ಸಾರಾಂಶ
ಕೊಪ್ಪಳ: ಮಹಿಳಾ ಸಬಲೀಕರಣಕ್ಕೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಇದು ಮಹಿಳಾ ಯುಗ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಶಾಲಾ- ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಬೇಟಿ ಬಚಾವೋ ಬೇಟಿ ಪಢಾವೋ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ, ಶಕ್ತಿ ಯೋಜನೆಯಂತಹ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇದರಿಂದ ಮಹಿಳೆಯರಿಗೆ ಬಹಳಷ್ಟು ಅನುಕೂಲವಾಗಿದೆ. ಮಹಿಳೆಯರು ಸ್ವತಂತ್ರವಾಗಿ ಜೀವನ ನಡೆಸಿದಾಗ ಅವರಿಗೆ ನಿಜವಾದ ಸ್ವಾತಂತ್ರ‍್ಯ ಸಿಗುತ್ತದೆ ಎಂದು ಹೇಳಿದರು.ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಎಸ್. ದರಗದ ಮಾತನಾಡಿ, ಬೇಟಿ ಬಚಾವೋ ಬೇಟಿ ಪಢಾವೋ ಕಾರ್ಯಕ್ರಮ ಕಳೆದ 10 ವರ್ಷಗಳಿಂದ ಇದೆ. ಇದರಿಂದ ಮಹಿಳೆಯರಿಗೆ ಅನುಕೂಲವಾಗಿದೆ. ನಮ್ಮ ಸಮಾಜದಲ್ಲಿ ಹೆಣ್ಣು ಮಗು ಬೇಡ ಗಂಡು ಮಗು ಬೇಕು ಎಂಬ ಅಭಿಪ್ರಾಯ ಇದೆ. ಇಲ್ಲಿ ಇಬ್ಬರ ಪಾತ್ರವೂ ಬಹಳ ಮುಖ್ಯ. ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಬೇಕು ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ನಮ್ಮ ದೇಶ ಉಜ್ವಲವಾಗಿ ಬೆಳೆಯಬೇಕಾದರೆ ಮಹಿಳೆ ಅಥವಾ ತಾಯಿಯ ಪಾತ್ರ ಬಹಳ ಮುಖ್ಯ ಇದೆ. ಅನೇಕ ಮಹಿಳೆಯರು ದೇಶಕ್ಕಾಗಿ ತ್ಯಾಗ, ಬಲಿದಾನಗಳನ್ನು ಮಾಡಿದ್ದಾರೆ. ವೀರರಾಣಿ ಕಿತ್ತೂರು ಚೆನ್ನಮ್ಮ. ಓನಕೆ ಓಬವ್ವ ಸೇರಿದಂತೆ ಹಲವಾರು ಮಹಿಳಾ ಹೋರಾಟಗಾರರನ್ನು ನಾವು ಕಾಣುತ್ತೇವೆ. ತಾಯಿ ಕಲಿತರೆ ಇಡೀ ಕುಟುಂಬ ಕಲಿಯುತ್ತದೆ. ಹಾಗಾಗಿ ಮಹಿಳೆಯರು ಶಿಕ್ಷಣ ಪಡೆಯುವುದು ಅತ್ಯವಶ್ಯಕ. ಯಾವ ದೇಶದಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ನೀಡುವುದಿಲ್ಲವೋ ಆ ದೇಶ ಮುಂದೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು.ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವೀಂದ್ರನಾಥ ಅವರು, ಹೆಣ್ಣು ಭ್ರೂಣಲಿಂಗ ಹತ್ಯೆಯಿಂದಾಗುವ ದುಷ್ಪರಿಣಾಮ ಕುರಿತು ವಿಶೇಷ ಉಪನ್ಯಾಸ ನೀಡಿದರು. ಯುನಿಸೆಫ್ ಸಂಯೋಜಕ ಹರೀಶ್ ಜೋಗಿ ಬಾಲ್ಯವಿವಾಹ ತಡೆಗಟ್ಟುವ ಕುರಿತು ಮಾತನಾಡಿದರು.
ಬೇಟಿ ಬಚಾವೋ ಬೇಟಿ ಪಢಾವೋ ಅಭಿಯಾನದ ಸಹಿ ಸಂಗ್ರಹಣೆಗೆ ಜಿಲ್ಲಾಧಿಕಾರಿ ಚಾಲನೆ ನೀಡಿದರು. ಅಂಗನವಾಡಿ ಚಿಣ್ಣರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಲಗೇರಿ 3ನೇ ಅಂಗನವಾಡಿ ಕೇಂದ್ರದ ಮಗು ಪ್ರತಿಕ್ಷಾ ಸಂವಿಧಾನ ಪೀಠಿಕೆಯ ಓದುವ ಮೂಲಕ ಎಲ್ಲರ ಗಮನ ಸೆಳೆದಳು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ವೈ. ಶೆಟ್ಟೆಪ್ಪನವರ, ಜಿಲ್ಲಾ ನಿರೂಪಣಾಧಿಕಾರಿ ಗಂಗಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಅನ್ನಪೂರ್ಣಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತ ಪೂಜಾರ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಅನಿತಾ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ಅಂಗನವಾಡಿ ಕೇಂದ್ರಗಳ ಮಕ್ಕಳು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಜಾಥಾಕ್ಕೆ ಚಾಲನೆ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಿದರು. ಈ ಜಾಥಾ ಜಿಲ್ಲಾಡಳಿತ ಭವನದ ಆವರಣದಿಂದ ಜಿಲ್ಲಾ ಆಸ್ಪತ್ರೆ ವರೆಗೆ ನಡೆಯಿತು. ಇದರಲ್ಲಿ ವಿವಿಧ ಶಾಲಾ-ಕಾಲೇಜುಗಳ ವಿಧ್ಯಾರ್ಥಿನಿಯರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.