ಕನ್ನಡಪ್ರಭ ವಾರ್ತೆ ಹಾಸನ

ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಮೂಡಿಸಿ ನಶೆ ಮುಕ್ತ ಸಮಾಜ ನಿರ್ಮಾಣದ ಸಂದೇಶ ಸಾರುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಎಂಬ ಘೋಷವಾಕ್ಯದಡಿ ಮ್ಯಾರಥಾನ್ ಓಟಕ್ಕೆ ಭಾನುವಾರ ಬೆಳಿಗ್ಗೆ ಸಂಸದ ಶ್ರೇಯಸ್ ಎಂ. ಪಟೇಲ್ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದರು, ಡ್ರಗ್ಸ್ ವ್ಯಸನವು ಯುವಜನಾಂಗದ ಭವಿಷ್ಯವನ್ನು ಕತ್ತಲೆಯತ್ತ ತಳ್ಳುತ್ತಿದೆ. ಮನಸ್ಸು ವ್ಯಸನದಿಂದ ಮುಕ್ತವಾದರೆ ಮಾತ್ರ ನಶೆ ಮುಕ್ತ ಭಾರತ ನಿರ್ಮಾಣ ಸಾಧ್ಯ. ದೈಹಿಕವಾಗಿ ಸದೃಢರಾಗಿರುವ ಯುವಕರು ಮಾನಸಿಕವಾಗಿ ಸಹ ದೃಢರಾಗುತ್ತಾರೆ. ಇಂತಹ ಮ್ಯಾರಥಾನ್‌ಗಳು ಕೇವಲ ಕ್ರೀಡಾ ಚಟುವಟಿಕೆ ಅಲ್ಲ ಸಮಾಜ ಪರಿವರ್ತನೆಯ ಸಂಕೇತ. ಪೊಲೀಸ್ ಇಲಾಖೆ ಸಮಾಜದ ಕಾನೂನು-ಸುವ್ಯವಸ್ಥೆ ಕಾಪಾಡುವ ಜೊತೆಗೆ ಜನಜಾಗೃತಿ ಕಾರ್ಯಕ್ರಮಗಳ ಮೂಲಕವೂ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಶ್ಲಾಘಿಸಿದರು.

ಜಿಲ್ಲೆಯಲ್ಲಿ ಒಂದು ಐತಿಹಾಸಿಕ ಮ್ಯಾರಾಥಾನ್ ಓಟವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಎಸ್.ಬಿ.ಐ. ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ನಮ್ಮ ಪೊಲೀಸ್ ನಮ್ಮ ಹೆಮ್ಮೆ ಹೆಸರಿನಲ್ಲಿ 5 ಕಿ.ಮೀ. ಓಟವನ್ನು ಶುರುಮಾಡಲಾಗಿದೆ. ಇದರ ಉದ್ದೇಶ ಎಂದರೇ ನಶೆ ಮುಕ್ತ ಭಾರತ ಮಾಡುವುದು. ಇವತ್ತು ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಲು ಅರ್ಥಗರ್ಭಿತವಾದಂತಹ ಮ್ಯಾರಥಾನ್ ಓಟ ಇದಾಗಿದೆ ಎಂದು ಹೇಳಿದರು. ಜಿಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಇಲಾಖೆಯ ಅದಿಕಾರಿಗಳು ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಮಾದಕ ವಸ್ತುಗಳ ನಿಷೇಧದ ಕುರಿತು ಯುವಜನರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ. ಎಲ್ಲಾ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರು ಕೈಜೋಡಿಸಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಯುವಕರು ದುಶ್ಚಟಗಳಿಂದ ದೂರವಿದ್ದು ಕ್ರೀಡೆ ಮತ್ತು ಸಕಾರಾತ್ಮಕ ಚಟುವಟಿಕೆಗಳತ್ತ ಮುಖ ಮಾಡಬೇಕು ಎಂದು ಸಲಹೆ ನೀಡಿದರು. .


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಮಾತನಾಡಿ, ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ರಾಜ್ಯಾದ್ಯಂತ ೫ ಮತ್ತು ೧೦ ಕಿ.ಮೀ. ಮ್ಯಾರಥಾನ್‌ಗಳನ್ನು ಆಯೋಜಿಸಲಾಗಿದ್ದು, ಡ್ರಗ್ಸ್ ಮುಕ್ತ ಸಮಾಜ ಹಾಗೂ ಅಪರಾಧ ಪ್ರಮಾಣ ಕಡಿಮೆಗೊಳಿಸುವುದು ಮುಖ್ಯ ಗುರಿ ಎಂದು ತಿಳಿಸಿದರು. ಯುವಜನಾಂಗವನ್ನು ತಪ್ಪು ದಾರಿಯಿಂದ ದೂರವಿಡಲು ಇಂತಹ ಜಾಗೃತಿ ಕಾರ್ಯಕ್ರಮಗಳು ಪರಿಣಾಮಕಾರಿ ಎಂದರು.೫ ಕಿ.ಮೀ. ವಿಭಾಗಗಳಲ್ಲಿ ನಡೆದ ಈ ಓಟದಲ್ಲಿ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಸರ್ಕಾರಿ ನೌಕರರು ಸೇರಿದಂತೆ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿಸಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಕೆ. ದಾಕ್ಷಾಯಿಣಿ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಎಸ್‌ಡಿಎಂ ಕಾಲೇಜು ಮತ್ತು ಆಸ್ಪತ್ರೆಯ ಪ್ರಸನ್ನ ಎಮ್. ರಾವ್, ಶೈಲಜಾ, ಭಾರತೀಯ ರೆಡ್ ಕ್ರಾಸ್ ಛೇರ್‍ಮನ್ ಎಚ್. ಪಿ. ಮೋಹನ್, ಅರಣ್ಯಾಧಿಕಾರಿ ಹೇಮಂತ್, ಎಎಸ್ಪಿ ತಮ್ಮಣ್ಣಗೌಡ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಐ.ಜಿ. ರಮೇಶ್, ಲಯನ್ಸ್ ಹಾಸನಾಂಬಾ ಕ್ಲಬ್ ಅಧ್ಯಕ್ಷ ಕೆ.ಕೆ. ಮೋಹನ್ ಕುಮಾರ್, ಶಬ್ಬೀರ್‌ ಅಹಮದ್ ಹಾಗೂ ಇತರರು ಉಪಸ್ಥಿತರಿದ್ದರು.