ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಗುರುರಾಜ ಪಾದಯಾತ್ರೆ ಅಷ್ಟೋತ್ತರ ಭಜನಾ ಮಂಡಳಿ ಉತ್ಸಾಹಿ ಸದಸ್ಯರು ವಿಜಯಪುರದಿಂದ 33ನೇ ವರ್ಷದ ಶ್ರೀ ಕ್ಷೇತ್ರ ಮಂತ್ರಾಲಯ ಪಾದಯಾತ್ರೆ ಸೋಮವಾರ ಆರಂಭಿಸಿದರು. ನಗರದ ಶ್ರೀ ನಂಜನಗೂಡು ರಾಯರ ಮಠದಲ್ಲಿ ಮಹಾಮಂಗಳಾರತಿಯೊಂದಿಗೆ ತಮ್ಮ ಯಾತ್ರೆಗೆ ಚಾಲನೆ ನೀಡಲಾಯಿತು.ಪಾದಯಾತ್ರೆಯ ಸದಸ್ಯರು ಶ್ರೀಕ್ಷೇತ್ರ ಮುತ್ತಿಗೆ, ಯಲಗೂರು, ಮುದ್ದೇ ಬಿಹಾಳ, ಚಿತ್ತಾಪುರ, ಕವಿತಾಳ, ಮಾನವಿ, ಬಿಚ್ಚಾಲೆ ಮುಖಾಂತರವಾಗಿ ಜ.22 ರಂದು ಮಂತ್ರಾಲಯ ತಲುಪಲಿದ್ದಾರೆ. ಅಲ್ಲಿ ತಮ್ಮ ಕುಟುಂಬದವರ ಜೊತೆ ಶೋಭಾ ಯಾತ್ರೆಯೊಂದಿಗೆ ಶ್ರೀ ಗುರು ರಾಘವೇಂದ್ರರ ದರ್ಶನ ಪಡೆಯಲಿದ್ದಾರೆ. ಸುಮಾರು ೧೨೦ ಪಾದಯಾತ್ರಿಕರ ಈ ತಂಡ ತನ್ನ ೩೩ನೇ ವರ್ಷದ ಪಾದಯಾತ್ರೆಯ ಸೇವೆಯನ್ನು ಶ್ರೀ ಗುರು ರಾಘವೇಂದ್ರರ ಪಾದಾರವಿಂದದಲ್ಲಿ ಸಮರ್ಪಿಸಲಿದ್ದಾರೆ. ತಂಡದ ಅಧ್ಯಕ್ಷ ಗೋಪಾಲ ದೇಶಪಾಂಡೆ ಹಾಗೂ ಕಾರ್ಯದರ್ಶಿ ಸಂಜೀವ ಜಹಾಗೀರದಾರ ನೇತೃತ್ವ ವಹಿಸಿದ್ದು, ತಮ್ಮ ಯಾತ್ರೆಯಲ್ಲಿ ಪ್ರತಿದಿನ ಶ್ರೀ ಗುರುರಾಯರ ಅಷ್ಟೋತ್ತರ, ನೈವೇದ್ಯ ಹಾಗೂ ಸಾಯಂಕಾಲ ಭಜನೆಯ ವ್ಯವಸ್ಥೆ ಅಚ್ಚು ಕಟ್ಟಾಗಿ ಮಾಡುತ್ತಾರೆ.ವಿಜಯೇಂದ್ರ ನಾಮಣ್ಣ, ಮನೋಜ ಶಹಪುರ, ವಲ್ಲಭ ಮನಗೂಳಿ, ವಿಠ್ಠಲ ಮಡುಗುಳಿ, ಕಿಟ್ಟು ಕುಲಕರ್ಣಿ, ವಾದಿರಾಜ ಅವಧಾನಿ, ಜಯರಾವ ಕುಲಕರ್ಣಿ, ರಾಮಚಂದ್ರ ಕುಲಕರ್ಣಿ, ಪ್ರಾಣೇಶ ಹಿಪ್ಪರಗಿ, ರಮೇಶ ಹಿಪ್ಪರಗಿ, ತಮ್ಮಣ್ಣ ಮೈಗೂರ ಮುಂತಾದವರು ಇದ್ದರು.