ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ಪ್ರಾಂತ್ಯವನ್ನಾಳಿದ ನಾಡದೊರೆ ಮದಕರಿ ನಾಯಕಗೆ ಕೋಟೆ ನಾಡಿ ಮಂದಿ ಸೋಮವಾರ ಬಹುಪರಾಕ್ ಹೇಳಿದರು. ಜಯಂತ್ಯುತ್ಸವದ ಅಂಗವಾಗಿ ಮದಕರಿ ನಾಯಕನ ಭಾವಚಿತ್ರ ಮೆರವಣಿಗೆಗೆ ಸಂಭ್ರಮದ ಸ್ಪರ್ಶ ನೀಡಲಾಯಿತು. ಹೊಳಲ್ಕೆರೆ ರಸ್ತೆ ಕನಕ ವೃತ್ತದಿಂದ ಹೊರಟ ಮೆರವಣಿಗೆಗೆ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಸಚಿವ ಡಿ.ಸುಧಾಕರ್, ಮಾಜಿ ಸಚಿವ ಶ್ರೀರಾಮುಲು, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಚಾಲನೆ ನೀಡಿದರು. ಜಯಂತ್ಯುತ್ಸವದ ಅಂಗವಾಗಿ ಕನಕ ವೃತ್ತವನ್ನು ಹೂ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಕನಕ ಪುತ್ಥಳಿಗೆ ಹೂ ಹಾರ ಸಮರ್ಪಣೆ ನಂತರ ಮದಕರಿ ನಾಯಕರ ಭಾವಚಿತ್ರ ಮೆರಣಿಗೆಗೆ ಹೊರಟಿತು. ಡೊಳ್ಳು, ತಮಟೆ, ಉರುಮೆ, ಕಹಳೆ ವಾದ್ಯ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿತ್ತು. ಮೆರವಣಿಗೆಯುದ್ದಕ್ಕೂ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ರಾಜವೀರ ಮದಕರಿ ನಾಯಕನ ಬೃಹತ್ ಫೋಟೋ, ಮದವೇರಿದ ಆನೆಯನ್ನು ಮದಕರಿ ನಾಯಕ ಮದವಡಗಿಸುತ್ತಿರುವ ಸ್ಥಬ್ತ ಚಿತ್ರ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿತ್ತು. ಇದೇ ಸ್ತಬ್ದ ಚಿತ್ರದುರ್ಗ ಮೈಸೂರು ದಸರಾದಲ್ಲಿ ಬೆಂಗಳೂರು ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಕನಕ ವೃತ್ತದಿಂದ ಹೊರಟ ಮೆರವಣಿಗೆ
ವಾಲ್ಮೀಕಿ ಭವನದ ಮುಂಭಾಗವಿರುವ ಮದಕರಿನಾಯಕನ ಪ್ರತಿಮೆಯನ್ನು ವರ್ಣರಂಜಿತವಾಗಿ ಅಲಂಕರಿಸಿ ವಿದ್ಯುತ್ ದೀಪಗಳಿಂದ ಜಗಮಗಿಸುವಂತೆ ಸಿಂಗರಿಸಲಾಗಿತ್ತು.ಕನಕದಾಸ, ಸಂಗೊಳ್ಳಿ ರಾಯಣ್ಣ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ವೀರ ವನಿತೆ ಒನಕೆ ಓಬವ್ವ ಪ್ರತಿಮೆಗಳನ್ನು ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಿ ರಸ್ತೆಯೂದ್ದಕ್ಕೂ ಬಾಳೆಕಂಬಗಳನ್ನು ಕಟ್ಟಲಾಗಿತ್ತು.
ಮೆರವಣಿಗೆ ಸಂದರ್ಭದಲ್ಲಿ ಸಂಚಾರಕ್ಕೆ ಅಡ್ಡಿಯುಂಟಾಗಬಾರದೆಂದು ಅಲ್ಲಲ್ಲಿ ಪೊಲೀಸ್ ಬ್ಯಾರಿಕೇಡ್‍ಗಳನ್ನಿಟ್ಟು ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು.*ಸರ್ಕಾರದಿಂದಲೇ ಮದಕರಿ ಜಯಂತಿ ಆಚರಿಸಲಿ:
ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಮದಕರಿ ನಾಯಕ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಬೇಕೆಂದು ಮಾಜಿ ಸಚಿವ ಬಿ.ಶ್ರೀರಾಮುಲು ಒತ್ತಾಯಿಸಿದರು. ನಾಯಕ ಸಮಾಜದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ರಾಜವೀರ ಮದಕರಿ ನಾಯಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. ಕಳೆದ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಚಿತ್ರದುರ್ಗದಲ್ಲಿ ಮದಕರಿ ನಾಯಕ ಥೀಮ್ ಪಾರ್ಕ್ ನಿರ್ಮಾಣ ಮಾಡುವುದಾಗಿ ಕೇಂದ್ರ ಸರ್ಕಾರದ ಗೃಹಸಚಿವ ಅಮಿತ್ ಶಾ ತಿಳಿಸಿದ್ದರು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ. ಹಾಗಾಗಿ ಈಗ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಸುಧಾಕರ್ ಜಾಗ ನೀಡಿದ್ದಾರೆ. ಇದರಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲು ಸಮಾಜ ಸಹಕಾರ ನೀಡಲಿದೆ ಎಂದರು.ಚಿತ್ರದುರ್ಗದ ಪಾಳೇಗಾರರು ಉತ್ತಮ ಆಡಳಿತಕ್ಕೆ ಹೆಸರುವಾಸಿಯಾಗಿದ್ದರು. ನೆರೆ ರಾಜ್ಯಗಳ ರಾಜರು ಚಿತ್ರದುರ್ಗದ ಮೇಲೆ ದಂಡೆತ್ತಿ ಬಂದರೂ ಅವರು ಗೆಲ್ಲಲು ಸಾಧ್ಯವಾಗಲಿಲ್ಲ. ತಮ್ಮ ಸಾಮ್ರಾಜ್ಯ ರಕ್ಷಣೆಗೆ ಭದ್ರ ಕೋಟೆ ನಿರ್ಮಾಣ ಮಾಡಲಾಗಿತ್ತು. ಎಲ್ಲ ಸಮುದಾಯಗಳ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಿದರು. ಮದಕರಿ ನಾಯಕ ಮಾಡಿರುವ ಕೆಲಸ ಸೂರ್ಯ, ಚಂದ್ರ ಇರುವವರೆಗೆ ಶಾಶ್ವತವಾಗಿರುತ್ತವೆ ಎಂದು ಹೇಳಿದರು.
ಇಂತಹ ಪ್ರಾಮಾಣಿಕ, ದಕ್ಷ ಆಡಳಿತ ನಡೆಸಿದ ಪಾಳೇಗಾರರ ವಶಸ್ಥರು ಇಂದು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಪ್ರಾಮಾಣಿಕತೆಯಿಂದ ಜೀವನ ಮಾಡಿದ ಪರಿಣಾಮ ಇಂದು ಅವರು ಬಡತನದಲ್ಲಿ ಜೀವಿಸುತ್ತಿದ್ದಾರೆ. ಹಾಗಾಗಿ ಅವರನ್ನು ಮುಂದಿನ ದಿನಗಳಲ್ಲಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುವುದು. ಮೈಸೂರಿನ ರಾಜ ವಂಶಸ್ಥರಿಗೆ ನೀಡುವಂತೆ ಮದಕರಿ ನಾಯಕ ವಂಶಸ್ಥರಿಗೂ ಗೌರವ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ನಾಯಕ ಸಮಾಜ ಎಲ್ಲ ರಾಜಕೀಯವನ್ನು ಬದಿಗೊತ್ತಿ ಒಂದುಗೂಡಬೇಕು. ಯಾರು ಯಾವುದೇ ರಾಜಕೀಯ ಪಕ್ಷದಲ್ಲಿದ್ದರೂ ಚಿಂತೆಯಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು. ಉಳಿದಂತೆ ಸಮಾಜದ ವಿಚಾರ ಬಂದಾಗ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು. ಮದಕರಿ ನಾಯಕ ಥೀಮ್ ಪಾರ್ಕ್ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು. ಅದರಂತೆ ಪ್ರತಿ ವರ್ಷ ದುರ್ಗೋತ್ಸವ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿದರು. ಮಾದಾರ ಚೆನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಇಮ್ಮಡಿ ಕೇತೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಕಾರ್ಯಕ್ರಮದ ರೂವಾರಿ ಹಾಗೂ ಉದ್ಯಮಿ ಶ್ರೀನಿವಾಸ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಕಲ್ಲವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡ ಯೋಗೀಶ್ ಬಾಬು, ಗುಡ್ಡದೇಶ್ವರಪ್ಪ, ರತ್ನಮ್ಮ ಸೇರಿದಂತೆ ಸಮಾಜದ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
)
)
;Resize=(128,128))
;Resize=(128,128))
;Resize=(128,128))