ಕನ್ನಡಪ್ರಭ ವಾರ್ತೆ ಹುಕ್ಕೇರಿ ಕ್ಷೇತ್ರದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರಕಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಜನರು ಈ ಆರೋಗ್ಯ ಸೇವೆಗಳನ್ನು ಸಮಪರ್ಕವಾಗಿ ಬಳಸಿಕೊಂಡು ಸದೃಢ ಜೀವನ ಸಾಗಿಸಬೇಕು ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಕ್ಷೇತ್ರದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರಕಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಜನರು ಈ ಆರೋಗ್ಯ ಸೇವೆಗಳನ್ನು ಸಮಪರ್ಕವಾಗಿ ಬಳಸಿಕೊಂಡು ಸದೃಢ ಜೀವನ ಸಾಗಿಸಬೇಕು ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.

ತಾಲೂಕಿನ ಯಾದಗೂಡ, ಎಲಿಮುನ್ನೋಳಿ, ಶಿಪ್ಪೂರ ಗ್ರಾಮಗಳಲ್ಲಿ ತಲಾ ₹ 65 ಲಕ್ಷಗಳಂತೆ ಒಟ್ಟು ₹ 1.95 ಕೋಟಿ ವೆಚ್ಚದಲ್ಲಿ ಹೊಸದಾಗಿ ಮಂಜೂರಾದ ಆಯುಷ್ಮಾನ್‌ ಆರೋಗ್ಯ ಮಂದಿರಗಳ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಹಳ್ಳಿಗಳ ಜನರಿಗೆ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ದಿಸೆಯಲ್ಲಿ ಈ ನೂತನ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಇದರಿಂದ ತುರ್ತು ಸಂದರ್ಭ ಹಾಗೂ ಸ್ಥಳೀಯವಾಗಿಯೇ ಆರೋಗ್ಯ ಸೇವೆ ದೊರೆಯಲಿದೆ ಎಂದು ತಿಳಿಸಿದರು.

ಕ್ಷೇತ್ರದ ಆರೋಗ್ಯ ವಲಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹುಕ್ಕೇರಿಯಲ್ಲಿ ಪ್ರಯೋಗಾಲಯ (ಬಿಪಿಎಚ್‌ಯು), ಮತ್ತಿವಾಡ ಹಾಗೂ ಸುಲ್ತಾನಪೂರದಲ್ಲಿ ಆಯುಷ್ಮಾನ್‌ ಆರೋಗ್ಯ ಕೇಂದ್ರದ ಕಟ್ಟಡಗಳ ಕಾಮಗಾರಿ ಪ್ರಗತಿ ಹಂತದಲ್ಲಿವೆ. ನೇರಲಿ, ಬೆಲ್ಲದ ಬಾಗೇವಾಡಿ, ಬಾಡ ಗ್ರಾಮಗಳಲ್ಲಿ ಆಯುಷ್ಮಾನ್‌ ಆರೋಗ್ಯ ಮಂದಿರಗಳು ಮಂಜೂರಾಗಿದ್ದು, ಶೀಘ್ರವೇ ಕಟ್ಟಡ ಕಾಮಗಾರಿಗಳನ್ನು ಆರಂಭಿಸಲಾಗುವುದು. ಸಾರ್ವಜನಿಕ ಆರೋಗ್ಯ ಚಟುವಟಿಕೆಗಳ ವಿಕೇಂದ್ರೀಕೃತ ಯೋಜನೆಯನ್ನು ಉತ್ತೇಜಿಸುವುದು. ನೂತನ ಘಟಕಗಳು ಸಿಎಚ್‌ಸಿಗಳು ಮತ್ತು ತಾಲೂಕು ಆಸ್ಪತ್ರೆಗಳಿಗೆ ಬೆಂಬಲ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತವೆ. ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸುವುದು, ರೋಗ ಕಣ್ಗಾವಲು ಮತ್ತು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತವೆ. ಹೊಸ ಆರೋಗ್ಯ ಮಂದಿರಗಳು ಗ್ರಾಮೀಣ ಆರೋಗ್ಯ ಸೇವೆಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಜೊತೆಗೆ ಸಾರ್ವಜನಿಕ ಆರೋಗ್ಯ ನಿರ್ವಹಣೆ ಮತ್ತು ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಆರೋಗ್ಯ ಇಲಾಖೆ ಇಂಜನಿಯರಿಂಗ್‌ ಉಪವಿಭಾಗದ ಎಇಇ ಚಿದಾನಂದ ಯಾದಗೂಡೆ, ಸಹಾಯಕ ಅಭಿಯಂತರ ವಿನಾಯಕ ಅಮಾಸೆ, ಪಿಡಿಒಗಳಾದ ಉಮೇಶ ಹುಕ್ಕೇರಿ, ಅಶೋಕ ಕಂಠಿ, ಅಮ್ಮಣಗಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಸೀಮಾ ಗುಂಜಾಳ, ಡಾ.ಸಿದ್ದಣ್ಣ ಓಂಕಾರ, ಗುತ್ತಿಗೆದಾರ ಬಸವರಾಜ ಗಂಗಣ್ಣವರ, ಮುಖಂಡರಾದ ಸತ್ಯಪ್ಪ ನಾಯಿಕ, ಕೆಂಪಣ್ಣ ವಾಸೇದಾರ, ಗುರುರಾಜ ಕುಲಕರ್ಣಿ, ಭೀಮಗೌಡ ಗಿರಿಗೌಡನವರ, ಶಶಿಕಾಂತ ದೊಡ್ಡಲಿಂಗನವರ, ಮಾರುತಿ ರಾಚನ್ನವರ, ರಾಮಣ್ಣ ಜನಮಟ್ಟಿ, ಶಿವನಗೌಡ ಪಾಟೀಲ, ಅಲಗೌಡ ಪಾಟೀಲ, ಸಂತೋಷ ರುಡ್ಡಗೋಳ, ಸುಭಾಷ ಪಾತ್ರೋಟ, ಜಾವೇದ ತಹಶೀಲ್ದಾರ, ಶಂಕರ ಮರಡಿ, ದಸ್ತಗೀರ ತಹಶೀಲ್ದಾರ, ಶಿವಾಜಿ ಥಿಲಾರೆ, ಎಲ್.ವೈ.ವಾಜಂತ್ರಿ, ಮಹಾದೇವ ಜನಮಟ್ಟಿ, ಅಶೋಕ ಗಿಡ್ಡಾಳಿ, ಸಿದ್ದಪ್ಪ ಪೂಜೇರಿ, ಭೀಮಪ್ಪ ಬಾರಿಗಿಡದ ಮತ್ತಿತರರು ಉಪಸ್ಥಿತರಿದ್ದರು.