ಎಚ್‌ಐವಿ ಜಾಗೃತಿಗೆ ಸೆ.11 ರಂದು ಮ್ಯಾರಥಾನ್

| Published : Aug 28 2024, 12:52 AM IST

ಸಾರಾಂಶ

ಮ್ಯಾರಥಾನ್ ಸ್ಪರ್ಧೆಗೆ 17 ರಿಂದ 25 ವರ್ಷದವರು ಒಟ್ಟು 250 ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ನಗರದ ಸರ್.ಎಂ.ವಿ.ಕ್ರೀಡಾಂಗಣದಿಂದ ಮ್ಯಾರಥಾನ್ ಪ್ರಾರಂಭವಾಗಿ ನಗರದ ಮುಖ್ಯ ರಸ್ತೆಗಳಲ್ಲಿ ಒಟ್ಟು 5 ಕಿ.ಮೀ. ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾರಕ ರೋಗ ಎಚ್‌ಐವಿ ಹರಡದಂತೆ ತಡೆಗಟ್ಟಲು ಮತ್ತು ಯುವಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಸೆ.11 ರಂದು ಯುವಜನೋತ್ಸವ ಅಂಗವಾಗಿ ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಎನ್ ಆಶಾಲತಾ ಹೇಳಿದರು.

ಜಿಲ್ಲಾ ಪಂಚಾಯ್ತಿನಲ್ಲಿ ನಡೆದ ಎಚ್‌ಐವಿ ತಡೆಗಟ್ಟಲು ತೀವ್ರಗೊಳಿಸದ ಐಇಸಿ ಪ್ರಚಾಂದೋಲನ ಸಭೆ ನಡೆಸಿ ಮಾತನಾಡಿ, ಮ್ಯಾರಥಾನ್ ಸ್ಪರ್ಧೆಗೆ 17 ರಿಂದ 25 ವರ್ಷದವರು ಒಟ್ಟು 250 ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ನಗರದ ಸರ್.ಎಂ.ವಿ.ಕ್ರೀಡಾಂಗಣದಿಂದ ಮ್ಯಾರಥಾನ್ ಪ್ರಾರಂಭವಾಗಿ ನಗರದ ಮುಖ್ಯ ರಸ್ತೆಗಳಲ್ಲಿ ಒಟ್ಟು 5 ಕಿ.ಮೀ. ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದೆ ಎಂದರು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ ಮೋಹನ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ವೈದ್ಯಕೀಯ ಶಿಕ್ಷಣ ಸಂಸ್ಥೆಯ ಅಧೀಕ್ಷಕ ಡಾ.ಶಿವಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಚೆಲುವಯ್ಯ ಸೇರಿದಂತೆ ಇತರರಿದ್ದರು.ನಾಳೆ ರಸ್ತೆ ಓಟ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ರವರ ಜನ್ಮ ದಿನದ ಅಂಗವಾಗಿ ರಸ್ತೆ ಓಟ ಕಾರ್ಯಕ್ರಮವನ್ನು ಆ.೨೯ ರಂದು ಬೆಳಿಗ್ಗೆ ೭ ಗಂಟೆಗೆ ಮಂಡ್ಯ ನಗರದ ಸರ್.ಎಂ.ವಿಶ್ವೇಶ್ವರಯ್ಯ ಹೊರಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ರಸ್ತೆ ಓಟ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಆ.೨೮ ರಂದು ಸಂಜೆ ೫ ಗಂಟೆಯೊಳಗೆ ಮಂಡ್ಯ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳತಕ್ಕದ್ದು ಅಥವಾ ಮೊಬೈಲ್ ಸಂಖ್ಯೆ ೯೯೧೬೬೪೪೦೦೭ ಮೂಲಕವಾದರೂ ನೋಂದಾಯಿಸಿಕೊಳ್ಳಬಹುದು.ಸ್ಪರ್ಧೆಯು ೩ ವಿಭಾಗದಲ್ಲಿ ನಡೆಯಲಿದ್ದು ೧೦ ರಿಂದ ೧೭ ವರ್ಷ ಒಳಪಟ್ಟ ಬಾಲಕ ಮತ್ತು ಬಾಲಕಿಯರ ವಿಭಾಗ, ೧೮ ರಿಂದ ೨೯ ವರ್ಷ ಒಳಪಟ್ಟ ಯುವಕ ಮತ್ತು ಯುವತಿಯರ ವಿಭಾಗ, ೩೦ ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರು ಮೂರು ವಿಭಾಗದಲ್ಲಿ ನಡೆಯಲಿದೆ. ವಿಜೇತರಿಗೆ ಪ್ರಥಮ-೧೫೦೦ ರು., ದ್ವಿತೀಯ- ೧೦೦೦ ರು. ಹಾಗೂ ತೃತೀಯ ಬಹುಮಾನ ೫೦೦ ರು. ನೀಡಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.