ಸಾರಾಂಶ
ಚಿತ್ರದುರ್ಗ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಏ.26ರಂದು ಮತದಾನ ನಡೆಯಲಿದ್ದು, ಜಿಲ್ಲೆಯ ಎಲ್ಲ ಮತದಾರರು ತಪ್ಪದೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಹೇಳಿದರು.
ನಗರದ ಒನಕೆ ಓಬವ್ವ ಕ್ರೀಡಾಂಗಣದ ಸಮೀಪ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಸ್ವೀಪ್ ಸಮಿತಿವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿಗಾಗಿ ಮ್ಯಾರಥಾನ್ ಓಟಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಚುನಾವಣೆ ಅಂಗವಾಗಿ ಮತದಾರರಲ್ಲಿ ಜಾಗೃತಿ ಮೂಡಿಸಲು ಹಾಗೂ ಮತದಾನ ಪ್ರಮಾಣ ಹೆಚ್ಚಳ ಮಾಡುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಎಲ್ಲ ಮತದಾರರು ಚುನಾವಣೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ಸದೃಢಗೊಳಿಸಬೇಕು ಎಂದು ಹೇಳಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ ನಾಗಸಮುದ್ರ ಮಾತನಾಡಿ, ಮತದಾನ ನಮ್ಮೆಲ್ಲರ ಕರ್ತವ್ಯ. ಸುಭದ್ರ ದೇಶಕ್ಕೆ ಎಲ್ಲರೂ ಮತದಾನ ಮಾಡುವುದು ಅತ್ಯಾವಶ್ಯಕ. ನೀವೂ ಮತದಾನ ಮಾಡಿ ಹಾಗೂ ಇತರರನ್ನೂ ಮತದಾನ ಮಾಡಲು ಪ್ರೇರೇಪಿಸಿ ಎಂದು ಕರೆ ನೀಡಿದರು.ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ಮ್ಯಾರಥಾನ್ ಓಟದ ಸ್ಪರ್ಧೆ ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದಿಂದ ಪ್ರಾರಂಭವಾಗಿ ಪಾರ್ಕ್ ರೋಡ್, ಜೋಗಿಮಟ್ಟಿ ರಸ್ತೆ, ರಂಗಯ್ಯನಬಾಗಿಲು, ಉಚ್ಚಂಗಿ ಯಲ್ಲಮ್ಮ ದೇವಸ್ಥಾನ, ಆನೆ ಬಾಗಿಲು, ಮಹಾತ್ಮ ಗಾಂಧಿ ವೃತ್ತ, ಬಿ.ಡಿ ವೃತ್ತ, ಪ್ರವಾಸಿ ಮಂದಿರ ಮಾರ್ಗವಾಗಿ ಮದಕರಿ ವೃತ್ತ, ಎಲ್‍ಐಸಿ ಮುಂಭಾಗ, ಸ್ಟೇಡಿಯಂ ರಸ್ತೆ ಮೂಲಕ ಒನಕೆ ಓಬವ್ವ ಕ್ರೀಡಾಂಗಣದವರೆಗೆ ನಡೆಯಿತು.
ಮ್ಯಾರಥಾನ್ ಮುಕ್ತಾಯ ಹಂತವಾದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಮ್ಯಾರಥಾನ್ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳಾ ವಿಭಾಗದಲ್ಲಿ ಆರು ಜನರಿಗೆ ಹಾಗೂ ಪುರುಷರ ವಿಭಾಗದಲ್ಲಿ ಆರು ಜನರಿಗೆ ಬಹುಮಾನ, ಪ್ರಶಸ್ತಿ ವಿತರಿಸಲಾಯಿತು. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಯಿತು.ಇದೇ ಸಂದರ್ಭದಲ್ಲಿ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಆರೋಗ್ಯಕರ ಪಾನಿಯವಾದ ಹುಣಸೆ ಹಣ್ಣು, ಬೆಲ್ಲ, ಜೀರಿಗೆ, ಕಾಳುಮೆಣಸು ಸೇರಿಸಿ ತಯಾರಿಸಿದ ಚಿಂಚಾ ಪಾನಕ ವಿತರಿಸಲಾಯಿತು. ಈ ಪಾನಕವು ದೇಹದ ಉಷ್ಣತೆ ಕಡಿಮೆ ಮಾಡಿ ಶ್ರಮ ತಗ್ಗಿಸುತ್ತದೆ. ಆದ ಕಾರಣ ಸಾರ್ವಜನಿಕರು ಇದನ್ನು ಬಳಸಬೇಕೆಂದು ಹಾಗೂ ಸಾರ್ವಜನಿಕರಿಗೆ ಇದರ ತಯಾರಿಕಾ ವಿಧಾನದ ಕರಪತ್ರವನ್ನೂ ವಿತರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಆಯುಷ್ ವೈದ್ಯಾಧಿಕಾರಿ ಡಾ.ಶಿವಕುಮಾರ್, ಸ್ವಿಪ್ ಸಮಿತಿ ಜಿಲ್ಲಾ ಸಂಯೋಜಕಿ ಸುಷ್ಮಾ ರಾಣಿ ಸೇರಿದಂತೆ ಜಿಲ್ಲೆಯ ಕ್ರೀಡಾಪಟುಗಳು, ಯುವಕ-ಯುವತಿಯರು, ಸ್ವಯಂ ಸೇವಾ ಸಂಸ್ಥೆಯ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.