ಸರ್ಕಾರಿ ಪದವಿಪೂರ್ವ ಕಾಲೇಜನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ನೀಲಿನಕ್ಷೆ ಸಿದ್ಧಪಡಿಸಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಸಂಪೂರ್ಣ ಬೀಳುವ ಹಂತದಲ್ಲಿರುವ ಪ್ರೌಢಶಾಲೆ ವಿಭಾಗದ ಮೂರು ಕೊಠಡಿಗಳನ್ನು ಸುಮಾರು ಐದು ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಅಲ್ಲದೆ ಕಾಲೇಜು ರಕ್ಷಣಾ ಸಮಸ್ಯೆ ಎದುರಿಸುತ್ತಿದ್ದು ರಾತ್ರಿ ವೇಳೆ ಕಾಲೇಜು ಆವರಣದಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಆವರಣದಲ್ಲಿ ಗಸ್ತು ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ನೀಲಿನಕ್ಷೆ ಸಿದ್ಧಪಡಿಸಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಸೋಮವಾರ ಕಾಲೇಜು ಆವರಣದಲ್ಲಿ ಶೌಚಗೃಹ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸುಮಾರು ೮ ದಶಕಗಳ ಹಿಂದೆ ಬ್ರಿಟೀಷ್ ಪ್ರಜೆ ಇ.ಎಚ್ ಯಂಗ್ಸ್ ನಿರ್ಮಿಸಿದ ಕಾಲೇಜು ಕಾಲಕಾಲಕ್ಕೆ ದುರಸ್ತಿ ನಡೆಸಿದರೂ ಸುಸ್ಥಿತಿಗೆ ಮರಳದಾಗಿದೆ. ಆದ್ದರಿಂದ ಪ್ರೌಢಶಾಲೆ ಇರುವ ಸಂಪೂರ್ಣ ನೆಲಸಮಗೊಳಿಸಿ ಮೂರು ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು. ಕಳೆದ ಎರಡು ವರ್ಷದಲ್ಲಿ ಕಾಲೇಜಿನ ಸುತ್ತ ಕಾಂಪೌಂಡ್, ಶೌಚಗೃಹ, ಕಟ್ಟಡ ದುರಸ್ತಿಗಾಗಿ ಸುಮಾರು ೩೦ ಲಕ್ಷ ರು. ವ್ಯಯಿಸಲಾಗಿದೆ. ಅಪಾರ ಮೊತ್ತದ ಹಣ ಖರ್ಚು ಮಾಡಿದರೂ ಕಟ್ಟಡ ಸುಸ್ಥಿತಿಗೆ ಬಾರದಾಗಿದೆ. ಕಳೆದ ವರ್ಷ ಬಾಲಕರಿಗಾಗಿ ಸುಮಾರು ೧೦ ಲಕ್ಷ ರು. ವೆಚ್ಚದಲ್ಲಿ ಸುಸಜ್ಜಿತ ಶೌಚಗೃಹ ನಿರ್ಮಿಸಲಾಗಿದ್ದರೆ, ಸದ್ಯ ಅಷ್ಟೇ ಪ್ರಮಾಣದ ಅನುದಾನದಲ್ಲಿ ವಿದ್ಯಾರ್ಥಿನಿಯರಿಗಾಗಿ ಶೌಚಗೃಹ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಇದಲ್ಲದೆ ಸಂಪೂರ್ಣ ಬೀಳುವ ಹಂತದಲ್ಲಿರುವ ಪ್ರೌಢಶಾಲೆ ವಿಭಾಗದ ಮೂರು ಕೊಠಡಿಗಳನ್ನು ಸುಮಾರು ಐದು ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಅಲ್ಲದೆ ಕಾಲೇಜು ರಕ್ಷಣಾ ಸಮಸ್ಯೆ ಎದುರಿಸುತ್ತಿದ್ದು ರಾತ್ರಿ ವೇಳೆ ಕಾಲೇಜು ಆವರಣದಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಆವರಣದಲ್ಲಿ ಗಸ್ತು ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.
ಈ ವೇಳೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕ್ಯಾಮನಹಳ್ಳಿ ರಾಜ್‌ಕುಮಾರ್, ಬಿಇಒ ಪುಷ್ಪಲತಾ, ಪ್ರಾಂಶುಪಾಲರಾದ ವೆಂಕಟೇಶ್, ಪ್ರೌಢಶಾಲೆ ಮುಖ್ಯೋಪದ್ಯಾಯಿನಿ ವೆಂಕಟಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.