ಸಾರಾಂಶ
- ಹಾಡು, ಸಂಗೀತ, ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ: ಮುದೇಗೌಡ್ರ ನವೀನಕುಮಾರ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಸಂಗೀತ ಪ್ರಧಾನ, ಯುವಪೀಳಿಗೆಗೆ ಹತ್ತಿರವಾಗುವ, ಸಂಬಂಧಗಳ ಮೌಲ್ಯಗಳ ಮಹತ್ವ ಸಾರುವ ಮರಳಿ ಮನಸಾಗಿದೆ ಸಿನಿಮಾ ಜುಲೈ ಮೊದಲ ಅಥವಾ 2ನೇ ವಾರ ತೆರೆಗೆ ಬರಲಿದೆ. ಪ್ರೇಕ್ಷಕರು ಚಿತ್ರವನ್ನು ವೀಕ್ಷಿಸುವ ಮೂಲಕ ಆಶೀರ್ವದಿಸುವಂತೆ ನಿರ್ಮಾಪಕ ಮುದೇಗೌಡ್ರ ನವೀನಕುಮಾರ ಮನವಿ ಮಾಡಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎದುರಿಗೆ ಬಂದರೆ ಹೃದಯಕೆ ತೊಂದರೆ, ಚೂರು ಸರಿಪಡಿಸು ಎಂಬ ಹಾಡು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದೆ. ಕಲಬುರಗಿಯ ಸಂಗಮ ಥೇಟರ್‌ನಲ್ಲಿ 2ನೇ ಹಾಡನ್ನು ಬಿಡುಗಡೆ ಮಾಡಲಾಗಿದೆ. ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಬಗ್ಗೆ ನಮ್ಮೆಲ್ಲರಲ್ಲೂ ಮತ್ತಷ್ಟು ಉತ್ಸಾಹ ಮೂಡಿಸಿದೆ ಎಂದರು.
ಇನ್ನೂ ಎರಡು ಹಾಡುಗಳನ್ನು ಬೇರೆ ಬೇರೆ ಊರುಗಳಲ್ಲಿ ಬಿಡುಗಡೆ ಮಾಡಲಿದ್ದೇವೆ. ಒಟ್ಟು 4 ಹಾಡು, 3 ಬಿಟ್ ಸಾಂಗ್ ಇವೆ. ಈಗಾಗಲೇ ದಾವಣಗೆರೆ ಬಿಐಇಟಿ ಕಾಲೇಜಿನ ದವನ ಫೆಸ್ಟ್‌ಗೆ ನಮ್ಮ ಚಿತ್ರತಂಡ ಭಾಗಿಯಾಗುತ್ತಿದೆ. ನಮ್ಮ ಹೊಸಬರ ಪ್ರಯತ್ನಕ್ಕೆ ಬೆಂಗಳೂರಿನಲ್ಲಿ ಎಸ್.ಎಸ್. ಆಸ್ಪತ್ರೆಯನ್ನು ಉಚಿತವಾಗಿ ಶೂಟಿಂಗ್‌ಗೆ ನೀಡುವ ಮೂಲಕ ಹಿರಿಯರಾದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪ್ರೋತ್ಸಾಹಿಸಿದ್ದಾರೆ ಎಂದು ತಿಳಿಸಿದರು.ಮರಳಿ ಮನಸಾಗಿದೆ ಸಿನಿಮಾ ಮುಹೂರ್ತದ ವೇಳೆ ಅಂದಿನ ಸಂಸದರು, ಕೇಂದ್ರದ ಮಾಜಿ ಸಚಿವರಾದ ಡಾ. ಜಿ.ಎಂ. ಸಿದ್ದೇಶ್ವರ, ಹರಿಹರ ಹಾಲಿ ಶಾಸಕ ಬಿ.ಪಿ. ಹರೀಶ ಸಹ ಪಾಲ್ಗೊಂಡು, ಚಿತ್ರ ತಂಡಕ್ಕೆ ಪ್ರೋತ್ಸಾಹಿಸಿದ್ದರು. ದಾವಣಗೆರೆಯವರೇ ನಿರ್ಮಿಸುತ್ತಿರುವ ಚಿತ್ರಕ್ಕೆ ಪಕ್ಷಾತೀತವಾಗಿ ನಾಯಕರು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಬೆನಲ ಟಾಕೀಸ್ ಲಾಂಛನದಡಿ ಮರಳಿ ಮನಸಾಗಿದೆ ಸಿನಿಮಾ ಮಾಡಿದ್ದು, ಎಲ್ಲ ಕಾಲೇಜುಗಳಿಗೆ ತೆರಳಿ, ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.
ಚಿತ್ರದಲ್ಲಿ ಅರ್ಜುನ್ ವೇದಾಂತ್ ನಾಯಕ ನಟನಾಗಿದ್ದು, ನಿರೀಕ್ಷಾ ಶೆಟ್ಟಿ ಹಾಗೂ ಸ್ಮೃತಿ ವೆಂಕಟೇಶ ಇಬ್ಬರು ನಾಯಕಿಯರಿದ್ದಾರೆ. ಆರಂಭದಿಂದಲೂ ಇಲ್ಲಿನ ಜನರು ನಮ್ಮ ತಂಡಕ್ಕೆ ಪ್ರೋತ್ಸಾಹಿಸಿದ್ದೀರಿ. ಇದೇ ಪ್ರೋತ್ಸಾಹ ಸದಾ ನಮ್ಮ ಮೇಲಿರಲಿ ಎಂದು ನಾಗರಾಜ ಶಂಕರ ಮನವಿ ಮಾಡಿದರು.ಚಿತ್ರದ ನಾಯಕ ಅರ್ಜುನ್ ವೇದಾಂತ, ಎಸ್.ವಿಜಯಕುಮಾರ, ಜಿಪಂ ಮಾಜಿ ಅಧ್ಯಕ್ಷೆ, ಬಿಜೆಪಿ ಮಹಿಳಾ ಮೋರ್ಚಾ ಮುಖಂಡರಾದ ಸಹನಾ ರವಿಕುಮಾರ, ಕಾಂಗ್ರೆಸ್ ಮಹಿಳಾ ಘಟಕದ ಮುಖಂಡರಾದ ಶಶಿಕಲಾ ಮೂರ್ತಿ, ಹಿರಿಯ ಪತ್ರಕರ್ತ ಬಾ.ಮ.ಬಸವರಾಜಯ್ಯ ಇತರರು ಇದ್ದರು.
- - -(ಬಾಕ್ಸ್) * ಪ್ರೇಮಕಥೆ, ಮೆಡಿಕಲ್ ಸ್ಟೋರಿ ಕಥಾಹಂದರ ಚಿತ್ರದ ನಿರ್ದೇಶಕ ನಾಗರಾಜ ಶಂಕರ್ ಮಾತನಾಡಿ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಸಿನಿಮಾವನ್ನು ನಿರ್ದೇಶಿಸಿದ್ದೇನೆ. ಇದೊಂದು ಪ್ರೇಮಕಥೆ, ಮೆಡಿಕಲ್ ಸ್ಟೋರಿ, ಪ್ರೀತಿ ಪಡೆಯುವ ಪ್ರಯತ್ನದ ಕಥಾಹಂದರದ ಸಿನಿಮಾ. ಕುಂದಾಪುರ, ಕಳಸ, ಚಿಕ್ಕಮಗಳೂರು, ಬೆಂಗಳೂರು, ದಾವಣಗೆರೆ ಗಾಜಿನ ಮನೆ ಹೀಗೆ ವಿವಿಧೆಡೆ ಚಿತ್ರೀಕರಣ ಮಾಡಿದ್ದೇವೆ. ಪೋಸ್ಟ್ ಪ್ರೊಡಕ್ಷನ್ ಆಗಿದ್ದು, ಚಿತ್ರದ ಪ್ರಮೋಷನ್ ಆಗಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದೇವೆ. ಚಿತ್ರದ ಕಥೆಯೇ ಮಾತನಾಡುವಂತಹ, ಜನರಿಗೆ ತಲುಪುವಂತಹ ಸಿನಿಮಾ ಇದು ಎಂದರು. ವಿನು ಮನಸು ಸಂಗೀತ ನಿರ್ದೇಶನ, ಹಾಡಿಗೆ ಸಂತೋಷ್ ವೆಂಕಿ ಧ್ವನಿಯಾಗಿದ್ದಾರೆ. ಅಶಿತ್ ಸುಬ್ರಮಣ್ಯ, ಬಿ.ಜಿ.ಶ್ರೀನಿಧಿ ಸಾಹಿತ್ಯವಿದೆ. ಮುದೇಗೌಡ್ರು, ತೆಲಿಗಿ ಮಲ್ಲಿಕಾರ್ಜುನಪ್ಪ ಚಿತ್ರ ನಿರ್ಮಿಸಿದ್ದಾರೆ. ಇದೊಂದು ಸಂಗೀತ ಪ್ರಧಾನ ಚಿತ್ರವಾಗಿದೆ. ಹಿರಿತೆರೆಯಲ್ಲಿ ನನ್ನ ಮೊದಲ ಸಿನಿಮಾ ಇದಾಗಿದೆ ಎಂದು ವಿವರಿಸಿದರು.
- - --25ಕೆಡಿವಿಜಿ7:
ದಾವಣಗೆರೆಯಲ್ಲಿ ಶುಕ್ರವಾರ ಮರಳಿ ಮನಸಾಗಿದೆ ಚಿತ್ರದ ನಿರ್ಮಾಪಕ ಮುದೇಗೌಡ್ರ ನವೀನಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಿರ್ದೇಶಕ ನಾಗರಾಜ ಶಂಕರ ಇತರರು ಇದ್ದರು.