ಸಾರಾಂಶ
ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಪತ್ತೆಯಾಗಿದ್ದ ಅರ್ಜುನ ಲಾರಿಯ ಕ್ಯಾಬಿನ್‌ನಲ್ಲಿ ಹಲವು ವಸ್ತುಗಳು ಗುರುವಾರ ಪತ್ತೆಯಾಗಿವೆ. 3ನೇ ಹಂತದ ರಕ್ಷಣಾ ಕಾರ್ಯಾಚರಣೆಯ 7ನೇ ದಿನವಾದ ಗುರುವಾರ ನಜ್ಜುಗುಜ್ಜಾದ ಲಾರಿಯ ಒಳಗಡೆ ಇದ್ದ ವಸ್ತಗಳನ್ನು ಜೆಸಿಬಿ ಬಳಸಿ ಒಡೆದು ತೆಗೆಯಲಾಯಿತು. ಅರ್ಜುನ ಬಳಸುತ್ತಿದ್ದ ಬಟ್ಟೆಗಳು, ಮಗನಿಗಾಗಿ ಆಟವಾಡಲು ಆಟಿಕೆ ಲಾರಿ, ಚಪ್ಪಲಿ, ಎರಡು ಮೊಬೈಲ್, ಪಾತ್ರೆಗಳು ಪತ್ತೆಯಾಗಿದೆ.
ಶುಕ್ರವಾರ ವಿಧಿ ವಿಜ್ಞಾನ ವರದಿ: ಬುಧವಾರ ಲಾರಿಯಲ್ಲಿ ಸಿಕ್ಕ ಅರೆಬರೆ ಶವವು ಯಾರದೆಂಬದನ್ನು ಅಧಿಕೃತವಾಗಿ ದೃಢಪಡಿಸಲು ಹುಬ್ಬಳ್ಳಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಶುಕ್ರವಾರ 11 ಗಂಟೆಯ ಒಳಗಾಗಿ ವರದಿಯು ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.
ಕಳೆದ 72 ದಿನಗಳಿಂದ ಅರ್ಜುನನ ಆಗಮನಕ್ಕಾಗಿ ಅವರ ಕುಟುಂಬದವರು ಹಾಗೂ ಕೇರಳದ ಜನತೆ ಎದುರು ನೋಡುತ್ತಿದೆ. ಆದರೆ ಅರ್ಜುನನ ಎಂದು ಹೇಳಲಾದ ಶವವು ಬುಧವಾರ ಪತ್ತೆಯಾಗಿತ್ತು. ಆದರೆ ಅಧಿಕೃತವಾಗಿ ಜಿಲ್ಲಾಡಳಿತ ಈ ಶವವು ಅರ್ಜುನ ಎಂದು ಪ್ರಕಟಿಸಿಲ್ಲ. ಹೀಗಾಗಿ ಶುಕ್ರವಾರ ಅಧಿಕೃತ ಘೋಷಣೆಯಾಗಲಿದೆ. ಅಲ್ಲದೇ ಕೇರಳಕ್ಕೆ ಶವ ಸಾಗಿಸಲು ಸಕಲ ಸಿದ್ಧತೆ ಮಾಡಲಾಗಿದೆ.
ಮುಂದುವರಿದ ಶೋಧ: ಶಿರೂರು ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಪತ್ತೆಗಾಗಿ ಕಾರ್ಯಾಚರಣೆ ಗುರುವಾರವೂ ಮುಂದುವರಿದಿದೆ. ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಗೆ ಬಿದ್ದಿರುವ ಮಣ್ಣನ್ನು ಎತ್ತಿ ದಡಕ್ಕೆ ಸಾಗಿಸಲಾಗುತ್ತಿದೆ.
ಮಗನಿಗೆ ಆಟಿಕೆ ಲಾರಿ ಒಯ್ಯುತ್ತಿದ್ದ ಅರ್ಜುನ
ಅರ್ಜುನ ತನ್ನ ಮಗ ಆರ್ಯನಿಗೆ ಆಟವಾಡಲೆಂದು ಆಟಿಕೆ ಲಾರಿಯನ್ನು ತೆಗೆದುಕೊಂಡು ಬರುತ್ತಿದ್ದ ಎನ್ನಲಾಗಿದೆ. ಆದರೆ ವಿಧಿಯಾಟದ ಲೀಲೆ ಅರ್ಜುನ ಮಾತ್ರ ಬಾರದ ದಾರಿಯತ್ತ ತೆರಳಿದ್ದ. ಗುರುವಾರ ಪತ್ತೆಯಾದ ಆಟಿಕೆ ಲಾರಿಯು ಎಲ್ಲರ ಗಮನ ಸೆಳೆದು ಕಣ್ಣಾಲೆಯಲ್ಲಿ ನೀರನ್ನು ತರಿಸಿತ್ತು.
ಸಿಎಂ ಸಿದ್ದರಾಮಯ್ಯ, ಶಾಸಕ ಸತೀಶ ಸೈಲ್‌ಗೆ ಕೇರಳ ಮುಖ್ಯಮಂತ್ರಿ ಅಭಿನಂದನೆ
ಶಿರೂರು ಗುಡ್ಡ ಕುಸಿತದ ರಕ್ಷಣಾ ಕಾರ್ಯಾಚರಣೆಯಲ್ಲಿ ಹಗಲು- ರಾತ್ರಿ ಎನ್ನದೆ ಅವಿರತವಾಗಿ ತೊಡಗಿಸಿಕೊಂಡ ಕಾರವಾರ –ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಹಾಗೂ ಸೂಕ್ತವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶಿಷ್ಟ ಸೇವಾ ಕಾರ್ಯಕ್ಕೆ ಕೇರಳ ಸರ್ಕಾರ ಕೃತಜ್ಞತೆ ಸಲ್ಲಿಸಿ, ಅಭಿನಂದನಾ ಪತ್ರ ಸಲ್ಲಿಸಿದೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಭಿನಂದನಾ ಪತ್ರ ಬರೆದಿದ್ದು, ಶಿರೂರಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸರ್ಕಾರ ಕೈಗೊಂಡ ಪ್ರಯತ್ನಗಳಿಗೆ ಕೇರಳ ಸರ್ಕಾರ ಮತ್ತು ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದಿದ್ದಾರೆ.