ಸಾರಾಂಶ
ವಿಶೇಷ ವರದಿ
ಹಾವೇರಿ: ನವರಾತ್ರಿ, ದೀಪಾವಳಿ ಸೇರಿದಂತೆ ಹಬ್ಬದ ದಿನಗಳಲ್ಲಿ ಮಾತ್ರ ಬೇಡಿಕೆ ಇರುತ್ತಿದ್ದ ಚೆಂಡು ಹೂವಿನ ಬೆಳೆ ಪ್ರಸ್ತುತ ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆಯಾಗುವತ್ತ ದಾಪುಗಾಲಿಡುತ್ತಿದೆ.ಉತ್ತಮ ಇಳುವರಿ ಮತ್ತು ದರವೂ ಸಿಗುತ್ತಿರುವುದರಿಂದ ರೈತರು ಚೆಂಡು ಹೂ ಬೆಳೆಯಲು ಆಸಕ್ತಿ ತೋರುತ್ತಿದ್ದು, ವರ್ಷದಿಂದ ವರ್ಷಕ್ಕೆ ಬೆಳೆ ಪ್ರದೇಶ ವಿಸ್ತರಣೆಯಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ನೈಸರ್ಗಿಕ ಬಣ್ಣದ ತಯಾರಿಕೆಯಲ್ಲಿ ಭಾರಿ ಪ್ರಮಾಣದಲ್ಲಿ ಚೆಂಡು ಹೂವಿನ ಬಳಕೆ ಮಾಡಲಾಗುತ್ತದೆ. ಇದರಿಂದ ದರ ಹೆಚ್ಚಾಗಿದೆ. ಅಲ್ಲದೇ ಕೀಟಬಾಧೆಯೂ ಕಡಿಮೆ ಇರುವ ಕಾರಣ ಉತ್ತಮ ಇಳುವರಿಯೂ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಚೆಂಡು ಹೂವಿನ ಬೆಳೆಗೆ ಮಾರು ಹೋಗುತ್ತಿದ್ದಾರೆ.ಮರುಕೊಳ್ಳುವಿಕೆಯ ಒಪ್ಪಂದ: ಜಿಲ್ಲೆಯಲ್ಲಿ ಹತ್ತಾರು ಖಾಸಗಿ ಕಂಪನಿಗಳು ನೈಸರ್ಗಿಕ ಬಣ್ಣಗಳ ತಯಾರಿಕೆಯಲ್ಲಿ ತೊಡಗಿಕೊಂಡಿವೆ. ಈ ಕಂಪನಿಯವರು ರೈತರಿಗೆ ಪ್ರತಿ ವರ್ಷ ಚೆಂಡು ಹೂವಿನ ಬೀಜ, ಅಗತ್ಯ ಗೊಬ್ಬರ, ಔಷಧ ಕೊಟ್ಟು ಮರು ಖರೀದಿಯ ಒಪ್ಪಂದ ಮಾಡಿಕೊಳ್ಳುತ್ತಿವೆ. ಕೆಲವು ಕಂಪನಿಯವರು ರೈತರ ಜತೆಗಿನ ಸತತ ಒಡನಾಟ, ವಹಿವಾಟಿನ ಬಳಿಕ ಬೆಳೆ ಬೆಳೆಯಲು ಮುಂಗಡ ಸಹ ಕೊಡುತ್ತಿವೆ. ರೈತರು ಶ್ರಮ ವಹಿಸಿ ಬೆಳೆ ಬೆಳೆದರೆ ಸಾಕು. ಖರ್ಚು ಮಾಡುವ ಅಗತ್ಯವಿಲ್ಲದೆ ಬೆಳೆ ಸಿಗುತ್ತದೆ. ಮಾರುಕಟ್ಟೆಯ ಜಂಜಾಟವೂ ಇಲ್ಲದಂತೆ ಕಂಪನಿಯವರೇ ಖರೀದಿಯನ್ನೂ ಮಾಡುವುದರಿಂದ ರೈತರಿಗೆ ಒತ್ತಡವೂ ಕಡಿಮೆಯಾಗಿದೆ. ಎಷ್ಟೇ ಇಳುವರಿ ಬಂದರೂ ನಷ್ಟವಂತೂ ಆಗುವುದಿಲ್ಲ. ಇದರಿಂದ ರೈತರು ಹೂವಿನ ಕೃಷಿಯತ್ತ ಒಲವು ತೋರುತ್ತಿದ್ದಾರೆ.
ಜಿಲ್ಲೆಯಲ್ಲಿ ಚೆಂಡು ಹೂವು ಒಂದು ಎಕರೆಗೆ ಸರಾಸರಿ 6-10 ಟನ್ ಇಳುವರಿ ಬರುತ್ತಿದೆ. ಚೆಂಡು ಹೂವಿನಲ್ಲೂ ವಿವಿಧ ತಳಿ ಮತ್ತು ಬಣ್ಣದ ವ್ಯತ್ಯಾಸಗಳಿವೆ. ನೈಸರ್ಗಿಕ ಬಣ್ಣ ತಯಾರಿಸುವ ಕಂಪನಿಗಳು ಕೇಸರಿ ಬಣ್ಣದ ಚೆಂಡು ಹೂವಿನ ಬೀಜವನ್ನು ಮಾತ್ರ ರೈತರಿಗೆ ಕೊಟ್ಟು, ಹೂವನ್ನು ರೈತರಿಂದ ಕೊಳ್ಳುತ್ತಾರೆ. ಉಳಿದಂತೆ ಹಳದಿ ಬಣ್ಣದ ಹೂವುಗಳು ಪೂಜೆಗೆ, ಅಲಂಕಾರಕ್ಕೆ ಮಾತ್ರ ಬಳಕೆಯಾಗುತ್ತದೆ.ದರ ಏರಿಕೆ-ಬೆಳೆ ಹೆಚ್ಚಳ: ಮೂರು ವರ್ಷಗಳ ಹಿಂದೆ ಖಾಸಗಿ ಕಂಪನಿಗಳು ರೈತರಿಂದ ಪ್ರತಿ ಕಿಲೋಗೆ ₹6 ದರದಲ್ಲಿ ಚೆಂಡು ಹೂವನ್ನು ಖರೀದಿಸುತ್ತಿದ್ದವು. ಪ್ರಸಕ್ತ ವರ್ಷ ₹9ಗಳಿಂದ ₹9.50 ವರೆಗೂ ಖರೀದಿಯಾಗುತ್ತಿದೆ.
ಕೆಲ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಸುಮಾರು 400 ಹೆಕ್ಟೇರ್‌ನಲ್ಲಿ ಚೆಂಡು ಹೂವು ಬೆಳೆಯಲಾಗುತ್ತಿತ್ತು. ಪ್ರಸಕ್ತ ವರ್ಷ ತೋಟಗಾರಿಕೆ ಇಲಾಖೆಯ ದಾಖಲೆ ಪ್ರಕಾರ 674 ಹೆಕ್ಟೇರ್‌ಗೆ ಬೆಳೆ ವಿಸ್ತರಣೆಯಾಗಿದೆ. ಬರುವ ವರ್ಷದಲ್ಲಿ ದರ ಪ್ರತಿ ಕಿಲೋಗೆ ₹10ಗಿಂತ ಹೆಚ್ಚಾಗುವ ಸಾಧ್ಯತೆ ಇದ್ದು ಬೆಳೆಯ ಕ್ಷೇತ್ರವೂ ವ್ಯಾಪಕವಾಗಿ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಅಂತರ ಬೆಳೆಯಾಗಿ ಚೆಂಡು ಹೂವು: ಕ್ಯಾಬೇಜ್, ಹೂಕೋಸು ಮೊದಲಾದ ತರಕಾರಿ ಬೆಳೆಗಳ ನಡುವೆ ಅಂತರ್ ಬೆಳೆಯಾಗಿ ಚೆಂಡು ಹೂವು ಬೆಳೆಯುವಂತೆ ತೋಟಗಾರಿಕಾ ಇಲಾಖೆ ಸಲಹೆ ನೀಡುತ್ತ ಬಂದಿದೆ. ತರಕಾರಿ ತೋಟದ ಗಡಿ ಭಾಗದಲ್ಲಿ ಚೆಂಡು ಹೂವು ಬೆಳೆಯುವುದರಿಂದ ಕೀಟಬಾಧೆ ನಿಯಂತ್ರಣಕ್ಕೆ ಬರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಹಳದಿ ಹೂವು ಬೀದಿಗೆ: ಕೇಸರಿ ಹೂವನ್ನು ಖರೀದಿಸುವ ಖಾಸಗಿ ಕಂಪನಿಗಳು ರೈತರು ಬೆಳೆಯುವ ಹಳದಿ ಚೆಂಡು ಹೂವನ್ನು ಖರೀದಿಸುತ್ತಿಲ್ಲ. ಹಬ್ಬದ ದಿನಗಳಲ್ಲಿ ಭಾರೀ ಬೇಡಿಕೆ ಬರುತ್ತದೆ ಎಂದು ರೈತರು ಬೆಳೆಯುವ ಚೆಂಡು ಹೂವಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ. ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳದೇ ಮಾರುಕಟ್ಟೆಗೆ ನೇರವಾಗಿ ತರುವ ಚೆಂಡು ಹೂವಿಗೆ ಬೆಲೆಯಿಲ್ಲದೇ ರಸ್ತೆ ಬದಿಯಲ್ಲಿ ಎಸೆಯುತ್ತಿದ್ದಾರೆ. ದೀಪಾವಳಿ ಹಬ್ಬಕ್ಕೆಂದು ಬೆಳೆದಿದ್ದ ರೈತರು ಈಗಲೇ ಕಟಾವಿಗೆ ಬಂದಿದ್ದರಿಂದ ಮಾರುಕಟ್ಟೆಗೆ ತಂದು ಕೂಲಿ ಖರ್ಚು ಕೂಡ ಸಿಗದೇ ರಸ್ತೆಗೆ ಚೆಂಡು ಹೂವು ಚೆಲ್ಲುತ್ತಿರುದ್ದಾರೆ. ದೀಪಾವಳಿ ಹಬ್ಬಕ್ಕಾದರೂ ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.