ಸಾರಾಂಶ
ಬೆಳಗಾವಿ : ಕನ್ನಡದಲ್ಲಿ ಮಾತನಾಡು ಎಂದಿದ್ದಕ್ಕೆ ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮ ಪಂಚಾಯತಿ ಪಿಡಿಒ ನಾಗೇಂದ್ರ ಪತ್ತಾರ ಮೇಲೆ ಮರಾಠಿ ಯುವಕನೋರ್ವ ಗೂಂಡಾಗಿರಿ ಪ್ರದರ್ಶಿಸಿ, ಬೆದರಿಕೆ ಹಾಕಿದ ಘಟನೆ ನಡೆದಿದೆ. ಮದ್ಯ ಅಮಲಿನಲ್ಲಿ ಸರ್ಕಾರಿ ಕಚೇರಿಗೆ ಬಂದ ಮರಾಠಿ ಯುವಕ ಮರಾಠಿ ಭಾಷೆಯಲ್ಲೇ ಪಿಡಿಒಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವಿಡಿಯೋ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕನ್ನಡ ಅಧಿಕಾರಿಯೊಂದಿಗೆ ಮರಾಠಿ ಯುವಕನ ವರ್ತಿಸಿರುವ ಕ್ರಮವನ್ನು ಕನ್ನಡಪರ ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತಿದ್ದಂತೆಯೇ ಪೊಲೀಸರು ಆ ಪುಂಡ ಯುವಕನನ್ನು ಬಂಧಿಸಿದ್ದಾರೆ.
ಕಿಣಯೇ ಗ್ರಾಮದ ತಿಪ್ಪಣ್ಣ ಡೊಕ್ರೆ ಬಂಧಿತ ಆರೋಪಿ. ಮದ್ಯ ಕುಡಿದ ಅಮಲಿನಲ್ಲಿಯೇ ಸರ್ಕಾರಿ ಕಚೇರಿಗೆ ಬಂದ ಈತ ಪಿಡಿಒ ನಾಗೇಂದ್ರ ಪತ್ತಾರ ಮೇಲೆ ದರ್ಪ ತೋರಿ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಅಲ್ಲದೇ, ಮರಾಠಿ ಭಾಷೆಯಲ್ಲಿ ಮಾತನಾಡುವಂತೆ ಬೆದರಿಕೆ ಹಾಕಿದ್ದ. ಬೆಳಗಾವಿ ಗ್ರಾಮೀಣ ಪೊಲೀಸರು ಆರೋಪಿಯನ್ನು ಬಂಧಿಸಿ, ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ.
ಕನ್ನಡಪರ ಸಂಘಟನೆಗಳ ಆಕ್ರೋಶ:
ಕಿಣಯೇ ಗ್ರಾಪಂ ಪಿಡಿಒ ನಾಗೇಂದ್ರ ಪತ್ತಾರ ಅವರ ಮೇಲೆ ಮರಾಠಿ ಯುವಕ ದರ್ಪ ಮೆರೆದು ಉದ್ದಟತನ ಪ್ರದರ್ಶಿಸಿದ ಕ್ರಮವನ್ನು ಕನ್ನಡಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಕನ್ನಡ ವಿರೋಧಿ ಈ ಯುವಕನನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ( ನಾರಾಯಣಗೌಡ ಬಣ), ಕಿತ್ತೂರು ಕರ್ನಾಟಕ ಸೇನೆ ಎಚ್ಚರಿಕೆ ನೀಡಿದ್ದವು.ಇದರಿಂದಾಗಿ ಎಚ್ಚೆತ್ತುಕೊಂಡ ಬೆಳಗಾವಿ ಗ್ರಾಮೀಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮರಾಠಿ ಪುಂಡನ ವಿರುದ್ಧ ಕರವೇ ಕಿಡಿ:
ಕಿಣಯೇ ಗ್ರಾಪಂ ಪಿಡಿಒ ನಾಗೇಂದ್ರ ಪತ್ತಾರ ಮೇಲೆ ದರ್ಪ ಮೆರೆದ ಮರಾಠಿ ಪುಂಡ ಯುವಕನನ್ನು ಬಂಧಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದರು. ಕನ್ನಡದ ಹಿತ ಕಾಪಾಡಿ, ಕನ್ನಡದ ಅಭಿಮಾನ ಪ್ರದರ್ಶಿಸಿದ ಬೆಳಗಾವಿ ತಾಲ್ಲೂಕಿನ ಕಿಣಿಯೇ ಗ್ರಾಮ ಪಂಚಾಯತಿಯ ಪಿಡಿಓ ನಾಗೇಂದ್ರ ಪತ್ತಾರ ಅವರನ್ನು ಕರವೇ ವತಿಯಿಂದ ಸನ್ಮಾನಿಸಿ ಮಾತನಾಡಿದರು.ಬೆಳಗಾವಿಯಲ್ಲಿ ಪದೇ ಪದೇ ಮರಾಠಿ ಪುಂಡರಿಂದ ಕನ್ನಡಕ್ಕೆ ಧಕ್ಕೆ ತರುವ ಕೆಲಸ ಆಗುತ್ತಿದೆ.
ಮರಾಠಿ ಭಾಷೆಯಲ್ಲಿಯೇ ನಿಂದನೆ ಮಾಡುವಂತೆ ಪಿಡಿಒಗೆ ಮರಾಠಿ ಪುಂಡ ಅವಾಜ್ ಹಾಕ್ತಿದ್ದಾನೆ. ಮರಾಠಿ ಪುಂಡರು ಸರ್ಕಾರಿ ಅಧಿಕಾರಿಗಳಿಗೆ ರಾಜಾರೋಷವಾಗಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಬೆಳಗಾವಿಯಲ್ಲಿ ಶಾಂತಿ ಕದಡುವ ಕೆಲಸವನ್ನು ಎಂಇಎಸ್ ಪುಂಡರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಮರಾಠಿ ಪುಂಡ ಯುವಕನ ಮೇಲೆ ಪೊಲೀಸ್ ಇಲಾಖೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು. ಆರೋಪಿಯನ್ನು ತಕ್ಷಣ ಬಂಧಿಸಿ, ಕಠಿಣ ಕ್ರಮಕ್ಕೆ ಕೈಗೊಳ್ಳಬೇಕು. ಸರ್ಕಾರವೂ ಗಂಭೀರತೆ ಅರಿತು ಕೆಲಸ ಮಾಡಬೇಕು. ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧ ಮಾಡಬೇಕು. ಕನ್ನಡದಲ್ಲಿ ಮತಾನಾಡು ಎಂದು ಹೇಳಿದ ಅಧಿಕಾರಿಗೆ ನಾವು ಅಭಿನಂದನೆ ಮಾಡೋ ಕೆಲಸ ಮಾಡುತ್ತೇವೆ. ರಕ್ಷಣಾ ವೇದಿಕೆ ನಿಮ್ಮ ಜತೆಗೆ ನಿಲ್ಲುತ್ತದೆ ಎಂದು ದೀಪಕ ಗುಡಗನಟ್ಟಿ ಭರವಸೆ ನೀಡಿದರು.
ಎಂಇಎಸ್ ನಿಷೇಧಕ್ಕೆ ತಳವಾರ ಒತ್ತಾಯ:
ಗಡಿಭಾಗವಾದ ಬೆಳಗಾವಿಯಲ್ಲಿ ಕನ್ನಡ ಅಧಕಾರಿಗಳ ಮೇಲೆ ಎಂಇಎಸ್ ಪುಂಡರು ದಾಳಿ ಮಾಡುತ್ತಿದ್ದು, ನಾಡದ್ರೋಹಿ ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಎಂಇಎಸ್ ನಾಯಕರನ್ನು ಗಡಿಪಾರು ಮಾಡಬೇಕು ಎಂದು ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ ಆಗ್ರಹಿಸಿದರು.ಈ ಕುರಿತು ಹೇಳಿಕೆ ನೀಡಿದ ಅವರು, ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಕಿಣಯೇ ಪಿಡಿಒಗೆ ಮರಾಠಿ ಮಾತನಾಡುವಂತೆ ಮರಾಠಿ ಪುಂಡ ಬೆದರಿಕೆ ಹಾಕಿರುವ ಕ್ರಮ ಖಂಡನೀಯ.
ಇಂತಹ ಘಟನೆಗಳಿಂದಾಗಿ ಗಡಿಭಾಗದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ. ಎಂಇಎಸ್ ಪುಂಡರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಗಣಾಚಾರಿ ಗಲ್ಲಿಯ ಸಮುದಾಯ ಭವನದ ಜಾಗ ವಿವಾದ ಹಾಗೂ ಅಂಬೇವಾಡಿ ಗ್ರಾಪಂ ಕಾರ್ಯದರ್ಶಿ ನಾಗಪ್ಪ ಕೊಡಲಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಹಿಂದೆ ಎಂಇಎಸ್ ನಾಯಕರ ಕೈವಾಡ ಇದೆ. ಈ ಎರಡೂ ಪ್ರಕರಣದಲ್ಲಿ ಎಂಇಎಸ್ ಕಾರ್ಯಕರ್ತರೇ ಇದ್ದಾರೆ. ಗಣಾಚಾರಿ ಗಲ್ಲಿಯ ಜಾಗ ವಿವಾದದ ಹಿಂದೆ ಎಂಇಎಸ್ ಕಾರ್ಯಕರ್ತ. ಮಾಜಿ ನಗರ ಸೇವಕ ರಾಕೇಶ ಪಲ್ಲಂಗೆ ಇದ್ದಾರೆ. ಅದರಂತೆ ಅಂಬೇವಾಡಿ ಗ್ರಾಪಂ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದವರು ಕೂಡ ಎಂಇಎಸ್ ನಾಯಕರೇ ಆಗಿದ್ದಾರೆ. ಆದರೆ, ನಾಗಪ್ಪ ಕೊಡ್ಲಿ ಅವರಿಂದ ಅಧಿಕಾರಿಗಳೇ ಒತ್ತಾಯಪೂರ್ವಕ ಹೇಳಿಕೆ ಕೊಡಿಸಿದ್ದಾರೆ. ಅಧಿಕಾರಿಗಳ ಆತ್ಮಸ್ಥೈರ್ಯವನ್ನು ಕುಂದಿಸುವ ಕೆಲಸವನ್ನು ಎಂಇಎಸ್ ಮಾಡುತ್ತಿದೆ ಎಂದು ಆರೋಪಿಸಿದರು.