ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿಶ್ವದ ಗಮನ ಸೆಳೆದಿರುವ ಕೊಡವ ಕೌಟುಂಬಿಕ ಹಾಕಿ ಈ ಬಾರಿ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಚೇನಂಡ ಕುಟುಂಬದ ಮುಂದಾಳತ್ವದಲ್ಲಿ ನಡೆಯುತ್ತಿದ್ದು, ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.

ಈ ಬಾರಿ ಹಾಕಿ ಉತ್ಸವದಲ್ಲಿ ಸುಮಾರು 383 ತಂಡಗಳು ನೋಂದಣಿ ಮಾಡಿಕೊಂಡಿದ್ದು, ಕೊಡವ‌ ಕೌಟುಂಬಿಕ ಹಾಕಿ ಉತ್ಸವದ ಇತಿಹಾಸದಲ್ಲಿ ಅತಿ ಹೆಚ್ಚು ತಂಡಗಳು ಪಾಲ್ಗೊಂಡ ಎರಡನೇ ಉತ್ಸವ ಇದಾಗಿದೆ.

ಕೊಡವ ಕುಟುಂಬಗಳು ಒಗ್ಗಟ್ಟಾಗಿರಬೇಕೆಂಬ ನಿಟ್ಟಿನಲ್ಲಿ ಪಂದ್ಯದಲ್ಲಿ ಪಾಲ್ಗೊಂಡ ಎಲ್ಲ ತಂಡಗಳಿಗೂ ಜೇನು ಪೆಟ್ಟಿಗೆ ನೀಡುವ ಮೂಲಕ ಜೇನು ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ.


ಏ. 5ರಂದು ಚೇನಂಡ ಹಾಕಿ ಉತ್ಸವಕ್ಕೆ ಚಾಲನೆ ದೊರೆತಿದ್ದು, ಈಗಾಗಲೇ ಮೂರು ಮೈದಾನದಲ್ಲಿ ಸುಮಾರು 120ಕ್ಕೂ ಅಧಿಕ ಪಂದ್ಯಗಳು ನಡೆದಿವೆ. 450ಕ್ಕೂ ಅಧಿಕ ಗೋಲುಗಳು ದಾಖಲಾಗಿವೆ. ಇದಲ್ಲದೆ ಕಾಫಿ ಹಾಗೂ ಜೇನು ಕೃಷಿ ಬಗ್ಗೆ ಉಪನ್ಯಾಸ, ಒಂದು ಗೋಲಿಗೆ ಒಂದು ಗಿಡ ನೆಡುವ ಕಾರ್ಯಕ್ರಮ, ಶಾಲಾ‌ ಮಕ್ಕಳಿಗೆ ಕೊಡವ ಸಾಂಪ್ರದಾಯಿಕ ಆಟ್ ಪಾಟ್ ಪಡಿಪು ಕಾರ್‍ತಕ್ರಮದಲ್ಲಿ ಉಮ್ಮತ್ತಾಟ್, ಬೊಳಕಾಟ್, ಬಾಳೋಪಾಟ್ ತರಬೇತಿ ನೀಡಿ ಅದನ್ನು ಮೈದಾನದಲ್ಲಿ ಪ್ರದರ್ಶನ ಆಯೋಜಿಸಲು ಸಿದ್ಧತೆ ಮಾಡಲಾಗುತ್ತಿದೆ.

ಮೈದಾನದಲ್ಲಿ ಕೊಡವ ಕೌಟುಂಬಿಕ ಹಾಕಿಯ ಜನಕ ಪಾಂಡಂಡ ಕುಟ್ಟಣಿ ಕುಟ್ಟಪ್ಪ ಅವರ ಪುತ್ಥಳಿ ಅನಾವರಣ ಮಾಡಲಾಗಿದೆ.

ಚೇನಂಡ ಹಾಕಿ ನಮ್ಮೆಯ ಅಂಗವಾಗಿ ಈಗಾಗಲೇ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಮೂರ್ನಾಡು ಶಾಲಾ ಮೈದಾನದಲ್ಲಿ ಇದೇ ಮೊದಲ ಬಾರಿಗೆ ನಡೆದ ಪಂದ್ಯಾವಳಿಯಲ್ಲಿ ಒಟ್ಟು 33 ಶಾಲಾ ತಂಡಗಳು ಪಾಲ್ಗೊಂಡಿದ್ದವು.

ಈ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 30 ಬಾಲಕ, ಬಾಲಕಿಯರನ್ನು ಈಗಾಗಲೇ ಆಯ್ಕೆ ಮಾಡಲಾಗಿದ್ದು, ಇವರಿಗೆ ಪಂದ್ಯಾವಳಿ ನಡೆಯುವ ಸಂದರ್ಭ ಊಟೋಪಚಾರದ ಜತೆ ನುರಿತ ಎನ್‌ಐಎ ತರಬೇತುದಾರರಿಂದ ಹಾಕಿ ತರಬೇತಿ ನೀಡಲಾಗುತ್ತದೆ.

ಪಂದ್ಯಾವಳಿ ಸಂದರ್ಭ ತರಬೇತಿ ಪಡೆಯುವ 30 ವಿದ್ಯಾರ್ಥಿಗಳ ಪೈಕಿ 12 ಮಂದಿಯನ್ನು ಆಯ್ಕೆ ಮಾಡಿ ಅವರಿಗೆ ಸಂಪೂರ್ಣ ಹಾಕಿ ಕಿಟ್ ಒದಗಿಸುವ ಜತೆಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಅವರ ಸಹಕಾರದೊಂದಿಗೆ ಕ್ರೀಡಾ ವಸತಿ ನಿಲಯಕ್ಕೆ ಸೇರ್ಪಡೆಗೊಳಿಸುವ ಉದ್ದೇಶ ಹೊಂದಲಾಗಿದೆ......ಬಾಕ್ಸ್ ....

ಚೇನಂಡ ಕುಟುಂಬ ಮತ್ತು ಪಾಪುಲಿ ಎತ್ತು

ಕೊಡಗಿನ ಎಲ್ಲೆಡೆಯಿಂದ ಪ್ರತಿ ವರ್ಷ ಬೈತೂರು ದೇವಾಲಯಕ್ಕೆ ಹೋಗುವುದು ವಾಡಿಕೆ. ಆದರೆ ಕಡಿಯತ್‌ನಾಡಿನವರು ಮಾತ್ರ ಕೇರಳದ ಪೈಯಾವೂರಿಗೆ ತೆರಳುತ್ತಾರೆ. ಎತ್ತುಗಳನ್ನು ಮತ್ತು ನೈವೇದ್ಯಕ್ಕಿರುವ ಅಕ್ಕಿಯನ್ನು ದೇವಸ್ಥಾನಕ್ಕೆ ಕೊಂಡೊಯ್ಯುತ್ತಾರೆ.

ಚೇನಂಡ ಕುಟುಂಬದ ಮೂಲ ಪುರುಷ ಉತ್ತಯ್ಯ ಅವರು ದನ ಕರುಗಳನ್ನು ಸಾಕುತ್ತಿದ್ದರು. ಒಂದು ಬಾರಿ ಉತ್ತಯ್ಯ ಅವರು ಸಂಪ್ರದಾಯದಂತೆ 35 ಎತ್ತುಗಳನ್ನು ಪೈಯ್ಯಾವೂರಿಗೆ ಹೊಡೆದುಕೊಂಡು ಹೋಗಿದ್ದರು. ಪಾಪುಲಿ ಎತ್ತಿನ ಬೆನ್ನಲ್ಲಿ ನೈವೇದ್ಯದ ಅಕ್ಕಿ ಕಟ್ಟಿ ದೇವಸ್ಥಾನಕ್ಕೆ ಹೊರಟ ಉತ್ತಯ್ಯ ದೇವರ ದರ್ಶನ ಮಾಡಿ 2 ದಿನ ಕಳೆದು ಹಿಂದಿರುಗಿ ಬರುವಾಗ ಬಣ್ಣಾಯಿ ಕಡವು ಎಂಬಲ್ಲಿ ವಿಶ್ರಾಂತಿ ಪಡೆದು ಅಲ್ಲಿಂದ ಹೊರಟರು. ಆಗ ಕರೆದುಕೊಂಡು ಹೋಗಿದ್ದ ಎತ್ತುಗಳ ಪೈಕಿ ಪಾಪುಲಿ ಕಾಣೆಯಾಗಿತ್ತು. ಈ ಸಂದರ್ಭ ಪಕ್ಕದ ಹೊಳೆಯಲ್ಲಿ ಸ್ಥಾನ ಮಾಡಿ ಪಾಪುಲಿ ಸಿಕ್ಕರೇ ಅಂಜಿಕೂಟು ಮೂರ್ತಿಯ ಜತೆ ಎತ್ತು ತೆರೆ ಕಟ್ಟುತ್ತೇವೆಂದು ಊರ ದೇವರು ಮತ್ತು ಪೈಯ್ಯಾವೂರು ದೇವರಿಗೆ ಹರಿಕೆ ಹೊತ್ತರು.

ಇದಾಗಿ ಉತ್ತಯ್ಯ ಮನೆ ತಲುಪಿದ ಬಳಿಕ ಹುಲಿ ದಾಳಿಗೆ ಸಿಲುಕಿ ಸಂಪೂರ್ಣ ಗಾಯಗೊಂಡ ಸ್ಥಿತಿಯಲ್ಲಿ ಬಂದ ಪಾಪುಲಿ ಮನೆಯ ಅಂಗಳದಲ್ಲಿ ಬಂದು ಕೊನೆಯುಸಿರೆಳೆಯಿತು. ಅಂದಿನಿಂದ ಕುಟುಂಬಸ್ಥರು ಈ ಪಾಪುಲಿಯಲ್ಲಿ ಗುರುಕಾರೋಣರನ್ನು ಕಾಣುತ್ತಾರೆ. 2 ವರ್ಷಕ್ಕೊಮ್ಮೆ ಜುಲೈ ತಿಂಗಳ ಮೊದಲವಾರ ಚೇನಂಡ ಕುಟುಂಬದಿಂದ ಎತ್ತು ತೆರೆ ಕಟ್ಟಲಾಗುತ್ತದೆ.

ಕೊಡವ ಸಮುದಾಯಕ್ಕೆ ತನ್ನದೇ ಆದ ಲಾಂಛನವಿದೆ. ಹಾಕಿ ಉತ್ಸವಕ್ಕೆ ಒಂದೊಂದು ಕುಟುಂಬಗಳು ತಮ್ಮ ಲಾಂಛನ ಸಿದ್ಧಪಡಿಸುತ್ತವೆ. ಆದರೇ ಕುಟುಂಬಕ್ಕೆಂದು ಮೊದಲಿಗೆ ಲಾಂಛನ ಸಿದ್ಧಪಡಿಸಿರುವ ಕುಟುಂಬ ಚೇನಂಡ.

ಪವಿತ್ರ ಎತ್ತು ಪಾಪುಲಿಯಯನ್ನು ತಮ್ಮ ಲಾಂಛನವಾಗಿಸಿಕೊಳ್ಳಲಾಗಿದ್ದು, ಗೋಧೂಳಿ ಸಮಯದಲ್ಲಿ ಹುಲಿಯೊಂದಿಗೆ ಹೋರಾಟಕ್ಕೆ ಸಿದ್ಧವಾಗಿರುವ ಎತ್ತಿನ ಆಕಾರವನ್ನು ಲೋಗೋದಲ್ಲಿ ಬಳಸಿಕೊಳ್ಳಲಾಗಿದೆ.

ಚೇನಂಡ ಹಾಕಿ ನಮ್ಮೆಗೂ ತಮ್ಮ ಕುಟುಂಬದ ಲೋಗೊ ಒಳಗೊಂಡ ಲಾಂಛನ ವಿನ್ಯಾಸಗೊಳಿಸಲಾಗಿದ್ದು, ಹಾಕಿ ಫಾರ್ವರ್ಡ್ ಆಟಗಾರರ ಬದಲು ಗೋಲ್ ಕೀಪರ್ ಒಳಗೊಂಡಿರುವುದು ಹಾಕಿ ನಮ್ಮೆ 2026ರ ಲೋಗೋ ವಿಶೇಷ.ಚೇನಂಡ ಹಾಕಿ ಉತ್ಸವದ ಅಂಗವಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಶಾಲಾ‌ ಮಕ್ಕಳಿಗೆ ಆಟ್ ಪಾಟ್ ಪಡಿಪು ವಿಶೇಷ ತರಬೇತಿ ಮೂಲಕ ಕೊಡವ ಸಾಂಪ್ರದಾಯಿಕ ನೃತ್ಯಗಳಾದ ಬಾಳೋಪಾಟ್, ಬೊಳಕಾಟ್, ಉಮ್ಮತ್ತಾಟ್ ಮತ್ತಿತರ ನೃತ್ಯ ತರಬೇತಿ ನೀಡಲಾಗುತ್ತಿದ್ದು, ಕೊಡವ ಸಂಪ್ರದಾಯ ಉಳಿಸಿ ಬೆಳೆಸಲಾಗುತ್ತಿದೆ.

-ಚೇನಂಡ ಮಧು ಮಾದಯ್ಯ, ಕಾರ್ಯದರ್ಶಿ

ಹಾಕಿ ಉತ್ಸವದಲ್ಲಿ ಕ್ರೀಡೆಗೆ ಮಾತ್ರ ಸೀಮಿತವಾಗದೆ ಹಲವು ಉಪಯುಕ್ತ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ವಿಶೇಷವಾಗಿ ಕಾಫಿ ಬಗ್ಗೆ ಏ.12ರಂದು ಕಾಫಿ ಮಂಡಳಿ ಸಹಕಾರದಲ್ಲಿ ಉಪನ್ಯಾಸ ನಡೆಸಲಾಗುತ್ತಿದ್ದು, ಜಿಲ್ಲೆಯ ಕಾಫಿ ಬೆಳೆಗಾರರಿಗೆ ಅನುಕೂಲವಾಗಲಿದೆ.

-ಚೇನಂಡ ಅಜಿತ್ ಪೂಣಚ್ಚ, ನಿರ್ದೇಶಕರು ..

ಹಾಕಿ ಉತ್ಸವದ ಅಂಗವಾಗಿ ಕೊಡವ ಕುಟುಂಬಗಳಿಗೆ ರಿಲೇ ಓಟದ ಸ್ಪರ್ಧೆ, ಮಹಿಳೆಯರಿಗೆ ಹಾಕಿ, ಕಕ್ಕಬೆಯಿಂದ ನಾಪೋಕ್ಲಿನವರೆಗೆ ಮ್ಯಾರಥಾನ್, ಒಂದು ಗೋಲಿಗೆ ಒಂದು ಗಿಡ ನೆಡುವ ಕಾರ್ಯಕ್ರಮ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

-ಚೇನಂಡ ಸುರೇಶ್ ನಾಣಯ್ಯ, ವಕ್ತಾರರು