ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಪ್ರಸ್ತುತ 6 ಜೋಡಿ ವಂದೇ ಭಾರತ್‌ ರೈಲುಗಳು ಸಂಚರಿಸುತ್ತಿವೆ. ಈ ರೈಲುಗಳು ಬೆಂಗಳೂರು, ಧಾರವಾಡ, ಕಲಬುರಗಿ, ಮೈಸೂರು, ಚೆನ್ನೈ, ಪುಣೆ, ಬೆಳಗಾವಿ ಮತ್ತು ಎರ್ನಾಕುಲಂ ಸೇರಿದಂತೆ ಅನೇಕ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತಿವೆ.

ಅಜೀಜಅಹ್ಮದ್ ಬಳಗಾನೂರ

ಹುಬ್ಬಳ್ಳಿ:

ಐಷಾರಾಮಿ ಸೌಲಭ್ಯ ಹಾಗೂ ವೇಗದ ಸಂಚಾರದಿಂದ ಜನ ಮನ್ನಣೆ ಗಳಿಸಿರುವ ವಂದೇ ಭಾರತ್‌ ರೈಲುಗಳು ನೈಋತ್ಯ ರೈಲ್ವೆ ಭಾಗದಲ್ಲೂ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿವೆ. ಈ ರೈಲಿನಲ್ಲಿ ಓಡಾಡುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಆದಾಯವೂ ಜಾಸ್ತಿಯಾಗಿದೆ.

ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಪ್ರಸ್ತುತ 6 ಜೋಡಿ ವಂದೇ ಭಾರತ್‌ ರೈಲುಗಳು ಸಂಚರಿಸುತ್ತಿವೆ. ಈ ರೈಲುಗಳು ಬೆಂಗಳೂರು, ಧಾರವಾಡ, ಕಲಬುರಗಿ, ಮೈಸೂರು, ಚೆನ್ನೈ, ಪುಣೆ, ಬೆಳಗಾವಿ ಮತ್ತು ಎರ್ನಾಕುಲಂ ಸೇರಿದಂತೆ ಅನೇಕ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತಿವೆ. ಇವುಗಳಲ್ಲಿ ನೈಋತ್ಯ ರೈಲು ನಡೆಸುವ 3 ಪ್ರಮುಖ ಮಾರ್ಗಗಳಾದ ಕೆಎಸ್‌ಆರ್ ಬೆಂಗಳೂರು-ಧಾರವಾಡ, ಯಶವಂತಪುರ-ಕಾಚೇಗುಡ ಮತ್ತು ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ ನಿರಂತರವಾಗಿ ಉತ್ತಮ ಕಾರ್ಯಕ್ಷಮತೆ ತೋರಿಸಿವೆ.

ಬೆಂಗಳೂರು-ಧಾರವಾಡ:

ಜೂ. 28, 2023ರಂದು ಆರಂಭವಾದ ಕೆಎಸ್‌ಆರ್ ಬೆಂಗಳೂರು-ಧಾರವಾಡ ರೈಲು ಪ್ರಾರಂಭಿಕ ತಿಂಗಳಲ್ಲಿ ಶೇ. 56, 6ನೇ ತಿಂಗಳಿಗೆ ಶೇ. 75ರಷ್ಟು ಪ್ರಯಾಣಿಕರು ಸಂಚರಿಸಿದ್ದು ಶೇ. 67ರಷ್ಟು ಆದಾಯ ಗಳಿಸಿದೆ. ಧಾರವಾಡ-ಬೆಂಗಳೂರು ಮಾರ್ಗವು 2 ತಿಂಗಳಲ್ಲಿ ಶೇ. 80, 6ನೇ ತಿಂಗಳಿಗೆ ಶೇ. 81ರಷ್ಟು ಪ್ರಯಾಣಿಕರು ಸಂಚರಿಸಿದ್ದಾರೆ.

ಯಶವಂತಪುರ- ಕಾಚಿಗುಡ:

ಸೆ. 25, 2023ರಂದು ಆರಂಭವಾದ ಈ ರೈಲು ಸಹ ಎರಡೂ ಮಾರ್ಗಗಳಲ್ಲಿ ಮೊದಲು ಶೇ. 90ರಷ್ಟಿದ್ದ ಜನಸಂದಣಿ ನಂತರದ ದಿನಗಳಲ್ಲಿ ಸಂಪೂರ್ಣ ಭರ್ತಿಯಾಯಿತು. ಇದನ್ನು ಮನಗಂಡ ರೈಲ್ವೆ ಇಲಾಖೆ ಪ್ರಯಾಣಿಕರ ಬೇಡಿಕೆಯಂತೆ 8 ಕೋಚ್‌ಗಳಿದ್ದ ಈ ರೈಲನ್ನು 2025ರ ಜುಲೈನಲ್ಲಿ 16 ಕೋಚ್‌ಗಳಿಗೆ ವಿಸ್ತರಿಸಿದೆ.

ಬೆಂಗಳೂರು-ಕಲಬುರಗಿ:

ಮಾರ್ಚ್ 15, 2024ರಂದು ಆರಂಭವಾದ ಈ ರೈಲು ಮೊದಲು ಮಿಶ್ರ ಆರಂಭ ಕಂಡಿತು. ಎಸ್ಎಂವಿಟಿ ಬೆಂಗಳೂರು-ಕಲಬುರಗಿ ಮಾರ್ಗವು 2 ತಿಂಗಳಲ್ಲೇ ಶೇ. 90 ದಾಟಿದರೆ, ಕಲಬುರಗಿ-ಎಸ್ಎಂವಿಟಿ ಬೆಂಗಳೂರು ಮಾರ್ಗವು ಮೊದಲ ತಿಂಗಳಲ್ಲಿ ಕೇವಲ ಶೇ. 42 ಆಸನ ಭರ್ತಿಯಾಗುತ್ತಿದ್ದವು. 6 ತಿಂಗಳ ಬಳಿಕ ಶೇ. 93ರಷ್ಟು ಪ್ರಯಾಣಿಕರು ಸಂಚರಿಸಲು ಆರಂಭಿಸಿದರು.

ಹುಬ್ಬಳ್ಳಿ-ಪುಣೆ:

ಸೆ. 15, 2024ರಂದು ಆರಂಭಗೊಂಡ ಹುಬ್ಬಳ್ಳಿ-ಪುಣೆ (20669) ವಂದೇ ಭಾರತ್ ರೈಲು ಏಪ್ರಿಲ್‌ನಲ್ಲಿ ಶೇ. 95.47ರಷ್ಟು ಬುಕ್ಕಿಂಗ್ ಮತ್ತು ಶೇ. 61.5ರಷ್ಟು ಆದಾಯ ಪಡೆದಿದೆ. ಪ್ರಸ್ತುತ ಮೇ ಮತ್ತು ಜೂನ್ ತಿಂಗಳಲ್ಲಿ ಶೇ. 85ರಷ್ಟು ಬುಕ್ಕಿಂಗ್, ಶೇ. 55ರಷ್ಟು ಆದಾಯ. ಜುಲೈ-ಆಗಸ್ಟ್‌ನಲ್ಲಿ ಶೇ. 65-69ರಷ್ಟು ಬುಕ್ಕಿಂಗ್ ಇಳಿಕೆಯಾಗಿದ್ದು, ಶೇ. 41-45ರಷ್ಟು ಆದಾಯ ಕಂಡಿತ್ತು. ಸೆಪ್ಟೆಂಬರ್‌ನಲ್ಲಿ ರೈಲು ಮತ್ತೆ ಸುಧಾರಣೆ ಕಂಡು ಶೇ. 71.91 ಬುಕ್ಕಿಂಗ್, ಶೇ. 46.73 ಆದಾಯ ದಾಖಲಿಸಿದೆ. ಪುಣೆ-ಹುಬ್ಬಳ್ಳಿ (20670) ವಂದೇ ಭಾರತ್ ರೈಲು ಏಪ್ರಿಲ್‌ನಲ್ಲಿ ಶೇ. 95.72 ಬುಕ್ಕಿಂಗ್, ಶೇ. 62.58 ಆದಾಯ ಕಂಡಿದೆ. ಆಗಸ್ಟ್‌ನಲ್ಲಿ ಶೇ. 86.22ರಷ್ಟು ಬುಕ್ಕಿಂಗ್, ಶೇ. 54.81 ಆದಾಯದ ಮೂಲಕ ಸ್ಥಿರ ಪ್ರದರ್ಶನ ಮುಂದುವರಿಸಿತು. ಸೆಪ್ಟೆಂಬರ್‌ನಲ್ಲಿ ಶೇ. 65.52ರಷ್ಟು ಬುಕ್ಕಿಂಗ್ ಇಳಿದಿದ್ದರೂ, ಒಟ್ಟಾರೆಯಾಗಿ ಈ ಮಾರ್ಗದ ಕಾರ್ಯಕ್ಷಮತೆ ಉತ್ತಮವಾಗಿಯೇ ಉಳಿದಿದೆ.ಉತ್ತಮ ಸ್ಪಂದನೆ

ಆ. 10ರಿಂದ ಆರಂಭವಾಗಿರುವ ಬೆಳಗಾವಿ-ಬೆಂಗಳೂರು (26751) ಮಾರ್ಗದಲ್ಲಿ ಆಗಸ್ಟ್‌ನಲ್ಲಿ 5,300 ಪ್ರಯಾಣಿಕರಿಂದ ₹69 ಲಕ್ಷ, ಸೆಪ್ಟೆಂಬರ್‌ನಲ್ಲಿ 7,491 ಪ್ರಯಾಣಿಕರಿಂದ ₹96.6 ಲಕ್ಷ ಮತ್ತು ಅಕ್ಟೋಬರ್‌ನಲ್ಲಿ 9,273 ಪ್ರಯಾಣಿಕರಿಂದ ₹1.23 ಕೋಟಿ ಆದಾಯ ಬಂದಿದೆ. ಬುಕ್ಕಿಂಗ್ ಶೇ. 55ರಿಂದ ಶೇ. 67ಕ್ಕೆ ಏರಿಕೆಯಾಗಿದೆ. ಬೆಂಗಳೂರು-ಬೆಳಗಾವಿ ಮಾರ್ಗದಲ್ಲಿ ಆಗಸ್ಟ್‌ನಲ್ಲಿ 7,970 ಪ್ರಯಾಣಿಕರಿಂದ ₹1 ಕೋಟಿ, ಸೆಪ್ಟೆಂಬರ್‌ನಲ್ಲಿ 11,100 ಪ್ರಯಾಣಿಕರಿಂದ ₹1.37 ಕೋಟಿ ಮತ್ತು ಅಕ್ಟೋಬರ್‌ನಲ್ಲಿ 11,079 ಪ್ರಯಾಣಿಕರಿಂದ ₹1.38 ಕೋಟಿ ಆದಾಯ ಗಳಿಸಿದೆ. ಬುಕ್ಕಿಂಗ್‌ ಶೇ. 80ಕ್ಕೆ ಏರಿಕೆಯಾಗಿದೆ.