ನಾನು ತಾಳಿ ಕಟ್ಟದೆ ಮದುವೆಯಾಗಿ ಸುಖವಾಗಿ ದಾಂಪತ್ಯ ನಡೆಸಿದ್ದೇನೆ. ದ್ವಿಜ ಎಂದು ಕರೆಯಲ್ಪಡುವ ಬ್ರಾಹ್ಮಣ ಸಮುದಾಯದಲ್ಲಿ ಆಕಸ್ಮಿಕವಾಗಿ ನಾನು ಹುಟ್ಟಿರಬಹುದು. ಆದರೆ, ಆ ಯಾವ ಮೌಢ್ಯದ ಸಂಪ್ರದಾಯವನ್ನೂ ಅನುಸರಿಸದೆ, ವೈಚಾರಿಕವಾಗಿ ಜೀವನ ರೂಪಿಸಿಕೊಂಡಿದ್ದೇನೆ. ದ್ಬಿಜ ಎಂದರೆ ಎರಡು ಸಾರಿ ಜನನ ಎಂದು. ನಾನು ಜನಿಸಿದ್ದು ಒಂದು, ನನ್ನ ವೈಚಾರಿಕ ಬದುಕನ್ನು ರೂಪಿಸಿಕೊಂಡಿದ್ದು ಮತ್ತೊಂದು ಜನನ. ಹೀಗಾಗಿ, ದ್ವಿಜ ಎಂಬ ಪದದ ಅರ್ಥವನ್ನು ಈ ರೀತಿ ಗ್ರಹಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.ವರನ ತಂದೆ ಸಿದ್ಧಾರ್ಥ ಮಾತನಾಡಿ, ಎರಡೂ ಕುಟುಂಬಗಳು ವೈಚಾರಿಕ ಆಲೋಚನೆಯನ್ನು ಹೊಂದಿದ್ದು, ನಮ್ಮ ಮಕ್ಕಳೂ ಸಹ ಅದೇ ದಾರಿಯಲ್ಲಿರುವುದರಿಂದ ಇವರ ಮದುವೆಯನ್ನು ಕುವೆಂಪು ಮಂತ್ರಮಾಂಗಲ್ಯದ ಆಶಯದಂತೆ ಮಾಡಲು ನಿರ್ಧರಿಸಲಾಯಿತು ಎಂದರು.ಕುವೆಂಪು ಮಂತ್ರ ಮಾಂಗಲ್ಯದ ವಿವಾಹ ಸಂಹಿತೆಯನ್ನು ಮಾನವ ಮಂಟಪದ ಸಂಚಾಲಕ ಪ್ರೊ.ಕೆ. ಕಾಳಚನ್ನೇಗೌಡ ಓದಿದರು. ರಾಷ್ಟ್ರೀಯ ಲೇಬರ್ ಯುನಿಯನ್ ಅಧ್ಯಕ್ಷ ಶಿಡ್ಲಘಟ್ಟ ಭಕ್ತರಹಳ್ಳಿಯ ಕಾಳಪ್ಪ, ನಿವೃತ್ತ ಉಪನ್ಯಾಸಕಿ ರವಿಕಲಾ, ವಿಚಾರವಾದಿ ಶ್ರೀನಿವಾಸ್ ನಟೇಕರ್, ಈ. ಧನಂಜಯ ಎಲಿಯೂರು, ಹೋರಾಟಗಾರ ಉಗ್ರನರಸಿಂಹೇಗೌಡ, ನಿವೃತ್ತ ಪ್ರಾಧ್ಯಾಪಕಿ ಡಾ. ಲತಾ ಮೈಸೂರು ಮೊದಲಾದವರು ಇದ್ದರು.