ಸಾರಾಂಶ
ಸುಬ್ರಮಣಿ ಸಿದ್ದಾಪುರ
ಕನ್ನಡಪ್ರಭವಾರ್ತೆ ಸಿದ್ದಾಪುರಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ಹೆಮ್ಮೆ ಮರಗೋಡು ಭಾರತಿ ಸಂಯುಕ್ತ ವಿದ್ಯಾಸಂಸ್ಥೆ ಈಗ ಇತಿಹಾಸದ ಪುಟಗಳಲ್ಲೇ ಉಳಿಯುವ ಸ್ಥಿತಿಗೆ ತಲುಪಿದೆ. ವಿದ್ಯಾವೈಭವದ ನೆಲೆ ಪ್ರಸಕ್ತ ವಿದ್ಯಾರ್ಥಿಗಳ ಕೊರತೆಯಿಂದ ಕುಸಿಯುತ್ತಿದೆ. ಬೆರಳೆಣಿಕೆ ವಿದ್ಯಾರ್ಥಿಗಳು ದಾಖಲಾದ ಹಿನ್ನೆಲೆ ದಾಖಲಾತಿ ನಿಲ್ಲಿಸಲಾಗಿದೆ
ಸುಮಾರು 62 ವರ್ಷಗಳ ವಿದ್ಯಾವೈಭವ ಹೊಂದಿದ್ದ ಈ ಪ್ರಸಿದ್ಧ ವಿದ್ಯಾಸಂಸ್ಥೆಗೆ ಈಗ ಬಾಗಿಲು ಹಾಕಲಾಗಿದೆ. ಈಗಾಗಲೇ ಪ್ರೌಢ ಶಾಲೆಗೆ ಬೀಗ ಬಿದ್ದಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಕಾಲೇಜಿಗೂ ಶಾಶ್ವತವಾಗಿ ಬೀಗ ಬೀಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಸದ್ಯದಲ್ಲೇ ಪ್ರೌಢಶಾಲೆಗೂ ಬೀಗ: ಪ್ರಸ್ತುತ ಪ್ರೌಢಶಾಲೆಯಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳೇ ದಾಖಲಾದ ಕಾರಣ ದಾಖಲಾತಿ ನಿಲ್ಲಿಸಲಾಗಿದೆ. ಪದವಿ ಪೂರ್ವ ಕಾಲೇಜಿನ ಕೊನೆಯ ದ್ವಿತೀಯ ಪಿಯುಸಿ ತರಗತಿ ಈ ಶೈಕ್ಷಣಿಕ ವರ್ಷದಲ್ಲಿ ನಡೆಯುತ್ತಿದ್ದು, ಅದರ ನಂತರ ಈ ಘಟಕವೂ ಮುಚ್ಚಲಿದೆ.1963ರ ಜುಲೈನಲ್ಲಿ ಆರಂಭವಾದ ಈ ಅನುದಾನಿತ ವಿದ್ಯಾಸಂಸ್ಥೆ ಅನೇಕ ಪೀಳಿಗೆಗಳ ವಿದ್ಯಾರ್ಥಿಗಳಿಗೆ ಜ್ಞಾನ, ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ನೀಡಿದ ದೇಗುಲವಾಗಿತ್ತು. ಉತ್ತಮ ಶಿಕ್ಷಕರು, ಶಿಸ್ತಿನ ಶಿಕ್ಷಣ, ಮತ್ತು ಶೇ.100 ಫಲಿತಾಂಶ ನೀಡುವ ಇತಿಹಾಸದಿಂದ ಈ ಶಾಲೆ ಕೊಡಗು ಜಿಲ್ಲೆಯ ಅತ್ಯಂತ ಪ್ರಖ್ಯಾತ ಸಂಸ್ಥೆಗಳ ಸಾಲಿನಲ್ಲಿ ಸ್ಥಾನ ಪಡೆದಿತ್ತು.ಮರಗೋಡು ಸಿದ್ದಾಪುರ, ನೆಲ್ಯಹುದಿಕೇರಿ, ಮೇಕೆರಿ, ಹಾಕತ್ತೂರು ಕಟ್ಟೆಮಾಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿ ಇಂದು ರಾಜ್ಯದ ವಿವಿಧ ಸರ್ಕಾರಿ ಹುದ್ದೆಗಳಲ್ಲಿ, ಖಾಸಗಿ ಕ್ಷೇತ್ರಗಳಲ್ಲಿ ಮತ್ತು ಉದ್ಯಮ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಇಚ್ಛಾ ಶಕ್ತಿಯ ಕೊರತೆಆಂಗ್ಲ ಮಾಧ್ಯಮ ಶಾಲೆಗಳ ಅತಿವೃದ್ಧಿ ಮತ್ತು ಪೋಷಕರ ಆಸಕ್ತಿಯ ಬದಲಾವಣೆಯು ಗ್ರಾಮೀಣ ಕನ್ನಡ ಮಾಧ್ಯಮ ಶಾಲೆಗಳ ಅಸ್ತಿತ್ವವನ್ನೇ ಪ್ರಶ್ನೆಯೊಳಗೊಳಿಸಿದೆ. ಕನ್ನಡ ಶಾಲೆಗಳನ್ನು ಉಳಿಸುವುದಾಗಿ ಹೇಳುವ ಸರ್ಕಾರವೇ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುವುದರಿಂದ ಸಾವಿರಾರು ಕನ್ನಡ ಶಾಲೆಗಳು ಬಾಗಿಲು ಹಾಕುತ್ತಿರುವುದು ವಿಪರ್ಯಾಸವೆ ಆಗಿದೆ. ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಬೆಳಕಿನ ಕಿರಣವಾಗಿದ್ದ ಈ ಸಂಸ್ಥೆಯನ್ನು ಸರ್ಕಾರ ಸೂಕ್ತ ನೆರವು ನೀಡಿ ಉಳಿಸಬಹುದಾಗಿತ್ತು ಎಂಬ ಅಭಿಪ್ರಾಯ ಶಿಕ್ಷಣ ವಲಯದಲ್ಲಿ ಕೇಳಿಬರುತ್ತಿದೆ. ಆದರೆ ಈಗ ಯಾರೂ ಕೈಹಾಕದ ಕಾರಣ, 62 ವರ್ಷಗಳ ಕನ್ನಡ ಶಿಕ್ಷಣದ ಐತಿಹಾಸಿಕ ಯುಗಕ್ಕೆ ತೆರೆ ಬೀಳುವಂತಾಗಿದೆ.ನಾನು ಕಲಿತ ಶಾಲೆ ಇಷ್ಟು ಬೇಗ ಮುಚ್ಚುತ್ತದೆ ಎಂಬುದನ್ನು ನಂಬಲು ನನಗೆ ಸಾಧ್ಯವಾಗುತ್ತಿಲ್ಲ. ಅಲ್ಲಿ ಕಳೆದ ನನ್ನ ಬಾಲ್ಯದ ದಿನಗಳು, ಶಿಕ್ಷಕರ ಮಾರ್ಗದರ್ಶನ, ಸ್ನೇಹಿತರ ಜೊತೆಗೆ ಕಳೆದ ಕ್ಷಣಗಳು ಇವೆಲ್ಲವೂ ಇಂದಿಗೂ ಮನಸ್ಸಿನಲ್ಲಿ ತಾಜಾ ನೆನಪುಗಳಂತೆ ಉಳಿದಿವೆ. ನಮ್ಮ ವ್ಯಕ್ತಿತ್ವವನ್ನು ರೂಪಿಸಿದ ಆ ಸ್ಥಳ ಇನ್ನು ಇರದು ಎಂಬ ವಿಚಾರ ತುಂಬಾ ನೋವು ಕೊಡುತ್ತದೆ. ಇದು ಕೇವಲ ಒಂದು ಕಟ್ಟಡವಲ್ಲ, ನಮ್ಮ ಬಾಲ್ಯ, ಕನಸುಗಳು ಮತ್ತು ನೆನಪುಗಳ ತಾಣವಾಗಿತ್ತು.
। ವಸಂತಿ , ಈಗ ಶಿಕ್ಷಕಿ ಶಾಲೆಯ ಹಳೆಯ ವಿದ್ಯಾರ್ಥಿ.ಉತ್ತಮ ವಿದ್ಯಾಭ್ಯಾಸ ನೀಡಿ ನಮ್ಮ ಭವಿಷ್ಯಕ್ಕೆ ಅಡಿಪಾಯ ಹಾಕಿದ ಈ ಸಂಸ್ಥೆಯ ಬಾಗಿಲು ಮುಚ್ಚುತ್ತಿದೆ ಎಂಬುದು ನನಗೆ ನಂಬಲಾಗುತ್ತಿಲ್ಲ. ಈ ಸಂಸ್ಥೆ ನನಗೆ ಜೀವನದಲ್ಲಿ ಮುಂದುವರಿಯಲು ದಾರಿದೀಪವಾದುದು. ಇಂತಹ ಶಿಕ್ಷಣದ ದೇಗುಲ ಬಾಗಿಲು ಮುಚ್ಚುತ್ತಿರುವುದು ಹಳೆಯ ವಿದ್ಯಾರ್ಥಿಯಾಗಿ ನನಗೆ ತುಂಬಾ ನೋವು ತಂದಿದೆ.
ದಿವ್ಯ ಟಿ ಆರ್. ಹಳೆಯ ವಿದ್ಯಾರ್ಥಿ;Resize=(128,128))
;Resize=(128,128))