ಸಾರಾಂಶ
ಜೀವಾವಧಿ ಶಿಕ್ಷೆಯಿಂದ ದೇಶಾದ್ಯಂತ ಗಮನ ಸೆಳೆದಿದ್ದ ಪ್ರಕರಣ
98 ಜನರಿಗೆ ಜೀವಾವಧಿ ಶಿಕ್ಷೆ ನೀಡಿದ್ದ ಕೊಪ್ಪಳ ಜಿಲ್ಲಾ ನ್ಯಾಯಾಲಯಧಾರವಾಡ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಜಾಮೀನು
ಅರ್ಜಿಯನ್ನೇ ಸಲ್ಲಿಸದ ಎ 1 ಆರೋಪಿಗೆ ಮಾತ್ರ ಜಾಮೀನು ಇಲ್ಲಕನ್ನಡಪ್ರಭ ವಾರ್ತೆ ಕೊಪ್ಪಳ
ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಅಸ್ಪೃಶ್ಯತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 98 ಜನರಿಗೆ ನೀಡಿದ್ದ ಜೀವಾವಧಿ, ಮೂವರಿಗೆ 5 ವರ್ಷ ಜೈಲು ಶಿಕ್ಷೆಗೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿ, 99 ಜನರಿಗೆ ಜಾಮೀನು ಮಂಜೂರು ಮಾಡಿದೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿದ್ದ ತೀರ್ಪು ದೇಶಾದ್ಯಂತ ಭಾರಿ ಸದ್ದು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.98 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಓಬ್ಬರು ಆನಾರೋಗ್ಯದಿಂದ ನಿಧನರಾಗಿದ್ದರು. ಪ್ರಕರಣದ ಎ.1 ಆರೋಪಿ ಜಾಮೀನು ಅರ್ಜಿ ಸಲ್ಲಿಸದೆ ಇರುವ ಕಾರಣ ಅರ್ಜಿ ಸಲ್ಲಿಸಿದ 99 ಜನರಿಗೂ ಧಾರವಾಡ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ.
ಅಸ್ಪೃಶ್ಯತೆ ಪ್ರಕರಣವೊಂದರಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನರಿಗೆ ಜೀವಾವಧಿ ಶಿಕ್ಷೆಯನ್ನು ನೀಡಿದ ದೇಶದ ಮೊದಲ ಪ್ರಕರಣ ಎಂದು ಹೇಳಲಾಗುತ್ತಿತ್ತು.ಅ. 24ರಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಮರಕುಂಬಿ ಪ್ರಕರಣದಲ್ಲಿ 101 ಜನರಿಗೆ ಶಿಕ್ಷೆ ನೀಡಿ ಆದೇಶಿಸಿದ್ದರು. 98 ಜನರಿಗೆ ಜೀವಾವಧಿ, ಮೂವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಏನಿದು ಪ್ರಕರಣ?:ಮರಕುಂಬಿ ಗ್ರಾಮದಲ್ಲಿ ಕ್ಷೌರದಂಗಡಿ ಮತ್ತು ಹೋಟೆಲ್‌ಗಳಿಗೆ ದಲಿತರಿಗೆ ಪ್ರವೇಶ ನೀಡದೆ ಇರುವ ಕುರಿತು ಹಲವು ವರ್ಷಗಳಿಂದ ಗಲಾಟೆಯಾಗುತ್ತಿತ್ತು. 2014ರ ಆ. 28ರಂದು ಗಂಗಾವತಿ ನಗರದ ಶಿವ ಚಿತ್ರಮಂದಿರದಲ್ಲಿ ಟಿಕೆಟ್ ತೆಗೆಸುವ ವಿಚಾರಕ್ಕೆ ಮರಕುಂಬಿ ಗ್ರಾಮದ ಮಂಜುನಾಥ ಮತ್ತು ದಲಿತ ಯುವಕರ ನಡುವೆ ಜಗಳ ನಡೆಯಿತು. ಇದಾದ ಮೇಲೆ ಮಂಜುನಾಥ ಗ್ರಾಮಕ್ಕೆ ಬಂದು ವಿಷಯ ತಿಳಿಸುತ್ತಿದ್ದಂತೆ ಸವರ್ಣೀಯರು ಕೇರಿಗೆ ನುಗ್ಗಿ ದಾಂದಲೆ ಮಾಡಿದ್ದರು. ನಾಲ್ಕು ಗುಡಿಸಲುಗಳಿಗೆ ಬೆಂಕಿ ಹಚ್ಚಿ, ಸುಟ್ಟಿದ್ದರು.
ಈ ಪ್ರಕರಣದಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 117 ಜನರ ವಿರುದ್ಧ ದೂರು ದಾಖಲಾಗಿತ್ತು. ಇದಾದ ಮೇಲೆ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆಸಲಾಯಿತು. ಇದರಲ್ಲಿ ಕೆಲವರು ಮೃತಪಟ್ಟಿದ್ದರು. ಇನ್ನು ಕೆಲವರ ಹೆಸರು ಎರಡು ಬಾರಿ ನಮೂದಾಗಿತ್ತು. ಅಂತಿಮವಾಗಿ ಅ. 24ರಂದು 101 ಜನರಿಗೆ ಶಿಕ್ಷೆ ನೀಡಿ, ಮಹತ್ವದ ಆದೇಶ ಮಾಡಲಾಯಿತು. ಈ ತೀರ್ಪು ಕುರಿತು ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಯಿತು.ಈಗ 101 ಜನರ ಪೈಕಿ ಓರ್ವ ಪೊಲೀಸ್ ಕಸ್ಟಡಿಯಲ್ಲಿ ನಿಧನರಾಗಿದ್ದರಿಂದ ಹಾಗೂ ಎ.1 ಆರೋಪಿ ಧಾರವಾಡ ಹೈಕೋರ್ಟಿನಲ್ಲಿ ಜಾಮೀನಿಗೆ ಅರ್ಜಿಯನ್ನೇ ಸಲ್ಲಿಸದೆ ಇರುವುದರಿಂದ ಅರ್ಜಿ ಸಲ್ಲಿಸಿದ 99 ಜನರಿಗೂ ಜಾಮೀನು ನೀಡಲಾಗಿದೆ.
ಆರೋಪಿಗಳ ಪರ ಹಿರಿಯ ವಕೀಲರಾದ ಸಂತೋಷ ಬಿ. ಮಲ್ಲನಗೌಡ್ರ, ನೀಲೇಂದ್ರ ಗುಂಡಿ ಸೇರಿದಂತೆ ಅನೇಕರು ವಾದ ಮಂಡಿಸಿದ್ದಾರೆ.