ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ವೃದ್ದಾಪ್ಯ ವೇತನ, ವಿಧವಾ ವೇತನ, ರಿಯಾಯಿತಿ ದರದಲ್ಲಿ ಬಸ್ ಪ್ರಯಾಣ ಸೇರಿದಂತೆ ಹಲವು ಯೋಜನೆಗಳನ್ನು ಸರ್ಕಾರವು ಜಾರಿಗೊಳಿಸಿದೆ ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸ್ಥಳೀಯ ಸ್ವಯಂ ಸೇವಾಸಂಸ್ಥೆಗಳ ಸಹಯೋಗದಲ್ಲಿ ಹಿರಿಯ ನಾಗರಿಕರು ನಮ್ಮ ಆಶೋತ್ತರಗಳು, ನಮ್ಮ ಯೋಗಕ್ಷೇಮ ಮತ್ತು ನಮ್ಮ ಹಕ್ಕುಗಳನ್ನು ಸ್ಥಳೀಯ ಮತ್ತು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬಲ್ಲ ಸಶಕ್ತರು’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅರವತ್ತು ವರ್ಷ ತುಂಬಿದವರೆಲ್ಲರೂ ಹಿರಿಯ ನಾಗರಿಕರಾಗಿದ್ದಾರೆ. ಜೀವನದ ಸಂಧ್ಯಾಕಾಲದಲ್ಲಿ ತಮಗೆ ಆಸರೆಯಾಗುವರೆಂಬ ಅಭಿಲಾಷೆಯಿಂದ ತಂದೆ-ತಾಯಿಯರು ಬಾಲ್ಯದಿಂದಲೂ ಮಕ್ಕಳ ಪಾಲನೆ, ಪೋಷಣೆ ಮಾಡುವುದು ಸಹಜ. ಮಕ್ಕಳು ಗೌರವ, ಆದರದಿಂದ ನಡೆಸಿಕೊಂಡರೇ ಹಿರಿಯರು ನೆಮ್ಮದಿ ಜೀವನ ನಡೆಸುತ್ತಾರೆ. ಆದರೆ ಕೆಲವರು ಹಿರಿಯರನ್ನು ಕಡೆಗಣಿಸುತ್ತಿದ್ದಾರೆ. ಇದು ಸಲ್ಲದು, ಹಿರಿಯರ ಮಾರ್ಗದರ್ಶನ ನಮಗೆ ಅವಶ್ಯವಾಗಿದೆ ಎಂದರು.
ವಯಸ್ಸಾದ ನಂತರ ಹಿರಿಯ ನಾಗರಿಕರು ಚಿಕ್ಕ ಮಕ್ಕಳಂತಾಗುತ್ತಾರೆ. ಹಿರಿಯ ನಾಗರಿಕರನ್ನು ಆರೈಕೆ ಮಾಡದೇ ವೃದ್ಧಾಶ್ರಮಕ್ಕೆ ದೂಡುತ್ತಿರುವುದು ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಹಿರಿಯರ ಪಾಲನೆ, ಪೋಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಿರಿಯ ನಾಗರಿಕರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹತ್ತು-ಹಲವು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರು 20 ಅಂಶಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಹಿರಿಯ ನಾಗರಿಕರಿಗೆ ನೆರವಾಗಿದ್ದರು ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಮಕ್ಕಳನ್ನು ಈ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಲು ಹಗಲು-ರಾತ್ರಿಯನ್ನದೇ ಶ್ರಮಿಸುವ ತಂದೆ-ತಾಯಿಗಳನ್ನು ಕಡೆಗಣಿಸುವುದು ತರವಲ್ಲ. ಎಲ್ಲಾ ಮಕ್ಕಳನ್ನು ಯಾವುದೇ ಬೇಧವಿಲ್ಲದೇ ಒಂದೇ ರೀತಿ ನೋಡುವ ಹಿರಿಯರ ಬಗ್ಗೆ ಮನಸ್ಸಿನಲ್ಲಿ ಗೌರವ ಇದ್ದರೆ ಸಾಲದು, ಕೊನೆಗಾಲದಲ್ಲಿ ಅವರನ್ನು ಪ್ರೀತಿ, ವಾತ್ಸಲ್ಯದಿಂದ ನೋಡದೇ ವೃದ್ದಾಶ್ರಮಕ್ಕೆ ದೂಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಇದು ಸರಿಯಲ್ಲ. ಇದನ್ನು ಮನಗಂಡಿರುವ ಸರ್ಕಾರವು ಹಿರಿಯ ನಾಗರಿಕರ ಶ್ರೇಯೋಭಿವೃದ್ದಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸರ್ಕಾರವು ಗುರುತಿನ ಚೀಟಿ ನೀಡಿದೆ. ಪ್ರತಿ ತಾಲೂಕಿಗೂ 1 ಅಥವಾ 2 ವೃದ್ಧಾಶ್ರಮ ತೆರೆದು ಉಚಿತ ಊಟ, ವಸತಿಯೊಂದಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಸೌಲಭ್ಯ ನೀಡುತ್ತಿದೆ. ಸರ್ಕಾರಿ ಬಸ್, ರೈಲು, ವಿಮಾನದಲ್ಲಿ ರಿಯಾಯಿತಿ ದರದಲ್ಲಿ ಪ್ರಯಾಣ ಸೇರಿದಂತೆ ರಾಜ್ಯದ ಕೆಲ ಜಿಲ್ಲಾಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ 10 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿಯೂ ಇಂತಹ ವ್ಯವಸ್ಥೆ ಆಗಬೇಕು. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.ಸರ್ಕಾರವು ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ಮೀಸಲು ಆಸನ ವ್ಯವಸ್ಥೆ ಮಾಡಿದೆ. ಅಲ್ಲದೆ ವೃದ್ದಾಪ್ಯ ವೇತನವನ್ನು 800 ರಿಂದ 1200 ರು.ಗಳಿಗೆ ಹೆಚ್ಚಿಸಿದೆ. ಠೇವಣಿ ಇಡುವ ಹಣಕ್ಕೆ ಹೆಚ್ಚಿನ ಬಡ್ಡಿದರವನ್ನು ಬ್ಯಾಂಕುಗಳು ನೀಡುತ್ತಿವೆ. ಹಿರಿಯ ನಾಗರಿಕರು ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ಚುಡಾ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ ಮಾತನಾಡಿ, ಯಾವುದೇ ಒಳ್ಳೆಯ ಕೆಲಸವಿರಲಿ, ಮನೆಯ ಹಿರಿಯರ ಕಾಲಿಗೆ ನಮಸ್ಕರಿಸಿ ಮುನ್ನೆಡೆಯುವುದು, ಹಿರಿಯರ ಪಾದಪೂಜೆ ಮಾಡುವುದು ನಮ್ಮ ದೇಶದ ಪ್ರಾಚೀನ ಸಂಪ್ರದಾಯವಾಗಿದೆ. ಹಿರಿಯರು ಇರುವ ಮನೆ ಸ್ವರ್ಗಕ್ಕೆ ಸಮಾನವಾಗಿದೆ. ಬದಲಾದ ಇಂದಿನ ಕಾಲಘಟ್ಟದಲ್ಲಿ ಹಿರಿಯರನ್ನು ಅನಾಥಶ್ರಮಗಳಿಗೆ ಸೇರಿಸುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ಹಿರಿಯರ ಹಾದಿ ನಮಗೆ ಮಾರ್ಗದರ್ಶನವಾಗಿದೆ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯ ನಾಗರಿಕರಾದ ನಾದಸ್ವರ ನುಡಿಸುವ ಕಿಲಗೆರೆ ಗ್ರಾಮದ ಚೌಡಯ್ಯ ಹಾಗೂ ಶತಾಯುಷಿ ಮಸಗಾಪುರದ ದೀನ ಮಣಿಯಮ್ಮ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಹಿರಿಯ ನಾಗರಿಕರಿಗಾಗಿ ಆಯೋಜಿಸಿದ್ದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಚ್.ಆರ್. ಸುರೇಶ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಡಾ. ಮಂಜುನಾಥ್, ಜಿಲ್ಲಾ ವಿಕಲಚೇತನರ ಸಂಘದ ಅಧ್ಯಕ್ಷರಾದ ರಮೇಶ್, ಹಿರಿಯ ನಾಗರಿಕರ ಸಂಘದ ಜಿಲ್ಲಾಧ್ಯಕ್ಷ ಪದ್ಮಾಕ್ಷಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))