ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮನು ಧರ್ಮವೇ ಮತ್ತೆ ಮರು ಸ್ಥಾಪನೆಯಾಗುವ ಹುನ್ನಾರಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಅಂಬೇಡ್ಕರ್ ಪ್ರಾಮುಖ್ಯವಾಗುತ್ತಾರೆ ಎಂದು ಕುವೆಂಪು ವಿವಿ ಎನ್‍ಎಸ್‍ಎಸ್ ಸಂಚಾಲಕಿ ಹಾಗೂ ಪ್ರೊ. ಡಾ.ಶುಭಾ ಮರವಂತೆ ಹೇಳಿದರು.ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸೋಮವಾರ ಸಹ್ಯಾದ್ರಿ ಕಲಾ ಪರಿಪತ್ತು, ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಆಯೋಜಿಸಿದ್ದ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಅಸಮಾನತೆ, ಕೌರ್ಯ ಇನ್ನು ಇದೆ. ದೇಶವನ್ನು ನುಂಗುವ ಕಬಂಧ ಬಾಹುಗಳು ಹೆಚ್ಚುತ್ತಾ ಹೋಗುತ್ತವೆ. ಉಡುಗೆ ತೊಡುಗೆ, ಆಚಾರ ವಿಚಾರಗಳಂತಹ ಸಣ್ಣ ಸಣ್ಣ ವಿಚಾರಕ್ಕೂ ಕಟ್ಟುಪಾಡುಗಳನ್ನು ಹಾಕುವ ಈ ಹೊತ್ತಿನಲ್ಲಿ ಅಂಬೇಡ್ಕರ್ ಮತ್ತೆ ಮತ್ತೆ ನೆನಪಾಗುತ್ತಾರೆ ಎಂದರು.ಮನುಸ್ಮೃತಿಯೇ ನಮ್ಮ ಸಂವಿಧಾನ. ನಮಗೆ ಬೇರೆ ಸಂವಿಧಾನ ಬೇಡ ಎಂದು ಅಂಬೇಡ್ಕರ್ ಸಂವಿಧಾನ ಕರಡು ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಅಂದು ಬಹಳ ವಿರೋಧವಿತ್ತು. ಆದರೆ, ಅವೆಲ್ಲವನ್ನು ಮೀರಿ ಅಂಬೇಡ್ಕರ್ ನಮಗೆ ಸ್ವಾಭಿಮಾನದ ಸಂವಿಧಾನವನ್ನು ಕೊಟ್ಟಿದ್ದಾರೆ. ಆದರೂ ಕೂಡ ಮತ್ತೆ ಮತ್ತೆ ಮನುಧರ್ಮವೇ ವಿಜೃಂಭಿಸುತ್ತಿದೆ. ಬಹುಸಂಸ್ಕೃತಿಯ ಭಾರತವನ್ನು ನಾಶ ಮಾಡುವ ಶಕ್ತಿಗಳು ಹೆಚ್ಚುತ್ತಿವೆ ಎಂದು ವಿಷಾಧಿಸಿದರು.
ಅಂಬೇಡ್ಕರ್ ಸ್ವಾಭಿಮಾನದ ದೇವತೆ ಅವರ ಚಿಂತನೆಗಳು ಗೌಣವಾಗುವ ಮತ್ತು ಸಂವಿಧಾನವನ್ನೇ ಬದಲಾಯಿಸುವ ದೃಷ್ಟಿಗಳು ಈಗ ಕಾಣತೊಡಗಿವೆ. ಆದ್ದರಿಂದ ಸಂವಿಧಾನವನ್ನು ರಕ್ಷಿಸುವ ಮೂಲಕ ಅಂಬೇಡ್ಕರ್‌ವರನ್ನು ಜೀವಂತವಾಗಿ ಇಟ್ಟುಕೊಳ್ಳಬೇಕಾಗಿದೆ ಎಂದರು.ಎನ್‍ಎಸ್‍ಎಸ್ ಘಟಕದ ಸಂಚಾಲಕ ಡಾ.ಪ್ರಕಾಶ್ ಮರ್ಗನಳ್ಳಿ ಮಾತನಾಡಿ, ರಾಜಕೀಯ ಸ್ವಾತಂತ್ರ್ಯಕ್ಕಿಂತ ಸಾಮಾಜಿಕ ಸ್ವಾತಂತ್ರ್ಯ ನಮಗೆ ಮುಖ್ಯ ಎಂದುಕೊಂಡವರು ಅಂಬೇಡ್ಕರ್. ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಅನೇಕ ವಿಚಾರಧಾರೆಗಳು ವಿಭಿನ್ನ ಯೋಚನೆಗಳು ನಮಗೆ ಬಂದಿವೆ. ಗಾಂಧಿ ಒಂದು ರೀತಿಯಲ್ಲಿ ಬಿಳಿಯ ಮೋಡ, ಆದರೆ ಅಂಬೇಡ್ಕರ್ ಕಪ್ಪನೆಯ ಮೋಡ ಎಂದು ಹೇಳಿದರು.ಸಂವಿಧಾನದ ಜೊತೆ ಜೊತೆಯೇ ಜಾತಿ ವ್ಯವಸ್ಥೆಯನ್ನು ಮಾತನಾಡಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಮೇಲ್ಜಾತಿಯವರು ಕೆಳ ಜಾತಿಯವರನ್ನು ಒಂದು ರೀತಿಯಲ್ಲಿ ಪಿರಮಿಡ್‍ನಂತೆ ಕಟ್ಟಿದ್ದರು. ಬ್ರಿಟಿಷ್ ಭಾರತವು ಕೂಡ ಇದೇ ಹಾದಿಯಲ್ಲಿ ಮುಂದುವರೆದಿತ್ತು. ಆದರೆ ಅಂಬೇಡ್ಕರ್ ಇವೆಲ್ಲವನ್ನು ಬದಲಾಯಿಸಿ ಹೊಸ ಸಂವಿಧಾನವನ್ನು ನಮಗೆ ಕೊಟ್ಟಿದ್ದಾರೆ. ಅದರಡಿಯಲ್ಲಿ ನಾವು ಇಂದು ಸುಖವಾಗಿ ಮತ್ತು ಶಾಂತಿಯುತವಾಗಿ ಬಾಳುತ್ತಿದ್ದೇವೆ. ಈ ಭಾರತವೇ ನಮಗೆ ಬೇಕಾಗಿರುವುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಸೈಯ್ಯದ್ ಸನಾವುಲ್ಲ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಹಾಗೂ ಪ್ರಾಧ್ಯಾಪಕ ಡಾ.ಕೆ.ಎನ್.ಮಂಜುನಾಥ್, ಪ್ರಾಧ್ಯಾಪಕಿ ಡಾ.ಪ್ರೇಮಾ ಇದ್ದರು.