ಕರ್ನಾಟಕದಲ್ಲಿ ತೋಟಗಾರಿಕೆ ಕ್ರಾಂತಿಗೆ ಮರಿಗೌಡರು ಮುಖ್ಯ ಕಾರಣ-ಡಾ. ಗುರುಪ್ರಸಾದ

| Published : Aug 11 2024, 01:30 AM IST

ಕರ್ನಾಟಕದಲ್ಲಿ ತೋಟಗಾರಿಕೆ ಕ್ರಾಂತಿಗೆ ಮರಿಗೌಡರು ಮುಖ್ಯ ಕಾರಣ-ಡಾ. ಗುರುಪ್ರಸಾದ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದಲ್ಲಿ ತೋಟಗಾರಿಕೆ ಕ್ರಾಂತಿಗೆ ಮರಿಗೌಡರವರು ಮುಖ್ಯ ಕಾರಣ. ಇವರಿಂದ ರಾಜ್ಯವು ದೇಶದಲ್ಲಿಯೇ ತೋಟಗಾರಿಕಾ ರಾಜ್ಯವಾಗಿ ಹೊರಹೊಮ್ಮಲು ಸಾಧ್ಯವಾಯಿತು ಎಂದು ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ.ಎಸ್. ಹೇಳಿದರು.

ರಾಣಿಬೆನ್ನೂರು: ಕರ್ನಾಟಕದಲ್ಲಿ ತೋಟಗಾರಿಕೆ ಕ್ರಾಂತಿಗೆ ಮರಿಗೌಡರವರು ಮುಖ್ಯ ಕಾರಣ. ಇವರಿಂದ ರಾಜ್ಯವು ದೇಶದಲ್ಲಿಯೇ ತೋಟಗಾರಿಕಾ ರಾಜ್ಯವಾಗಿ ಹೊರಹೊಮ್ಮಲು ಸಾಧ್ಯವಾಯಿತು ಎಂದು ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ.ಎಸ್. ಹೇಳಿದರು. ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಇಲಾಖೆಯ ಆತ್ಮಾಯೋಜನೆ ಸಹಯೋಗದಲ್ಲಿ ಕರ್ನಾಟಕ ತೋಟಗಾರಿಕೆ ಪಿತಾಮಹ ಡಾ. ಎಮ್ ಎಚ್. ಮರಿಗೌಡರ ಅವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ ತೋಟಗಾರಿಕೆ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಸ್ಯಕ್ಷೇತ್ರ, ಹಾಪ್‌ಕಾಮ್ಸ್ ಸೇರಿದಂತೆ ಒಟ್ಟಾರೆ ತೋಟಗಾರಿಕೆ ಇಲಾಖೆ ಅಭಿವೃದ್ಧಿಗೆ ಎಮ್. ಎಚ್. ಮರಿಗೌಡರ ಅವರ ಕೊಡುಗೆ ಅಪಾರ ಎಂದರು. ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯ ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕ ಡಾ. ಬಾಬು ಪಿ. ಮಾತನಾಡಿ, ಗೋಡಂಬಿ ಬೆಳೆಯು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಅಧಿಕ ಮೌಲ್ಯದ್ದಾಗಿದ್ದು, ನಮ್ಮ ದೇಶದ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ಅದು ಗಮನಾರ್ಹ ಪಾತ್ರ ವಹಿಸುತ್ತದೆ. ಇಂದು ಗೇರು ನಮ್ಮ ದೇಶದ ಪ್ರಮುಖ ವಿದೇಶಿ ವಿನಿಯಮ ಗಳಿಕೆಯಲ್ಲೊಂದಾಗಿದೆ. ಗೋಡಂಬಿ ಬೆಳೆಯನ್ನು ಬೆಳೆಯಲು ಹೆಚ್ಚಿನ ಫಲವತ್ತತೆ ಭೂಮಿ ಹಾಗೂ ಸಾಕಷ್ಟು ನೀರಿನ ಅವಶ್ಯಕತೆ ಇರುವುದಿಲ್ಲ. ಈ ಬೆಳೆಯು ಕಠಿಣ ಹವಾಗುಣಕ್ಕೆ ಹೊಂದಿಕೊಳ್ಳುವ ಬೆಳೆಯಾಗಿದ್ದು, ಭಾರವಾದ ಜೇಡಿಮಣ್ಣು, ನೀರು ನಿಲ್ಲುವ ಲವಣಯುಕ್ತ ಮಣ್ಣನ್ನು ಹೊರತುಪಡಿಸಿ ವಿವಿಧ ರೀತಿಯ/ ಶ್ರೇಣಿಯ ಮಣ್ಣಿನಲ್ಲಿ ಬೆಳೆಯಬಹುದು. ಚೆನ್ನಾಗಿ ನೀರು ಬಸಿದುಹೋಗುವ ಕೆಂಪು, ಮರಳು ಮತ್ತು ಲ್ಯಾಟರೈಟ್ ಮಣ್ಣು ಈ ಬೆಳೆಯ ಉತ್ತಮ ಬೆಳವಣಿಗೆ ಮತ್ತು ಇಳುವರಿಗೆ ಸೂಕ್ತವಾಗಿವೆ. ರೈತರು ಈ ಬೆ‍ಳೆಯನ್ನು ಅಳವಡಿಸಿಕೊಂಡು ಲಾಭ ಪಡೆಯಬೇಕು ಎಂದರು. ಗೋಡಂಬಿಯ ವೆಂಗುರ್ಲಾ-3 ಮತ್ತು ವೆಂಗುರ್ಲಾ-4 ಮುಖ್ಯ ತಳಿಗಳ ಬಗ್ಗೆ ತಿಳಿಸುತ್ತಾ ಗೋಡಂಬಿ ಸಸಿಗಳ ನಾಟಿ ಅಂತರ, ಪೋಷಕಾಂಶಗಳ ನಿರ್ವಹಣೆ, ಚಾಟನಿ, ಮರದ ಆಕಾರದ ನಿರ್ವಹಣೆ ಮತ್ತು ಅಂತರ ಬೆಳೆ ಪದ್ಧತಿಗಳ ಬಗ್ಗೆ ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ್ ಎಚ್.ಎಮ್. ತಿಳಿಸಿದರು. ಕೇಂದ್ರದ ವಿಷಯ ತಜ್ಞೆ ಡಾ. ಅಕ್ಷತಾ ರಾಮಣ್ಣನವರ ಮಾತನಾಡಿ, ಗೋಡಂಬಿ ಬೀಜಗಳು ಶೇಖರಣೆಯ ಸಮಯದಲ್ಲಿ ಹಾಳಾಗುವುದನ್ನು ತಡೆಯಲು ಕೊಯ್ಲು ಮಾಡಿ ಸಂಗ್ರಹಿಸಿರುವ ಗೇರು ಬೀಜಗಳ ತೇವಾಂಶವನ್ನು ಶೇ 25 ರಿಂದ ಶೇ 9ಕ್ಕೆ ಕಡಿತಗೊಳಿಸಲು 2ರಿಂದ 3 ದಿನಗಳವೆರೆಗ ಸೂರ್ಯನ ಬಿಸಿಲಿನಲ್ಲಿ ಒಣಗಿಸುವುದು ಅತಿ ಅವಶ್ಯಕ. ಸರಿಯಾದ ಒಣಗಿಸುವಿಕೆಯೊಂದಿಗೆ, ಕರ್ನೆಲಗಳು (ಗೋಡಂಬಿ ಬೀಜಗಳು) ಅವುಗಳ ಗುಣಮಟ್ಟ ಹಾಗೂ ನಿರ್ದಿಷ್ಟವಾಗಿ ಪರಿಮಳವನ್ನು ಉಳಿಸಿಕೊಳ್ಳುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಗೇರು ಹಣ್ಣುಗಳು ಹಾಳಾಗುವುದನ್ನು ತಡೆಯಲು ಆಯಾ ಪ್ರದೇಶಕ್ಕನುಗುಣವಾಗಿ ಮೌಲ್ಯವರ್ಧಿತ ಪದಾರ್ಥಗಳಾದ ಗೋಡಂಬಿ ಹಣ್ಣಿನ ಸಿರಪ್, ಸ್ಕ್ಯಾಂಪ್ ಅಥವಾ ಫೆನ್ನಿ ಇವುಗಳನ್ನು ತಯಾರಿಸಿ ಹೆಚ್ಚಿನ ಆದಾಯ ನಿರೀಕ್ಷಿಸಬಹುದು ಎಂದರು. ತರಬೇತಿಯಲ್ಲಿ ಜಿಲ್ಲೆಯ 35ಕ್ಕೂ ಹೆಚ್ಚು ರೈತ /ರೈತ ಮಹಿಳೆಯರು ಹಾಜರಿದ್ದರು.