ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಗ್ರಾಮೀಣ ಜನರು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ಸಾಮರಸ್ಯ ಮೂಡುತ್ತದೆ ಎಂದು ಮಾಜಿ ಸೈನಿಕ ಸಿ. ಸುರಿ ಮುತ್ತಪ್ಪ ಹೇಳಿದ್ದಾರೆ.ಮರಂದೋಡ ಗ್ರಾಮದಲ್ಲಿ ಮರಂದೋಡ ಕ್ರೀಡಾ ಸಮಿತಿ ವತಿಯಿಂದ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಅಯೋಜಿಸಲಾಗಿದ್ದ 41ನೇ ವರ್ಷದ ವಾರ್ಷಿಕ ಕ್ರೀಡಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾ ಸಮಿತಿ ಅಧ್ಯಕ್ಷ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗ್ರಾಮಸ್ಥಗಾಗಿ ವಿವಿಧ ಕ್ರೀಡಾಕೂಟಗಳು ನಡೆದವು.0.22 ಶೂಟಿಂಗ್ ಸ್ಪರ್ಧೆಯಲ್ಲಿ ಬಾರಿಕೆ ಜೀವಿತ ಪ್ರಥಮ ಸ್ಥಾನ ಗಳಿಸಿದರು. ದ್ವಿತೀಯ ಸ್ಥಾನವನ್ನು ಮುಕ್ಕಾಟಿರ ಅಜಿತ್ ಪಡೆದರು. 12 ಬೋರ್ ಶೂಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಮುಕ್ಕಾಟಿರ ಅಜಿತ್ ತಮ್ಮದಾಗಿಸಿಕೊಂಡರು. ದ್ವಿತೀಯ ಸ್ಥಾನವನ್ನು ಮಾರ್ಚಂಡ ಮಂದಣ್ಣ ಗಳಿಸಿದರು.
ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನವನ್ನು ವಿತರಿಸಲಾಯಿತು.ಅಂಚೆ ಇಲಾಖೆಯ ನಿವೃತ್ತ ನೌಕರ ಬಾರಿಕೆರ ಜನಾರ್ದನ್, ಎಚ್ಎಎಲ್ ನಿವೃತ್ತ ಉದ್ಯೋಗಿ ಅನ್ನಾಡಿಯಂಡ ಪ್ರದೀಪ್ ಕುಮಾರ್, ನಿವೃತ್ತ ಸಿಆರ್‌ಪಿಎಫ್ ಉದ್ಯೋಗಿ ಚೋಯಮಾಡಂಡ ಪವಿತ್ರ, ಮರಂದೋಡ ಸರ್ಕಾರಿ ಪ್ರಾಥಮಿಕ ಶಾಲೆ ಸ್ಥಳ ದಾನಿ ಚಂಡೀರ ಜಗದೀಶ್, ಕಕ್ಕಬ್ಬೆ ವಿಎಸ್ಎಸ್ಎನ್ ನಿರ್ದೇಶಕ ನಿಡುಮಂಡ ಹರೀಶ್ ಪೂವಯ್ಯ ಇದ್ದರು.
ವಿದ್ಯಾರ್ಥಿನಿ ಚಂಡಿರ ಪವವಿ ಪೊನ್ನಮ್ಮ ಪ್ರಾರ್ಥಿಸಿದರು. ಕಳೆದ ವರ್ಷದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಮುಕ್ಕಾಟಿರ ಅಜಿತ್ ವಾಚಿಸಿದರು. ಕ್ರೀಡಾ ಸಮಿತಿ ಸದಸ್ಯ ಚಂಡೀರ ರಾಲಿ ಗಣಪತಿ ನಿರೂಪಿಸಿದರು.ಕ್ರೀಡಾಕೂಟದಲ್ಲಿ ವಿವಿಧ ವಯೋಮಾನದವರಿಗೆ ಸೂಜಿ ದಾರ ಓಟ, ಭಾರದ ಕಲ್ಲು ಎಸೆತ, ಮೇಣದಬತ್ತಿ ಓಟ, ಅಡಕೆ ಹಾಳೆಯಲ್ಲಿ ದಂಪತಿಗಳನ್ನು ಎಳೆಯುವುದು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬಳಿಕ ಮನೋರಂಜನಾ ಕಾರ್ಯಕ್ರಮ ಜರುಗಿತು.