ಕುಟುಂಬಸ್ಥರು ನಡೆಸಿದ್ದ ಮರ್ಯಾದೆಗೇಡು ಭೀಕರ ಹತ್ಯೆಯು ನಾಗರಿಕ ಸಮಾಜಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ
ಹೊಸಪೇಟೆ: ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರದಲ್ಲಿ ಅನ್ಯ ಜಾತಿಯ ಯುವಕನನ್ನು ಮದುವೆಯಾಗಿದ್ದಕ್ಕೆ ಏಳು ತಿಂಗಳು ಗರ್ಭಿಣಿಯಾಗಿದ್ದ ಮಾನ್ಯಾ ಪಾಟೀಲ ಮೇಲೆ ಸ್ವತಃ ತಂದೆ ಹಾಗೂ ಕುಟುಂಬಸ್ಥರು ನಡೆಸಿದ್ದ ಮರ್ಯಾದೆಗೇಡು ಭೀಕರ ಹತ್ಯೆಯು ನಾಗರಿಕ ಸಮಾಜಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಈ ಅಮಾನವೀಯ ಹತ್ಯೆ ಪ್ರಕರಣವನ್ನು ಡಿವೈಎಫ್ಐ, ಎಸ್ಎಫ್ಐ, ಎಐಡಿಡಬ್ಲ್ಯುಎ, ದಲಿತ ಹಕ್ಕುಗಳ ಸಮಿತಿ ರಾಜ್ಯ ಸಮಿತಿಗಳ ಪದಾಧಿಕಾರಿಗಳು ಖಂಡಿಸಿದ್ದಾರೆ. ಕೊಲೆಗಡುಕರಿಗೆ ಶಿಕ್ಷೆ ವಿಧಿಸಬೇಕು ಎಂದು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ.ದಲಿತ ಯುವಕ ವಿವೇಕಾನಂದ ದೊಡ್ಡಮನಿಯನ್ನು ಮದುವೆಯಾಗಿದ್ದ ಮಾನ್ಯಾ ಏಳು ತಿಂಗಳ ಗರ್ಭಿಣಿಯಾಗಿದ್ದಳು. ಮದುವೆಯಾಗಿ ಊರಿಗೆ ಬಂದಿದ್ದ ಮಾನ್ಯಾಳನ್ನು ಆಕೆಯ ಹೆತ್ತ ತಂದೆ ಮತ್ತು ಕುಟುಂಬಸ್ಥರು ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಪ್ರೀತಿಸಿ ಮದುವೆಯಾದ ಕಾರಣಕ್ಕೆ ಏಳು ತಿಂಗಳ ಗರ್ಭಿಣಿ ಮಗಳನ್ನೇ ಕೊಡಲಿಯಿಂದ ಕೊಚ್ಚಿ ಕೊಂದಿರುವ ಕ್ರೂರ ಘಟನೆಯನ್ನು ನಾಗರಿಕ ಸಮಾಜ ಸಹಿಸುವುದಿಲ್ಲ. ಎಂಟು ಶತಮಾನಗಳ ಹಿಂದೆಯೇ ಬಸವಣ್ಣನವರು ಅಂತರ್ಜಾತಿ ವಿವಾಹವನ್ನು ಮಾಡಿ ಜಾತೀಯತೆಯನ್ನು ಹೋಗಲಾಡಿಸಲು ಅಡಿಪಾಯ ಹಾಕಿದ್ದರು. ಸಮಾಜದಲ್ಲಿ ಇಂದಿಗೂ ಮೇಲ್ಜಾತಿಯವರ ಅಟ್ಟಹಾಸ, ಜಾತಿ ತಾರತಮ್ಯ, ಜಾತಿ ದ್ವೇಷ, ಅಸ್ಪೃಷ್ಯತೆ, ದಲಿತರನ್ನು ಒಪ್ಪಿಕೊಳ್ಳಲಾಗದಂತ ಮನೋಸ್ಥಿತಿ ಆಳವಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮರ್ಯಾದೆ ಹತ್ಯೆ ನಡೆಸುವ ಎಲ್ಲರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಕುಟುಂಬಕ್ಕಿರುವ ಆತಂಕದಂತೆ ಮಾನ್ಯಾಳ ಪತಿ ವೀವೇಕಾನಂದ ದೊಡ್ಡಮನಿ ಹಾಗೂ ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಅಂತರ್ಜಾತಿ ವಿವಾಹವಾಗುವ ಎಲ್ಲ ಯುವಕ, ಯುವತಿಯರಿಗೆ ಸೂಕ್ತ ಕಾನೂನು ರಕ್ಷಣೆ ನೀಡಬೇಕು. ಅವರಿಗೆ ಸಾಮಾಜಿಕ, ಆರ್ಥಿಕ ಬಲ ತುಂಬಲು ಪ್ರೋತ್ಸಾಹ ಧನ ಹೆಚ್ಚಳಗೊಳಿಸಬೇಕು. ಮೀಸಲಾತಿ ಸೌಲಭ್ಯ ಒದಗಿಸುವುದು ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಈಗಾಗಲೇ ಸುಪ್ರೀಂ ಕೋರ್ಟ್ ಹಲವು ಮಹತ್ವದ ಆದೇಶಗಳನ್ನು ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಬದ್ದತೆಯಿಂದ ಪಾಲಿಸುವ ಮೂಲಕ ಸಮಾಜದಲ್ಲಿ ಮರ್ಯಾದೆಗೇಡು ಹತ್ಯೆಯ ವಿರುದ್ದ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಈಡಿಗರ ಮಂಜುನಾಥ, ಸ್ವಾಮಿ, ಮಾಳಮ್ಮ, ಯು.ಬಸವರಾಜ್, ನಾಗರತ್ನಮ್ಮ, ಬಿಸಾಟಿ ಮಹೇಶ್, ಭಾಸ್ಕರ್ ರೆಡ್ಡಿ, ಸುರೇಶ್, ದಯಾನಂದ, ವಾಣಿ ಸುನೀತಾ, ವಂದನಾ ಮತ್ತಿತರರಿದ್ದರು.
ಹೊಸಪೇಟೆಯಲ್ಲಿ ಮಾನ್ಯಾ ಪಾಟೀಲ ಮರ್ಯಾದೆಗೇಡು ಹತ್ಯೆ ಖಂಡಿಸಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.