ಕರಾವಳಿ, ಮಲೆನಾಡು ಸೇರಿ ರಾಜ್ಯದ ಹಲವೆಡೆ ಮುಂಗಾರು ಅಬ್ಬರ : ಮಳೆಗೆ ಹಲವು ಹೆದ್ದಾರಿ ಬಂದ್‌

| Published : Jul 19 2024, 02:02 AM IST / Updated: Jul 19 2024, 05:39 AM IST

ಸಾರಾಂಶ

ಕರಾವಳಿ, ಮಲೆನಾಡು ಸೇರಿ ರಾಜ್ಯದ ಹಲವೆಡೆ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಗುಡ್ಡ ಕುಸಿತ ಕೂಡ ಮುಂದುವರಿದಿದೆ. ಗುಡ್ಡ ಕುಸಿತದಿಂದಾಗಿ ಕರ್ನಾಟಕ- ಗೋವಾ, ಮಂಗಳೂರು-ಬೆಂಗಳೂರು, ಮಡಿಕೇರಿ-ಮಂಗಳೂರು ಸೇರಿ 9ಕ್ಕೂ ಹೆಚ್ಚು ಹೆದ್ದಾರಿಗಳು ಬಂದ್‌ ಆಗಿದೆ. ವಾಹನ ಸವಾರರಿಗೆ ಎಚ್ಚರಿಕೆ ನೀಡಲಾಗಿದೆ.

  ಬೆಂಗಳೂರು : ಕರಾವಳಿ, ಮಲೆನಾಡು ಸೇರಿ ರಾಜ್ಯದ ಹಲವೆಡೆ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಗುಡ್ಡ ಕುಸಿತ ಕೂಡ ಮುಂದುವರಿದಿದೆ. ಗುಡ್ಡ ಕುಸಿತದಿಂದಾಗಿ ಕರ್ನಾಟಕ- ಗೋವಾ, ಮಂಗಳೂರು-ಬೆಂಗಳೂರು, ಮಡಿಕೇರಿ-ಮಂಗಳೂರು ಸೇರಿ 9ಕ್ಕೂ ಹೆಚ್ಚು ಹೆದ್ದಾರಿಗಳು ಬಂದ್‌ ಆಗಿದ್ದು, ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಇನ್ನೂ ಹಲವೆಡೆ ಗುಡ್ಡ ಕುಸಿತದ ಭೀತಿ ಎದುರಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಾಹನ ಸವಾರರಿಗೆ ಎಚ್ಚರಿಕೆ ನೀಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ 75, ಬೆಂಗಳೂರು- ಮಂಗಳೂರು ನಡುವಣ ಶಿರಾಡಿ ಘಾಟ್ ಪರಿಸರದ ಮಾರನಹಳ್ಳಿಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ವಾಹನ ಸಂಚಾರ ಬಂದ್‌ ಆಗಿದೆ. ಸಕಲೇಶಪುರ ತಾಲೂಕಿನ ದೋಣಿಗಲ್ ನಲ್ಲಿ ಭೂಕುಸಿತಕ್ಕೆ ಓಮ್ನಿ ಕಾರೊಂದು ಸಿಲುಕಿದ್ದು, ಅದೃಷ್ಟವಶಾತ್‌ ಪ್ರಯಾಣಿಕರು ಅಪಾಯವಿಲ್ಲದೆ ಪಾರಾಗಿದ್ದಾರೆ. ಅತ್ತ ಚಾರ್ಮಾಡಿ ಘಾಟ್‌ನಲ್ಲೂ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಇನ್ನು, ಗುಡ್ಡ ಕುಸಿತದ ಭೀತಿಯಿಂದಾಗಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಡಿಕೇರಿಯಿಂದ-ಸಂಪಾಜೆ ತನಕ ಜು.22ರ ತನಕ ರಾತ್ರಿ 8ರಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರ ಬಂದ್ ಮಾಡಲಾಗಿದೆ.

ಮಂಗಳೂರು-ಶಿವಮೊಗ್ಗ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಶೃಂಗೇರಿ ತ್ಯಾವಣ ಬಳಿ ಗುಡ್ಡ ಕುಸಿತ ಉಂಟಾಗಿದೆ. ಜೊತೆಗೆ, ನೆಮ್ಮಾರು ಎಸ್ಟೇಟ್ ಮಧ್ಯದ ರಸ್ತೆಯಲ್ಲಿ ಬಿರುಕು ಬಿಟ್ಟಿದ್ದು, ವಾಹನ ಸಂಚಾರ ಬಂದ್‌ ಆಗಿದೆ. ಕಪಿಲಾ ನದಿಯ ಪ್ರವಾಹದ ಹಿನ್ನೆಲೆಯಲ್ಲಿ ಮೈಸೂರು-ಊಟಿ ಹೆದ್ದಾರಿ (181) ಬಂದ್ ಆಗುವ ಆತಂಕ ಎದುರಾಗಿದೆ. 

ಬಾಳೆಹೊನ್ನೂರು ಸಮೀಪ ರಂಭಾಪುರಿ ಪೀಠ-ಮೇಲ್ಪಾಲ್ ಕೊಪ್ಪ ಸಂಪರ್ಕ ರಸ್ತೆಯ ಕೋಣೆಮನೆ ಎಂಬಲ್ಲಿ ಬೃಹತ್ ಗಾತ್ರದ ಮರ ಬಿದ್ದು, ಗುಡ್ಡ ಕುಸಿತ ಉಂಟಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಸಮೀಪದ ಶಿರೂರು ಸಮೀಪ ಮತ್ತಷ್ಟು ಗುಡ್ಡ ಕುಸಿಯುತ್ತಿದ್ದು, ವಾಹನ ಸಂಚಾರಕ್ಕೆ ಹೆದ್ದಾರಿ ಇನ್ನೂ ಮುಕ್ತವಾಗಿಲ್ಲ. 

ಇದೇ ವೇಳೆ, ಜಿಲ್ಲೆಯ ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ 766ಇ ನಲ್ಲಿ ದೇವಿಮನೆ ಘಟ್ಟದ ಬಳಿ ಗುಡ್ಡ ಕುಸಿತ ಉಂಟಾಗಿದೆ. ಕಾರವಾರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರ ಬರ್ಗಿ ಬಳಿ ಗುಡ್ಡ ಕುಸಿದಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಕುಮಟಾ ತಾಲೂಕಿನ ಗೋಕರ್ಣದ ದೇವರಬಾಯಿಯಲ್ಲಿ ಗುಡ್ಡವೊಂದು ಸುಮಾರು 200 ಮೀಟರ್‌ವರೆಗೆ ಬಿರುಕು ಬಿಟ್ಟಿದ್ದು, ಕುಸಿತದ ಭೀತಿ ಎದುರಾಗಿದೆ. ಬೆಳಗಾವಿ-ಸಿಂಧುದುರ್ಗ ಹೆದ್ದಾರಿ ಮೇಲೆ ಮಹಾರಾಷ್ಟ್ರದ ಸಾವಂತವಾಡಿಯ ಅಂಬೋಲಿ ಫಾಲ್ಸ್‌ ಬಳಿ ಬಂಡೆ ಉರುಳಿ ಬಿದ್ದಿದ್ದು, ತೆರವು ಕಾರ್ಯಾಚರಣೆ ಮುಂದುವರಿದಿದೆ.

ಇದೇ ವೇಳೆ, ಕರ್ನಾಟಕ-ಗೋವಾ ಮಧ್ಯದ ಅನಮೋಡ್‌ ಘಾಟ್‌ನಲ್ಲಿ ಗುಡ್ಡ ಕುಸಿತವಾಗಿದ್ದು, ವಾಹನ ಸವಾರರು ಸ್ವಲ್ಪದರಲ್ಲಿ ಪಾರಾಗಿದ್ದಾರೆ. ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಸದ್ಯಕ್ಕೆ ವಾಹನ ಸಂಚಾರ ಸ್ಥಗಿತಗೊಂಡಿದೆ.