ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ರೈತರ ಪ್ರಗತಿಗಾಗಿ ಮನ್ಮುಲ್ ಹಲವು ಸೌಲಭ್ಯ ನೀಡುತ್ತಿದ್ದು ರೈತರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನ್ಮುಲ್ ಸಹಾಯಕ ವ್ಯವಸ್ಥಾಪಕ ಹಾಗೂ ಪಶು ವೈದ್ಯಾಧಿಕಾರಿ ಡಾ.ಯೋಗೇಶ್ ಸಲಹೆ ನೀಡಿದರು.ತಾಲೂಕಿನ ಹೊಂಬೇಗೌಡನದೊಡ್ಡಿ ಗ್ರಾಮದಲ್ಲಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೆಎಂಎಫ್, ಮನ್ಮುಲ್ ಸಹಕಾರದೊಂದಿಗೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಳೆದ 7 ದಿನಗಳಿಂದ ಹಮ್ಮಿಕೊಂಡಿರುವ ವಿವಿಧ ರೈತಪರ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ನಡೆದ ರಾಸುಗಳ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ರೈತರು ಶುದ್ಧ ಹಾಲನ್ನು ಪೂರೈಕೆ ಮಾಡಿದರೇ ಮನ್ಮುಲ್ ಹೈನುಗಾರಿಕೆಗೆ ಬೇಕಾದ ಸವಲತ್ತುಗಳನ್ನು ಸಮರ್ಪಕವಾಗಿ ಒದಗಿಸಲಿದೆ. ಹೈನುಗಾರಿಕೆ ರೈತರ ಜೀವನಾಡಿಯಾಗಿದೆ. ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬಹುದಾಗಿದೆ ಎಂದರು.ರಾಸುಗಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು. ರಾಸುಗಳು ಆರೋಗ್ಯಕರವಾಗಿದ್ದರೆ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡಬಹುದು. ರಾಸುಗಳ ಹಾರೈಕೆಯ ದೃಷ್ಟಿಯಿಂದ ರೈತರು ಮನ್ಮುಲ್ ನ ಸಹಕಾರ ಪಡೆಯಬೇಕೆಂದು ಹೇಳಿದರು.
ಆಧುನಿಕತೆಯಂತೆ ಹಸುಗಳ ನಿರ್ವಹಣೆ ವಿಧಾನ ತುಂಬಾ ಸುಲಭವಾಗಿ ನಿರ್ವಹಿಸಬಹುದು. ಪಶುಗಳ ಆರೋಗ್ಯ ಕಾಪಾಡಲು ಪಶು ಇಲಾಖೆ ನೀಡುವ ವೈದ್ಯಕೀಯ ಸೌಲಭ್ಯ ಹಾಗೂ ಸಲಹೆ ಸೂಚನೆ ಪಾಲಿಸುವುದರ ಜತೆಗೆ ನಿಮ್ಮ ಸುತ್ತಮುತ್ತಲಿನಲ್ಲಿಯೇ ಸಿಗುವ ನಾಟಿ ಔಷಧಿಗಳನ್ನು ಉಪಯೋಗಿಸಬಹುದು. ಸ್ಥಳೀಯ ಹಾಲು ಉತ್ಪಾದಕರ ಸಂಘದಲ್ಲಿಯೇ ಹಲವು ಸವಲತ್ತುಗಳು ದೊರೆಯಲಿವೆ ಎಂದರು.ಗ್ರಾಮದ ಮುಖಂಡ ನಾಗೇಂದ್ರ ಮಾತನಾಡಿ, ರೈತರು ಹಿಂದಿನ ಮಾದರಿಯಲ್ಲಿಯೇ ಹಸು ಸಾಕಾಣಿಕೆ ಮಾಡುತ್ತಿರುವುದರಿಂದ ಹಲವು ಸಮಸ್ಯೆ ಎದುರಿಸಬೇಕಿತ್ತು. ರೈತರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ಹಾಲಿನ ಗುಣಮಟ್ಟ ಸುಧಾರಿಸಲು ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಳೆದ ಏಳು ದಿನಗಳಿಂದಲೂ ಕಾನೂನು ಅರಿವು, ಆರೋಗ್ಯ ತಪಾಸಣೆ ಶಿಬಿರ, ಬಾಲ್ಯ ವಿವಾಹ ತಡೆಗಟ್ಟಲು ಅರಿವು ಸೇರಿದಂತೆ ನಾನಾ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಅಧ್ಯಕ್ಷೆ ದುಂಡಮ್ಮ, ಉಪಾಧ್ಯಕ್ಷೆ ಲಿಲತಮ್ಮ, ಗ್ರಾಪಂ ಸದಸ್ಯ ಅಂದಾನಿ, ಸಂಘದ ನಿರ್ದೇಶಕರಾದ ಪ್ರೇಮಾ, ನಾಗಮ್ಮ, ಮನ್ಮುಲ್ ಕ್ಷೀರಾ ಸಂಜೀವಿನಿ ಯೋಜನೆ ಸುಕನ್ಯಾ, ಮುಖಂಡರಾದ ನಾಗರಾಜು, ಚಿಕ್ಕ ಹೊಂಬೇಗೌಡ, ಮಹೇಶ್, ಕುಳ್ಳೇಗೌಡ, ಕಾರ್ಯದರ್ಶಿ ಎಂ.ಎಸ್.ಶಶಿ, ಹಾಲು ಪರೀಕ್ಷಕಿ ಕಾವ್ಯ ಹಾಗೂ ಸಿಬ್ಬಂದಿ ಇದ್ದರು.