ಚಿಕ್ಕಮಗಳೂರುನಗರದ ಕಲ್ಯಾಣ ಮಂಟಪಕ್ಕೆ ನುಗ್ಗಿದ ಮಂಗಳಮುಖಿಯರು ₹10 ಸಾವಿರಕ್ಕೆ ಬೇಡಿಕೆ ಇಟ್ಟು ರಂಪಾಟ ನಡೆಸಿದ ಘಟನೆ ಬುಧವಾರ ನಡೆದಿದೆ.

₹10 ಸಾವಿರ ಕ್ಕೆ ಬೇಡಿಕೆ । ಅಸಭ್ಯ ವರ್ತನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಗರದ ಕಲ್ಯಾಣ ಮಂಟಪಕ್ಕೆ ನುಗ್ಗಿದ ಮಂಗಳಮುಖಿಯರು ₹10 ಸಾವಿರಕ್ಕೆ ಬೇಡಿಕೆ ಇಟ್ಟು ರಂಪಾಟ ನಡೆಸಿದ ಘಟನೆ ಬುಧವಾರ ನಡೆದಿದೆ.

ಚಿಕ್ಕಮಗಳೂರು ನಗರದ ಪ್ರಸಿದ್ಧ ರಂಗಣ್ಣನ ಛತ್ರದಲ್ಲಿ ಬುಧವಾರ ವಿಜೃಂಭಣೆಯಿಂದ ಮದುವೆ ಸಮಾರಂಭ ನಡೆಯುತ್ತಿತ್ತು. ಈ ವೇಳೆ ನುಗ್ಗಿದ ಮಂಗಳಮುಖಿಯರು ಹಣಕ್ಕಾಗಿ ರಂಪಾಟ ನಡೆಸಿ ಮದುವೆ ಸಂಭ್ರಮವನ್ನೇ ಕೆಡಿಸಿದ ಘಟನೆ ನಡೆದಿದೆ.

ಹಸೆಮಣೆ ಏರಿದ್ದ ವಧು-ವರರಿಗೆ ಅತಿಥಿಗಳು ಶುಭ ಹಾರೈಸುತ್ತಿದ್ದಾಗ ಇಬ್ಬರು ಮಂಗಳಮುಖಿಯರು ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಂಪ್ರದಾಯದಂತೆ ಮದುವೆ ಮನೆಯವರು ₹500 ನೀಡಲು ಮುಂದಾದಾಗ ನಿರಾಕರಿಸಿದ ಮಂಗಳ ಮುಖಿಯರು ಬರೋಬ್ಬರಿ ₹10 ಸಾವಿರ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.ಅಷ್ಟು ದೊಡ್ಡ ಮೊತ್ತ ನೀಡಲು ನಿರಾಕರಿಸಿದಾಗ, ಮಂಗಳಮುಖಿಯರು ಮಂಟಪದ ಮೇಲೆಯೇ ರಂಪಾಟ ಆರಂಭಿಸಿದ್ದಾರೆ.

ವಧು-ವರರ ಮುಂದೆಯೇ ಅಸಭ್ಯವಾಗಿ ವರ್ತಿಸಿ, ಜೋರಾಗಿ ಕಿರುಚಾಡಿದ್ದಾರೆ. ''''''''ನಿಮಗೆ ಹಣ ಕೊಡೋ ಯೋಗ್ಯತೆ ಇಲ್ವಾ?'''''''' ಎಂದು ಮನೆಯವರನ್ನು ಏಕವಚನದಲ್ಲೇ ನಿಂದಿಸಿದ್ದಾರೆ.ಈ ವರ್ತನೆಯಿಂದ ಮದುವೆಗೆ ಬಂದಿದ್ದ ಹೆಣ್ಣುಮಕ್ಕಳು ಹಾಗೂ ಹಿರಿಯರು ಮುಜುಗರಕ್ಕೊಳಗಾದರು.

ಈ ಅಸಭ್ಯ ವರ್ತನೆ ಕಂಡು ಕೆಲವರು ಪ್ರಶ್ನೆ ಮಾಡಿದಾಗ, ಅವರ ವಿರುದ್ಧವೂ ಕಿಡಿಕಾರಿ ''''''''ದಮ್ಮಿದ್ದರೆ ಹೊರಗೆ ಬಾ, ನಿನ್ನನ್ನು ನೋಡಿಕೊಳ್ಳುತ್ತೇವೆ'''''''' ಎಂದು ಬೆದರಿಕೆ ಹಾಕಿದ್ದಾರೆ.

ಅವಾಚ್ಯ ಶಬ್ದಗಳಿಂದ ಬೈಯುತ್ತಾ ಗದ್ದಲ ಸೃಷ್ಟಿಸಿದ್ದರಿಂದ, ಮಂಗಳವಾದ್ಯದ ಸದ್ದಿಗಿಂತ ಮಂಗಳಮುಖಿಯರ ಕಿರುಚಾಟವೇ ಹೆಚ್ಚಾಗಿ ಸಂಭ್ರಮದಿಂದ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಮದುವೆ ಅಥವಾ ಶುಭ ಸಮಾರಂಭಗಳಲ್ಲಿ ಮಂಗಳಮುಖಿಯರು ಬಂದು ಹರಸಿ ದುಡ್ಡು ಪಡೆದು ಹೋಗುವುದು ವಾಡಿಕೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ರೀತಿ ದಬ್ಬಾಳಿಕೆ ನಡೆಸುವುದು ಮತ್ತು ಸಾರ್ವಜನಿಕವಾಗಿ ಅವಮಾನ ಮಾಡುವುದು ಹೆಚ್ಚಾಗುತ್ತಿದೆ. ಚಿಕ್ಕ ಮಗಳೂರಿನ ಈ ಘಟನೆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಇಂತಹ ಕಿರುಕುಳದ ವಿರುದ್ಧ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿದ್ದಾರೆ.