ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಮರಾಠರು ಮುಸ್ಲಿಂ ವಿರೋಧಿಗಳಲ್ಲ. ನಮ್ಮ ಸಮಾಜ ಬಾಂಧವರು. ರಾಜಕೀಯವಾಗಿ ನಿರ್ಣಾಯಕವಾಗಿ ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.ಪಟ್ಟಣದ ಯಲ್ಲಾಲಿಂಗ ಮಠದ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಂಡ ಬ.ಬಾಗೇವಾಡಿ ತಾಲೂಕಿನ ಪಕ್ಷಾತೀತವಾಗಿ ಭಾಗವಹಿಸಿದ್ದ ಮರಾಠ ಬಾಂಧವರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಛತ್ರಪತಿ ಶಿವಾಜಿಯನ್ನು ಮುಸ್ಲಿಂ ವಿರೋಧಿ ಎಂದು ಗುರುತಿಸಲಾಗುತ್ತಿದೆ. ಶಿವಾಜಿ ಮಹಾರಾಜರ ಸೈನ್ಯದಲ್ಲಿ ೬೦ ಸಾವಿರ ಮುಸ್ಲಿಂ ಸೈನಿಕರಿದ್ದರು. ಇವರ ೩೩ ಅಂಗರಕ್ಷಕರಲ್ಲಿ ೧೩ ಜನ ಮುಸ್ಲಿಂ ಅಂಗರಕ್ಷಕರಿದ್ದರು ಎಂದು ಇತಿಹಾಸದಿಂದ ತಿಳಿದುಬರುತ್ತದೆ ಎಂದರು.ಮರಾಠರು ಇತಿಹಾಸ ಅರಿತುಕೊಳ್ಳಬೇಕಿದೆ. ಮರಾಠರು ಬಿಜೆಪಿಗೆ ಮತ ಹಾಕುತ್ತಾರೆ ಎಂಬುದು ಸ್ವಲ್ಪಮಟ್ಟಿಗೆ ಸರಿಯಿದೆ. ಕಳೆದ ೧೦ ವರ್ಷದಲ್ಲಿ ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ ಯಾವ ರೀತಿಯ ಆಡಳಿತ ನಡೆಸಿದೆ ಎಂಬುದನ್ನು ಅರಿತುಕೊಳ್ಳಬೇಕಿದೆ. ನೋಟು ಬದಲಾವಣೆ ಮಾಡುವ ಭರದಲ್ಲಿ ಜನತೆಗೆ ತೊಂದರೆಯಾಯಿತು. ಪ್ರತಿಯೊಂದು ವಸ್ತುವಿನ ಮೇಲೆ ಜಿಎಸ್‌ಟಿ ಹಾಕುವ ಮೂಲಕ ಬೆಲೆ ದುಬಾರಿ ಮಾಡಿದ್ದಾರೆ. ಇದರಿಂದ ಬಡವರು, ರೈತರು, ಮಧ್ಯಮವರ್ಗದವರು ಜೀವನ ಹೇಗೆ ಮಾಡಬೇಕು ಎಂದು ಪ್ರಶ್ನಿಸಿದರು.
ಮರಾಠ ಸಮಾಜದ ಅನೇಕರು ಮಂತ್ರಿಗಳಾಗಿದ್ದಾರೆ. ಕಾಂಗ್ರೆಸ್ ನನಗೂ ಮಂತ್ರಿ ಸ್ಥಾನ ನೀಡಿದೆ. ನಮ್ಮ ಸಮಾಜದವರು ಈಗಲಾದರೂ ಆಲೋಚನೆ ಮಾಡಿ ರಾಜಕೀಯವಾಗಿ ಗುರುತಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಲೋಕಸಭೆ ಚುನಾವಣೆಯಲ್ಲಿ ಮತ ನೀಡಿದರೆ ಉತ್ತಮ ಎಂದರು.ರಾಮ ಮಂದಿರ ನಿರ್ಮಾಣದ ಹಿಂದೆ ಬಿಜೆಪಿ ಕಾರ್ಯಕರ್ತರ ಶ್ರಮ ಬಹಳವಿದೆ. ಅವರು ಹಣ ಸಂಗ್ರಹ ಮಾಡಿ ಕೊಟ್ಟಿದ್ದರಿಂದಲೇ ರಾಮ ಮಂದಿರ ನಿರ್ಮಾಣವಾಗಿದೆ. ಅದೇ ನರೇಂದ್ರ ಮೋದಿ ಅವರು ರಾಮ ಮಂದಿರ ಉದ್ಘಾಟನೆಗೆ ಬಿಜೆಪಿ ಕಾರ್ಯಕರ್ತರನ್ನು ಆಹ್ವಾನಿಸದೇ ಕೇವಲ ಸ್ಟಾರ್‌ಗಳನ್ನು ಆಹ್ವಾನಿಸಿದರು. ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರ ಶಾಪ ಖಂಡಿತ ತಟ್ಟುತ್ತದೆ ಎಂದು ಆಕ್ರೋಶ ಹೊರಹಾಕಿದರು.
ನಾನು ರಾಜಕಾರಣಕ್ಕೆ ಬಂದು ೩೦ ವರ್ಷಗಳಾಗಿವೆ. ನಮ್ಮ ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ಬಡ ವಿದ್ಯಾರ್ಥಿಗಳಿದ್ದರೆ ನನಗೆ ಅವರನ್ನು ನೀಡಿದರೆ ಅವರಿಗೆ ಉಚಿತವಾಗಿ ಶಿಕ್ಷಣ ಸಿಗುವಂತೆ ಮಾಡುವೆ. ನನಗೆ ೧೦ ವರ್ಷಗಳ ಕಾಲ ಅವಕಾಶ ನೀಡಿದರೆ ಈ ಅವಧಿಯಲ್ಲಿ ಮರಾಠ ಸಮಾಜದ ಅಭಿವೃದ್ಧಿಗೆ ಮಾಡಲು ಬದ್ಧ. ಈ ಲೋಕಸಭೆ ಚುನಾವಣೆಯು ಬಿಜೆಪಿ-ಕಾಂಗ್ರೆಸ್ ನಡುವೆ ನಡೆದಿಲ್ಲ. ಶೋಷಿತ ಜನರ ಬದುಕಿನ ಉಳಿವಿಗಾಗಿ, ಸಂವಿಧಾನ ಸಂರಕ್ಷಣೆಗಾಗಿ, ಬಡವರನ್ನು ಸಂರಕ್ಷಣೆಗಾಗಿ, ಯುವಜನಾಂಗದ ಭವಿಷ್ಯಕ್ಕಾಗಿ ನಡೆದಿರುವ ಚುನಾವಣೆಯಾಗಿದೆ ಎಂದು ಹೇಳಿದರು.ಕಾಂಗ್ರೆಸ್ ಮುಖಂಡ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮರಾಠ ಸಮಾಜದ ಮುಖಂಡರಾದ ಅನಿಲ ಪವಾರ, ಗಂಗಾರಾಮ ಪವಾರ, ಬಸವರಾಜ ಬಿಜಾಪುರ, ಮಾರುತಿ ಪವಾರ, ಸಂಭಾಜಿ ಪವಾರ, ರಾಮು ಜಗತಾಪ, ಕಾಶೀನಾಥ ಹಿಂಗೋಲಿ, ಯಮನೂರಿ ಬಿದರಕುಂದಿ, ಮಹಾದೇವ ಘಾಟಗೆ, ಗೋಪಾಲ ಕನಸೆ, ದಶರಥ ಬೋಸಲೆ, ಸಚೀನ ಗಾಯಕವಾಡ, ಪ್ರಭಾಕರ ನಲವಡೆ, ಬಾಬು ನರಳೆ, ಶ್ಯಾಮರಾವ ಗಾಯಕವಾಡ, ರಾಜು ಪವಾರ, ಗುಂಡು ಗಾಯಕವಾಡ, ವೆಂಕಟೇಶ ಬಾಗೇವಾಡಿ, ಮಹೇಶ ತಿಳಗೂಳ, ಪುಂಡಲೀಕ ಜಗತಾಪ, ಅಪ್ಪು ಹಸಬೆ, ಗೋವಿಂದ ಜಾಧವ, ಮಾರುತಿ ಚವ್ಹಾಣ, ರಾಜು ಪವಾರ, ವೈ.ಬಿ.ಠೊಕೆ, ರಾಜು ಸಾವಂತ,ಬಾಳು ಚಿನಕೇಕರ, ಗೋಪಾಲ ನಿಕ್ಕಂ ಸೇರಿದಂತೆ ಇತರರು ಇದ್ದರು. ರಾಮು ಜಗತಾಪ ಸ್ವಾಗತಿಸಿ,ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.