ನೂತನ ಸಂಸದರ ಮುಂದಿದೆ ಹಲವು ಸವಾಲು!

| Published : Jun 07 2024, 12:32 AM IST

ಸಾರಾಂಶ

ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್‌ ಪಟೇಲ್‌ ನೂತನ ಸಂಸದರ ಮುಂದಿರುವ ಹಲವು ಸವಾಲುಗಳು

ಎಚ್.ವಿ.ರವಿಕುಮಾರ್

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ರಿವರ್ ಬ್ಯಾಂಕ್ ರಸ್ತೆಯ ನಿವಾಸಿ ಶ್ರೇಯಸ್ ಎಂ.ಪಟೇಲ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜಯಗಳಿಸಿದ ನಂತರ ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಮಿಂಚಿನ ಸಂಚಾರ ಉಂಟಾಗಿದ್ದರೂ ನೂತನ ಸಂಸದರ ಮುಂದೆ ಹಲವು ಸವಾಲುಗಳು ಇದ್ದು, ಮೊದಲಿಗೆ ತಾಲೂಕಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಿದ್ದಲ್ಲಿ ಮಾತ್ರ ಮುಂದಿನ ರಾಜಕೀಯ ನಡೆಗೆ ಉತ್ತಮ ಬುನಾಧಿಯಾಗಲಿದೆ.

1962 ರಿಂದ 1989ರ ಚುನಾವಣೆಯ ತನಕ ಹೊಳೆನರಸೀಪುರ ಕ್ಷೇತ್ರದಲ್ಲಿ ವಿಧಾನ ಸಭೆಯ ಸದಸ್ಯರಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಿರಂತರವಾಗಿದ್ದರು. ಎಚ್.ಡಿ.ದೇವೇಗೌಡರ ಅತ್ಮೀಯರಾಗಿದ್ದ ಜಿ.ಪುಟ್ಟಸ್ವಾಮಿಗೌಡರ ನಡುವೆ ವೈಯಕ್ತಿಕ ಕಾರಣಕ್ಕೆ ವಿರಸ ಉಂಟಾಗಿ ಜಿ.ಪಿ.ಜಿ ಅವರು ಎಚ್.ಡಿ.ಡಿ ಪಾಳಯದಿಂದ ಹೊರ ಬಂದು ಕಾಂಗ್ರೆಸ್ ಪಕ್ಷ ಸೇರಿದರು.

ಅಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಹಳ ಕಡಿಮೆ ಅಂತರದಿಂದ ಸೋಲುತ್ತಿದ್ದರೂ ಗೆಲುವು ಅಸಾಧ್ಯವಾಗಿತ್ತು, ಅಂತಹ ಸಂದರ್ಭದಲ್ಲಿ ಜಿ.ಪಿ.ಜಿ ಅವರ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಮಿಂಚಿನ ಸಂಚಾರ ಉಂಟಾಗಿತ್ತು. 1985ರ ಚುನಾವಣೆಯಲ್ಲಿ ಜಿ.ಪಿ.ಜಿ ಅವರು ಗೆಲುವು ಸಾಧಿಸುತ್ತಾರೆ ಎಂಬ ವರದಿಗಳು ಇದ್ದರೂ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯುವಲ್ಲಿ ವಂಚಿತರಾಗಿ ಸಿಂಹದ ಗುರುತಿನಲ್ಲಿ ಚುನಾವಣೆಗೆ ಸ್ಪರ್ಧಿಸಿದರು ಮತ್ತು ಟಿ.ಎಲ್.ಕೃಷ್ಣಕುಮಾರ್ ಎಂಬ ವಕೀಲರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಆದರೆ ತಾಲೂಕಿನ ಸಂಪೂರ್ಣ ಕಾಂಗ್ರೆಸ್ ಬಳಗವೇ ಜಿಪಿಜಿ ಜತೆಗಿದ್ದರೂ ಎಚ್‌ಡಿಡಿ ಅವರು ಜಿಪಿಜಿ ವಿರುದ್ಧ 3167 ಮತಗಳಿಂದ ಜಯಗಳಿಸಿದ್ದರು ಮತ್ತು 1985ರ ಚುನಾವಣೆಯಲ್ಲಿ ಜಯಗಳಿಸಿದ ಎಚ್‌ಡಿಡಿ ಅವರು ರಾಮಕೃಷ್ಣಹೆಗ್ಗಡೆ ಸಂಪುಟದಲ್ಲಿ ಪ್ರಥಮ ಭಾರಿಗೆ ಸಚಿವರಾದರು. ಆದರೆ ಎಚ್‌ಡಿಡಿ ಸಚಿವರಾದ ನಂತರಕಾರ್ಯಕರ್ತರ ದಬ್ಬಾಳಿಕೆ, ಪತ್ರಿಕೆಗಳಲ್ಲಿ ಅವರ ನಾಯಕರ ವಿರುದ್ಧ ಸುದ್ದಿ ಪ್ರಕಟಗೊಂಡಲ್ಲಿ ವರದಿಗಾರರಿಗೆ ದಮ್ಕಿ ಹೆಚ್ಚಿತ್ತು. ಜಿಪಿಜಿ ಜತೆಗೆ ಉತ್ತಮ ಒಡನಾಟ ಹೊಂದಿದ್ದ ಅಧಿಕಾರಿಗಳಿಗೆ ಮಾನಸಿಕ ಹಾಗೂ ವರ್ಗಾವಣೆ ಹಿಂಸೆ ಹೆಚ್ಚಿತ್ತು. ಆ ದಿನಗಳಲ್ಲಿ ಬಿಇಒ ವಿಶ್ವೇಶ್ವರಯ್ಯ ಸಾಕಷ್ಟು ಹಿಂಸೆ ಅನುಭವಿಸಿದ್ದರು. ಪ್ರಥಮ ದರ್ಜೆ ಗುತ್ತಿಗೆದಾರಾಗಿ ಖ್ಯಾತರಾಗಿದ್ದ ಸಿದ್ಧವೀರಯ್ಯ ಎಂಬುವರು ಪಾರ್ಶವಾಯುಗೆ ತುತ್ತಾಗಿ, ಕಡೇ ದಿನಗಳಲ್ಲಿ ಬಹಳ ಹಿಂಸೆ ಅನುಭವಿಸಿದ್ದರು, ಈ ರೀತಿಯ ಹತ್ತಾರು ನಿದರ್ಶನಗಳು ಜತೆಗೆ ಕೆಲವು ಅಧಿಕಾರಿಗಳ ವರ್ತನೆಯೂ ಮಿತಿಮೀರಿತ್ತು. 1989ರ ಚುನಾವಣೆಯಲ್ಲಿ ಜಿಪಿಜಿ ಅವರು ಜಯಗಳಿಸಿದ ನಂತರ ಬಿಇಒ ವಿಶ್ವೇಶ್ವರಯ್ಯ ಪುನಂ ಅಧಿಕಾರ ಸ್ವೀಕರಿಸಿದರು. ಏಕಚಕ್ರಾಧಿಪತಿ ಆಡಳಿತ ನಿಂತು, ಜನರು ನಿರಾಳವಾದರು.

ನಂತರದ ದಿನಗಳಲ್ಲಿ ರಾಜಕೀಯದ ಏಳುಬೀಳುಗಳನ್ನು ಕಂಡ ಜಿಪಿಜಿ ಅವರು 2006ರಲ್ಲಿ ನಿಧನರಾದರು. ಬಳಿಕ ಕ್ಷೇತ್ರದಲ್ಲಿ ಎಚ್.ಡಿ.ರೇವಣ್ಣನವರ ಆಡಳಿತ ಪ್ರಾರಂಭವಾಗಿತ್ತು. 2009ರ ಲೋಕಸಭಾ ಚುನಾವಣೆಯ ನಂತರ ಜಿಲ್ಲೆಯ ಕಾಂಗ್ರೆಸ್ಕಾರ್ಯಕರ್ತರಲ್ಲಿ ಆತಂಕ ಹೆಚ್ಚಿತ್ತು.ಅಂತರಿಕ ಜಗಳದಿಂದ ಸಮರ್ಥ ನಾಯಕನಿಲ್ಲದೇ ಪಕ್ಷವು ಸೊರಗಿತ್ತು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಜಿಪಿಜಿ ಅವರ ಮೊಮ್ಮಗ ಶ್ರೇಯಸ್ ಎಂ.ಪಟೇಲ್ ಸ್ವರ್ಧಿಸಿ ತನ್ನ ಸಾಮರ್ಥ್ಯವನ್ನು ತೋರಿಸಿದ ನಂತರ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡಿದ ಚೈತನ್ಯವು 2024ರ ಚುನಾವಣೆಯಲ್ಲಿ ಶ್ರೇಯಸ್ ಎಂ.ಪಟೇಲ್ ಅವರ ಜಯದೊಂದಿಗೆ ಸಾಬೀತಾಗಿದೆ. 1989ರ ಸೋಲಿನ ನಂತರ ಎಚ್‌ಡಿಡಿ ಅವರು ಎದುರಿಸಿದ ಸವಾಲುಗಳು ಇಂದು ಶಾಸಕ ಎಚ್.ಡಿ.ರೇವಣ್ಣನವರ ಮುಂದಿದ್ದು, ಅವರ ನಿರ್ಧಾರಗಳು ಮತ್ತು ಕೈಗೊಳ್ಳುವ ಕಾರ್ಯ ಹಾಗೂ ತೋರುವ ಚಾಕಚಕ್ಯತೆಯಿಂದ ಮಾತ್ರ ದೂಳುನಿಂದ ಎದ್ದು ಬರಲು ಸಾಧ್ಯ.