ಅರಣ್ಯಹಕ್ಕು ಸಮಿತಿ ಪುನರ್‌ ರಚನೆಗೆ ಮರಿಯಪ್ಪ ಆಗ್ರಹ

| Published : Nov 27 2024, 01:04 AM IST

ಸಾರಾಂಶ

ಎಲ್ಲಾ ಬುಡಕಟ್ಟು ಜನರಿಗೆ ಕನಿಷ್ಠ 5 ರಿಂದ 10 ಎಕರೆ ವರೆಗಿನ ಜಮೀನಿಗೆ ಹಕ್ಕುಪತ್ರ ನೀಡಬೇಕು ಹಾಗೂ ಅರಣ್ಯ ಹಕ್ಕು ಸಮಿತಿಯನ್ನು ಪುನರ್‌ ರಚಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ನ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಮರಿಯಪ್ಪ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಎಲ್ಲಾ ಬುಡಕಟ್ಟು ಜನರಿಗೆ ಕನಿಷ್ಠ 5 ರಿಂದ 10 ಎಕರೆ ವರೆಗಿನ ಜಮೀನಿಗೆ ಹಕ್ಕುಪತ್ರ ನೀಡಬೇಕು ಹಾಗೂ ಅರಣ್ಯ ಹಕ್ಕು ಸಮಿತಿಯನ್ನು ಪುನರ್‌ ರಚಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ನ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಮರಿಯಪ್ಪ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್‌.ಆರ್‌.ಪುರ, ಮೂಡಿಗೆರೆ ಹಾಗೂ ಕಳಸ ತಾಲೂಕುಗಳಲ್ಲಿ ಬಹಳ ವರ್ಷಗಳಿಂದ ಪರಿಶಿಷ್ಟ ಪಂಗಡದ ಗೌಡಲು ಬುಡಕಟ್ಟು ಜನಾಂಗದವರು ವಾಸವಾಗಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ, ಡ್ರೀಮ್ಡ್‌ ಫಾರೆಸ್ಟ್‌, 4(1) ಪ್ರಾಸ್ತವಿತ ಅರಣ್ಯ ಘೋಷಣೆ ಮಾಡಿರುವುದರಿಂದ ಕಿರು ಅರಣ್ಯ ಉತ್ಪನ್ನ ಮಾಡಲು ಮತ್ತು ಜಮೀನಿನ ಕೃಷಿ ಮಾಡಿ ಜೀವನ ಸಾಗಿಸಲು ಬಹಳ ತೊಂದರೆಯಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಬುಡಕಟ್ಟು ಕುಟುಂಬಗಳಿಗೆ ತಲಾ 4 ಎಕರೆ 38 ಗುಂಟೆ ಜಮೀನು ಮುಫತ್ತಾಗಿ ಕೊಡಬೇಕೆಂದು ಆಗಿನ ಕಂದಾಯ ಸಚಿವ ಬಸವಲಿಂಗಪ್ಪ ಅವರು ಒಂದಷ್ಟು ಜನರಿಗೆ ಹಕ್ಕು ಪತ್ರ ನೀಡಿದ್ದರು. ಅದರಲ್ಲಿ ಬುಡಕಟ್ಟು ನಿವಾಸಿಗರು ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಪಕ್ಕಾಪೋಡಿಯಾಗಿ ದುರಸ್ತಿ ಮಾಡಿಕೊಟ್ಟಿಲ್ಲ. ಈಗ ಪೋಡಿ ಮಾಡಿಸಲು ಹೋದರೆ ಅರಣ್ಯ ಇಲಾಖೆಯ ಅಭಿಪ್ರಾಯ ಪಡೆಯಿರಿ ಎನ್ನುತ್ತಾರೆ, ಅರಣ್ಯ ಇಲಾಖೆಯವರು ಅರಣ್ಯದ ಕಾರಣಕ್ಕಾಗಿ ತಮ್ಮ ಅಭಿಪ್ರಾಯ ನೀಡುತ್ತಿಲ್ಲ ಎಂದರು.

ಜಿಲ್ಲೆಯಲ್ಲಿ 12 ವಾಲ್ಮೀಕಿ ಆಶ್ರಮ ಶಾಲೆಗಳಿದ್ದು, ಇಲ್ಲಿಗೆ ಕಾಯಂ ಶಿಕ್ಷಕರು, ಅಡುಗೆಯವರು ಹಾಗೂ ರಾತ್ರಿ ಪಾಳೇಯದಲ್ಲಿ ಕಾವಲುಗಾರರನ್ನು ನೇಮಕ ಮಾಡಬೇಕು. ಇದರ ಜತೆಗೆ ಈ ಶಾಲೆಗಳನ್ನು 5 ರಿಂದ 10ನೇ ತರಗತಿಯವರೆಗೆ ಮೇಲ್ದರ್ಜೆಗೇರಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿದರು.

ಕಿರು ಅರಣ್ಯ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆ ಹಾಗೂ ಬೆಂಬಲ ಬೆಲೆ ನೀಡಬೇಕು. ಶೃಂಗೇರಿ ತಾಲೂಕಿನ ಕೆಮಸಿಗೆ ಗ್ರಾಮದ ತಾರೊಳ್ಳಿ ಕೊಡಿಗೆ ಗಿರಿಜನ ಕಾಲೋನಿ ರಸ್ತೆ ಹಾಗೂ ಬುಕ್ಕಡಿಬೈಲು, ಅಡಿಕೇಸು, ಮುಂಡಗಾರು ರಸ್ತೆ, ಹೊಳಲೆ, ಮಾವಿನಕೋಡು ಆವಿಗೆ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಬೇಕು. ಶೀರಲು ಗ್ರಾಮದ ಕೆಳಗಿನ ಶೀರಲು ಮತ್ತು ಮೇಲಿನ ಶೀರಲು ಗಿರಿಜನ ಕಾಲೋನಿಗೆ ಸೇತುವೆ ನಿರ್ಮಾಣ ಮಾಡಿ ಇಲ್ಲಿನ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದರು.

ಶೃಂಗೇರಿ ತಾಲೂಕಿನ ಕಚಿಗೆ ಮತ್ತು ಮುಂಡೋಡಿ ಗಿರಿಜನ ಕಾಲೋನಿ, ಕೊಪ್ಪ ತಾಲೂಕಿನ ಹರಳಾನೆ ಗ್ರಾಮದ ಮಾದಲಬೈಲು ಗಿರಿಜನ ಕಾಲೋನಿಗೆ ವಿದ್ಯುತ್‌ ಸೌಲಭ್ಯ ಒದಗಿಸಬೇಕು. ರಾಷ್ಟ್ರೀಯ ಉದ್ಯಾನವನದಿಂದ ಸ್ವಇಚ್ಚೆಯಿಂದ ಹೋಗುವುದನ್ನು ಹೊರತುಪಡಿಸಿ ಸರ್ಕಾರ ಹೊರ ಹಾಕುವುದಾದರೆ ಹೊರ ಹಾಕುವ ಆದೇಶವನ್ನು ಹೊರಡಿಸಬೇಕು ಎಂದು ಹೇಳಿದರು.