ಗ್ರಾಮೀಣ ಜನರ ಸಬಲೀಕರಣಕ್ಕೆ ಧರ್ಮಸ್ಥಳ ಸಂಘದಿಂದ ಹಲವು ಕಾರ್ಯಕ್ರಮ

| Published : Dec 28 2024, 01:01 AM IST

ಗ್ರಾಮೀಣ ಜನರ ಸಬಲೀಕರಣಕ್ಕೆ ಧರ್ಮಸ್ಥಳ ಸಂಘದಿಂದ ಹಲವು ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಸಿ ತಾಲೂಕಿನ ಬನವಾಸಿ ಸಮೀಪದ ಮಧುರವಳ್ಳಿ ಗ್ರಾಮದ ನಿರ್ಗತಿಕ ಕುಟುಂಬದ ಫಲಾನುಭವಿ ಸಾವಿತ್ರಮ್ಮ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶುಕ್ರವಾರ ವಾತ್ಸಲ್ಯ ಕಿಟ್ ವಿತರಿಸಲಾಯಿತು.

ಶಿರಸಿ: ಗ್ರಾಮೀಣ ಜನರ ಸಬಲೀಕರಣಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ ಹೇಳಿದರು.

ತಾಲೂಕಿನ ಬನವಾಸಿ ಸಮೀಪದ ಮಧುರವಳ್ಳಿ ಗ್ರಾಮದ ನಿರ್ಗತಿಕ ಕುಟುಂಬದ ಫಲಾನುಭವಿ ಸಾವಿತ್ರಮ್ಮ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶುಕ್ರವಾರ ವಾತ್ಸಲ್ಯ ಕಿಟ್ ವಿತರಿಸಿ ಅವರು ಮಾತನಾಡಿದರು. ನೂರಾರು ಅಶಕ್ತ, ಅನಾಥ, ಕಡು ಬಡತನ, ದುರ್ಬಲ ಕುಟುಂಬಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಸಾಶನ ಹಾಗೂ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಗುತ್ತಿದೆ. ರಾಜ್ಯಾದ್ಯಂತ ೧೯೦೦೦ ನಿರ್ಗತಿಕರನ್ನು ಗುರುತಿಸಿ, ಅವರ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು ತಲಾ ₹೧೦೦೦ರಿಂದ ₹೫೦೦೦ ವರೆಗೆ ಮಾಸಾಶನ ನೀಡುತ್ತಿದೆ. ಉಡುಪಿ ಪ್ರಾದೇಶಿಕ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು ೫೨೫, ಜಿಲ್ಲೆಯಲ್ಲಿ ೧೬೨ ಹಾಗೂ ಶಿರಸಿ ತಾಲೂಕಿನಲ್ಲಿ ೬ ಫಲಾನುಭವಿಗಳಿಗೆ ಮಾಸಾಶನದೊಂದಿಗೆ ಪಾತ್ರೆ, ತಲೆದಿಂಬು, ಸೀರೆ, ಹೊದಿಕೆ ಸೇರಿದಂತೆ ಅವಶ್ಯಕ ವಸ್ತುಗಳನ್ನೊಳಗೊಂಡಿರುವ ವಾತ್ಸಲ್ಯ ಕಿಟ್ ವಿತರಿಸುವ ಮಹತ್ವದ ಕಾರ್ಯಕ್ರಮವನ್ನು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರು ಮಾಡುತ್ತಿದ್ದಾರೆ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಸುಧೀರ ನಾಯರ್ ಮಾತನಾಡಿ, ಗ್ರಾಮೀಣ ಭಾಗದ ಅಭ್ಯುದಯ, ಆರ್ಥಿಕ ಸಬಲತೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ, ಕೃಷಿ ಅಭಿವೃದ್ಧಿ, ಸಾಮಾಜಿಕ ಕ್ಷೇತ್ರ, ಜನರ ಜೀವನ ಮಟ್ಟ ಸುಧಾರಣೆ ಮಾಡುವುದರೊಂದಿಗೆ ಹಲವಾರು ಸಮಾಜಮುಖಿ ಚಿಂತನೆಗಳೊಂದಿಗೆ ಸರ್ವರ ಒಳಿತಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವೆ ಮಾಡುತ್ತಿದೆ ಎಂದರು.

ವಾತ್ಸಲ್ಯ ಕಿಟ್ ಸ್ವೀಕರಿಸಿದ ಮಧುರವಳ್ಳಿಯ ಸಾವಿತ್ರಮ್ಮ ಮಾತನಾಡಿ, ನಮ್ಮಂತಹ ನಿರ್ಗತಿಕ ಅನಾಥ ಬಡವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ದಾರಿದೀಪವಾಗಿದೆ ಎಂದು ಭಾವುಕರಾದರು.

ತಾಲೂಕಿನ ವ್ಯಾಪ್ತಿಯಲ್ಲಿ ಹನುಮಂತಿ, ತದ್ದಲಸೆ, ಕಲಗದ್ದೆ, ಇಸಳೂರು, ಎಕ್ಕಂಬಿ, ಮಧುರವಳ್ಳಿ ಗ್ರಾಮದಲ್ಲಿರುವ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ವಿತರಿಸಲಾಯಿತು.

ಯೋಜನಾಧಿಕಾರಿ ರಾಘವೇಂದ್ರ ನಾಯ್ಕ, ಮಹಿಳಾ ಜ್ಞಾನ ವಿಕಾಸ ಕೇಂದ್ರದ ತಾಲೂಕು ಸಮನ್ವಯ ಅಧಿಕಾರಿ ಮಲ್ಲಿಕಾ ಶೆಟ್ಟಿ, ವಲಯ ಮೇಲ್ವಿಚಾರಕ ನಾಗರಾಜ ಪಿ, ಒಕ್ಕೂಟದ ಅಧ್ಯಕ್ಷ ಯೋಗೇಂದ್ರ ನಾಯ್ಕ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ರವೀಂದ್ರ ನಾಯ್ಕ, ಸೇವಾ ಪ್ರತಿನಿಧಿ ಶಿವಾಜಿ ನಾಯ್ಕ ಇದ್ದರು.