ಮರವಂತೆ: ಸಮುದ್ರ ಸೇರಿದ 115 ಆಮೆ ಮರಿ!

| Published : Mar 15 2025, 01:02 AM IST

ಸಾರಾಂಶ

40 ದಿನಗಳ ಹಿಂದೆ ಮರವಂತೆ ಮತ್ತು ತಾರಾಪತಿ ಕಡಲ ಕಿನಾರೆಯಲ್ಲಿ ಕಡಲಾಮೆಗಳ ಮೊಟ್ಟೆಗಳಿಟ್ಟಿದ್ದವು. ಅವುಗಳನ್ನು ಸ್ಥಳೀಯ ಆಸಕ್ತರು ಗುರುತಿಸಿ, ಅವುಗಳ ಸುತ್ತ ಆವರಣ, ಹ್ಯಾಚರಿ (ಮೊಟ್ಟೆಕೇಂದ್ರ) ನಿರ್ಮಿಸಿ ಸಂರಕ್ಷಣೆ ಮಾಡಿದ್ದರು. ಅದರಲ್ಲಿ ಮರವಂತೆ ‘ಹ್ಯಾಚರಿ’ಯಲ್ಲಿ ಗುರುವಾರ ರಾತ್ರಿ ಮೊಟ್ಟೆಗಳು ಒಡೆದು ಸುಮಾರು 115 ಮರಿಗಳು ಹೊರಬಂದು ಕಡಲು ಸೇರಿವೆ.

ಕನ್ನಡಪ್ರಭ ವಾರ್ತೆ ಬೈಂದೂರು

ಪ್ರತಿವರ್ಷದಂತೆ ಈ ಬಾರಿಯೂ ಇಲ್ಲಿನ ಮರವಂತೆ ಸಮುದ್ರ ತೀರದಲ್ಲಿ ಆಲೀವ್‌ ರಿಡ್ಲೆ ಪ್ರಬೇಧದ ಕಡಲಾಮೆಗಳು ಮೊಟ್ಟೆ ಇಟ್ಟಿದ್ದು, ಅವು ಇದೀಗ ಸುರಕ್ಷಿತವಾಗಿ ಒಡೆದು ಮರಿಗಳು ಹೊರಗೆ ಬಂದು ಸಮುದ್ರ ಸೇರಿವೆ.

ಸುಮಾರು 40 ದಿನಗಳ ಹಿಂದೆ ಮರವಂತೆ ಮತ್ತು ತಾರಾಪತಿ ಕಡಲ ಕಿನಾರೆಯಲ್ಲಿ ಕಡಲಾಮೆಗಳ ಮೊಟ್ಟೆಗಳಿಟ್ಟಿದ್ದವು. ಅವುಗಳನ್ನು ಸ್ಥಳೀಯ ಆಸಕ್ತರು ಗುರುತಿಸಿ, ಅವುಗಳ ಸುತ್ತ ಆವರಣ, ಹ್ಯಾಚರಿ (ಮೊಟ್ಟೆಕೇಂದ್ರ) ನಿರ್ಮಿಸಿ ಸಂರಕ್ಷಣೆ ಮಾಡಿದ್ದರು. ಅದರಲ್ಲಿ ಮರವಂತೆ ‘ಹ್ಯಾಚರಿ’ಯಲ್ಲಿ ಗುರುವಾರ ರಾತ್ರಿ ಮೊಟ್ಟೆಗಳು ಒಡೆದು ಸುಮಾರು 115 ಮರಿಗಳು ಹೊರಬಂದು ಕಡಲು ಸೇರಿವೆ.

ಮರವಂತೆ ಹಾಗೂ ತಾರಾಪತಿಯಲ್ಲಿ ಪ್ರತ್ಯೇಕ 2 ಹ್ಯಾಚರಿ ನಿರ್ಮಿಸಲಾಗಿತ್ತು. ಗುರುವಾರ ರಾತ್ರಿ ಮರವಂತೆ ಹ್ಯಾಚರಿಗಳಿಂದ ಒಟ್ಟು 115 ಕಡಲಾಮೆ ಮರಿಗಳು ಹೊರಕ್ಕೆ ಬಂದಿದ್ದು ಹೊರಕ್ಕೆ ಬಂದ ಕಡಲಾಮೆ ಮರಿಗಳು ನೈಸರ್ಗಿಕವಾಗಿ ಕಡಲು ಸೇರಲು ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಮೀನುಗಾರರು ಒಗ್ಗೂಡಿ ಅನುವು ಮಾಡಿಕೊಟ್ಟರು. ತಾರಾಪತಿಯ ಹ್ಯಾಚರಿಯಿಂದ ಮುಂದಿನ ವಾರದಲ್ಲಿ ಮರಿಗಳು ಬರುವ ನಿರೀಕ್ಷೆಯಿದೆ.

ಸಮುದ್ರದಿಂದ ಹೊರಬಂದು ದಡದಲ್ಲಿ ಕಡಲಾಮೆಗಳು ಮೊಟ್ಟೆಯಿಟ್ಟ 48-60 ದಿನದಲ್ಲಿ ಮರಿಗಳು ಹೊರಬರುತ್ತವೆ. ಮೊಟ್ಟೆಗಳ ಸಂರಕ್ಷಣೆ, ವೀಕ್ಷಣೆ ಹಾಗೂ ಅಂತಿಮ ಫಲಿತಾಂಶದ ನಿಟ್ಟಿನಲ್ಲಿ 40ಕ್ಕೂ ಅಧಿಕ ದಿನಗಳಿಂದ ಮುತುವರ್ಜಿ ವಹಿಸಿದ್ದು ಮಾತ್ರವಲ್ಲದೆ ಮರಿಯೊಡೆಯುವ ರಾತ್ರಿ ತನಕವೂ ನಿಗಾವಹಿಸಿದ್ದ ಅರಣ್ಯ ಇಲಾಖೆ, ಸ್ಥಳೀಯರ ಕಾರ್ಯ ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರವಾಗಿದೆ. ಅಳಿವಿನಂಚಿನಲ್ಲಿರುವ ಕಡಲಾಮೆ ಮೊಟ್ಟೆಗಳನ್ನು ಅಲ್ಲಲ್ಲೇ ನೈಸರ್ಗಿಕವಾಗಿ ಹ್ಯಾಚರಿ ನಿರ್ಮಿಸುವ ಮೂಲಕ ಸಂರಕ್ಷಿಸಲಾಗಿತ್ತು. ಕಡಲಿನ ಸ್ವಚ್ಛತೆ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಅಳಿವಿನ ಅಂಚಲ್ಲಿರುವ ಕಡಲಾಮೆ ರಕ್ಷಣೆ ಆಗುತ್ತಿದೆ.