ಕನ್ನಡಪ್ರಭ ವಾರ್ತೆ ಮಂಡ್ಯ
ಹೆಣ್ಣು ಭ್ರೂಣ ಹತ್ಯೆಯಲ್ಲಿ ತೊಡಗಿರುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತಹ ಕಾನೂನುಗಳು ಜಾರಿಯಲ್ಲಿದ್ದರೂ ಅವುಗಳು ಪರಿಣಾಮಕಾರಿಯಾಗಿ ಜಾರಿಯಾಗದಿರುವುದರಿಂದ ಭ್ರೂಣ ಹಂತದಲ್ಲೇ ಹೆಣ್ಣನ್ನು ಕೊಲ್ಲಲಾಗುತ್ತಿದೆ ಎಂದು ಮಹಾರಾಜ ತಾಂತ್ರಿಕ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಟಿ.ಉಷಾರಾಣಿ ವಿಷಾದಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಲೇಖಕಿಯರ ಸಮ್ಮೇಳನದಲ್ಲಿ ಸಮಕಾಲೀನ ತಲ್ಲಣಗಳು ವಿಷಯದ ಕುರಿತ ಗೋಷ್ಠಿಯಲ್ಲಿ ಸಾಮಾಜಿಕ ಸಮಸ್ಯೆಯಾಗಿ ಹೆಣ್ಣು ಭ್ರೂಣ ಹತ್ಯೆ ಕುರಿತು ಮಾತನಾಡಿದರು.
ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಮಂಡ್ಯದಲ್ಲಿ ಸಾಕಷ್ಟು ವರದಿಯಾದರೂ ಯಾರೊಬ್ಬರಿಗೂ ಶಿಕ್ಷೆಯಾದ ಉದಾಹರಣೆಗಳೇ ಇಲ್ಲ. ಭ್ರೂಣ ಹತ್ಯೆ ತಡೆಗೆ ಕಾನೂನುಗಳು ಕಠಿಣವಾಗಿದ್ದರೂ ಅವುಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಪಾಂಡವಪುರದ ಆಲೆಮನೆಯೊಂದರಲ್ಲಿ ನಡೆದ ಹೆಣ್ಣು ಭ್ರೂಣ ಹತ್ಯೆಕೋರರಿಗೆ ಇದುವರೆಗೂ ಶಿಕ್ಷೆಯಾಗಲೇ ಇಲ್ಲ. ಭ್ರೂಣ ಹತ್ಯೆ ಸಮಯದಲ್ಲಿ ಅದೆಷ್ಟೋ ಹೆಣ್ಣು ಮಕ್ಕಳು ಸಾವಿಗೀಡಾದರೂ ಅವು ಬೆಳಕಿಗೆ ಬರಲೇ ಇಲ್ಲ ಎಂದು ಬೇಸರದಿಂದ ನುಡಿದರು.೨೦೦೦ದಿಂದ ೨೦೨೧ರವರೆಗೆ ಹೆಣ್ಣು ಭ್ರೂಣ ಹತ್ಯೆಯ ಪ್ರಮಾಣ ಹೆಚ್ಚಾಗಿತ್ತು. ಆ ಸಮಯದಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ ೮೭೬ ಹೆಣ್ಣು ಮಕ್ಕಳಿದ್ದರು. ಆನಂತರದಲ್ಲಿ ಹೆಣ್ಣು ಭ್ರೂಣ ಹತ್ಯೆಯ ಪ್ರಮಾಣ ಮಂಡ್ಯದಲ್ಲಿ ಕಡಿಮೆಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ೧೦೦೦ ಗಂಡುಮಕ್ಕಳಿಗೆ ೯೩೬ ಹೆಣ್ಣು ಮಕ್ಕಳಿರುವುದು ಕಂಡುಬಂದಿದೆ. ಹೆಣ್ಣು ಭ್ರೂಣ ಹತ್ಯೆಯ ಪ್ರಮಾಣ ಕಡಿಮೆಯಾಗಿರುವುದು ಸಮಾಧಾನಕರ ಸಂಗತಿ ಎಂದರು.
ತಾಯಿಯಾಗಿ ಹೆಣ್ಣು ಬೇಕು, ಹೆಂಡತಿಯಾಗಿ ಹೆಣ್ಣು ಬೇಕು. ಆದರೆ, ಮಗಳಾಗಿ ಹೆಣ್ಣು ಬೇಡ ಎಂಬ ಮನೋಭಾವ ಸಮಾಜದಿಂದ ದೂರವಾಗಬೇಕು. ಗಂಡು ವಂಶೋದ್ಧಾರಕ. ಮರಣದ ಬಳಿಕ ಗಂಡು ಮಗನಿಂದ ಅಂತ್ಯಕ್ರಿಯೆ ನಡೆಸಿಕೊಂಡರೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ಕೊನೆಗಾಲದಲ್ಲಿ ನಮಗೆ ಆಸರೆಯಾಗುತ್ತಾನೆಂಬ ಭಾವನೆ ಹಲವರಲ್ಲಿದೆ. ಹೆಣ್ಣು ಭ್ರೂಣ ಹತ್ಯೆಗೂ ಇದೇ ಕಾರಣವಾಗಿದೆ. ಹೆಣ್ಣು ಹುಟ್ಟಿದರೆ ಹೊರೆ ಜಾಸ್ತಿ ಎನ್ನುವವರೂ ಹೆಚ್ಚಾಗಿದ್ದಾರೆ. ಎರಡರಿಂದ ಮೂರು ಹೆಣ್ಣು ಮಕ್ಕಳು ಹುಟ್ಟಿದ ಮೇಲೂ ಹೆಣ್ಣಾದರೆ ಅದನ್ನು ಕೊಲ್ಲುವ ಮನಸ್ಥಿತಿಯೂ ಜನರಲ್ಲಿದೆ. ಈ ಮನೋಭಾವ ದೂರವಾಗಬೇಕು. ಹೆಣ್ಣನ್ನು ಗಂಡಿನಷ್ಟೇ ಸಮಾನವಾಗಿ ಕಾಣುವ ಮನಸ್ಥಿತಿ ಎಲ್ಲರಲ್ಲೂ ಬೆಳೆಯಬೇಕು ಎಂದರು.
ಮೂರು ವರ್ಷದ ಮಗುವಿನಿಂದಲೇ ಲೈಂಗಿಕ ಜ್ಞಾನ ಬೆಳೆಸಿ: ಡಾ.ಕುಮುದಿನಿ
ಕನ್ನಡಪ್ರಭ ವಾರ್ತೆ ಮಂಡ್ಯಮೂರು ವರ್ಷದ ಮಗುವಿನಿಂದಲೇ ಲೈಂಗಿಕ ಜ್ಞಾನವನ್ನು ಮಕ್ಕಳಲ್ಲಿ ಬೆಳೆಸುವುದು ತುಂಬಾ ಅಗತ್ಯವಿದೆ ಎಂದು ಮೈಸೂರು ಜೆಎಸ್‌ಎಸ್ ಕಾಲೇಜಿನ ಪ್ರಾಧ್ಯಾಪಕಿ ಡಾ.ಕುಮುದಿನ ಅಚ್ಚಿ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಲೇಖಕಿಯರ ಸಮ್ಮೇಳನದಲ್ಲಿ ಸಮಕಾಲೀನ ತಲ್ಲಣಗಳು ವಿಷಯದ ಕುರಿತ ಗೋಷ್ಠಿಯಲ್ಲಿ ಹದಿಹರೆಯದ ಹೆಣ್ಣು ಮಕ್ಕಳ ಸಮಸ್ಯೆಗಳ ಕುರಿತು ಮಾತನಾಡಿದರು.ಮಕ್ಕಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಅರಿವು ಮೂಡಿಸುವಲ್ಲಿ ಪೋಷಕರು, ಶಿಕ್ಷಕರು ವಿಫಲರಾಗಿದ್ದಾರೆ. ಪೋಷಕರು ದುಡಿಮೆಯಲ್ಲಿ ನಿರತರಾಗಿದ್ದರೆ, ಶಿಕ್ಷಕರು ಪಠ್ಯವಿಷಯಗಳಿಗಷ್ಟೇ ಮಕ್ಕಳನ್ನು ಸೀಮಿತಗೊಳಿಸಿದ್ದಾರೆ. ಅವರಿಗೆ ಲೈಂಗಿಕ ಜ್ಞಾನದ ಬಗ್ಗೆ ಅರಿವು ಮೂಡಿಸುವವರೇ ಇಲ್ಲವಾಗಿದೆ. ಅದಕ್ಕಾಗಿ ಪ್ರತಿ ಐದು ಶಾಲೆಗಳಿಗೆ ಒಬ್ಬರಂತೆ ಲೈಂಗಿಕ ಶಿಕ್ಷಣ ತರಬೇತುದಾರರನ್ನು ನೇಮಿಸಿಕೊಂಡು ವಾರದಲ್ಲಿ ಒಂದು ಅಥವಾ ಎರಡು ದಿನ ಮಕ್ಕಳಿಗೆ ಲೈಂಗಿಕ ಜ್ಞಾನದ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಅದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಸಂಪೂರ್ಣ ಉಚಿತವಾಗಿ ನೀಡಲು ನಾನು ಸಿದ್ಧಳಿದ್ದೇನೆ ಎಂದು ಭರವಸೆ ನೀಡಿದರು.
ಹೆಣ್ಣು ಮಕ್ಕಳು ಮನೆಯಲ್ಲಿ ಕುಟುಂಬದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಆಗ ಯಾರೂ ನಿಮ್ಮನ್ನು ಕಡೆಗಣಿಸುವುದಿಲ್ಲ. ಸಾಮಾನ್ಯವಾಗಿ ಮನೆಗಳಲ್ಲಿ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಿಗೆ ವಿಶೇಷವಾದ ಸ್ಥಾನಮಾನಗಳಿರುತ್ತವೆ. ಅದರ ನಡುವೆಯೂ ಹೆಣ್ಣು ಗಂಡಿಗಿಂತ ಕಡಿಮೆಯಿಲ್ಲ ಎನ್ನುವುದನ್ನು ಸಾಬೀತುಪಡಿಸಿಕೊಳ್ಳುವಂತೆ ಸಲಹೆ ನೀಡಿದರು.