ಸಾರಾಂಶ
ಧೃಡಪಟ್ಟ ವ್ಯಕ್ತಿಗೆ ₹10 ಸಾವಿರ ದಂಡ, 6 ತಿಂಗಳ ಕಾರಾಗೃಹ ಶಿಕ್ಷೆ
ರಾಮಮೂರ್ತಿ ನವಲಿ
ಕನ್ನಡಪ್ರಭ ವಾರ್ತೆ ಗಂಗಾವತಿಪಾನಮತ್ತರಾದವರನ್ನು ಪತ್ತೆ ಮಾಡುವ ಯಂತ್ರಗಳು ಬಂದಿರುವುದು ಹಳೆಯ ವಿಷಯವಾಗಿದೆ. ಈಗ ಗಾಂಜಾ ಸೇದುವರನ್ನು ಪತ್ತೆ ಹಚ್ಚುವುದಕ್ಕಾಗಿ ಪೊಲೀಸ್ ಇಲಾಖೆಗೆ ಮಾರಿಜೋನಾ ಕಿಟ್‌ಗಳು ಪೂರೈಕೆಯಾಗಿವೆ.
ರಾಜ್ಯಾದ್ಯಂತ ಗಾಂಜಾ ಸೇದುವರನ್ನು ಪತ್ತೆ ಹಚ್ಚುವುದಕ್ಕಾಗಿ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಿಟ್‌ಗಳನ್ನು ಪೊಲೀಸ್ ಇಲಾಖೆ ಕಳಿಸಿಕೊಟ್ಟಿದೆ. ಅದರಂತೆ ಗಂಗಾವತಿ ನಗರ ಠಾಣೆಗೆ 20 ಕಿಟ್‌ಗಳನ್ನು ಪೂರೈಸಲಾಗಿದೆ.ಹೇಗೆ ಪತ್ತೆ: ಗಾಂಜಾ ಸೇದಿದವರು ತಪ್ಪಿಸಿಕೊಳ್ಳಲು ಸಾಮಾನ್ಯವಾಗಿ ತಮ್ಮ ಬಾಯಿಯನ್ನು ಸ್ವಚ್ಛ ಮಾಡಿಕೊಂಡು ಸಂಚರಿಸಬಹುದು. ಆದರೆ ಗಾಂಜಾ ಸೇದಿದವರನ್ನು ಹಿಡಿದು ಅವರನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಕಿಟ್ ಮೂಲಕ ಪರೀಕ್ಷೆ ಮಾಡಿದರೆ ಗಾಂಜಾಪ್ರಿಯರು ಸಲೀಸಾಗಿ ಸಿಕ್ಕಿ ಬೀಳುತ್ತಾರೆ. ಕಿಟ್‌ನಲ್ಲಿ ಮೂತ್ರ ಪರೀಕ್ಷೆ ಮಾಡಿದರೆ ಒಂದು ಪಾಯಿಂಟ್ ಬಂದರೆ ಅದು ಧೃಡವಾದಂತೆ. ಈಗ ಗಂಗಾವತಿ ನಗರ ಸೇರಿದಂತೆ ತಾಲೂಕಿನಲ್ಲಿ ಗಾಂಜಾ ಸೇದುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗ ಈ ಕಿಟ್‌ಗಳನ್ನು ಪೊಲೀಸ್ ಸಿಬ್ಬಂದಿಗೆ ನೀಡಿ ವಿವಿಧ ವೃತ್ತಗಳಲ್ಲಿ ನಿಯೋಜಿಸಿದೆ.
₹10 ಸಾವಿರ ದಂಡ, 6 ತಿಂಗಳು ಕಾರಾಗೃಹ:ಈ ಹಿಂದೆ ಗಾಂಜಾ ಮಾರಾಟ ಮಾಡುವವರಿಗೆ ದಂಡ ಹಾಕಲಾಗುತ್ತಿತ್ತು. ಈಗ ಸೇದುವವರ ಮೇಲೆ ದಂಡ ವಿಧಿಸಲು ಸರ್ಕಾರ ಆದೇಶ ನೀಡಿದೆ. ಗಾಂಜಾ ಸೇದಿರುವುದು ಧೃಡಪಟ್ಟರೆ ಆ ವ್ಯಕ್ತಿಗೆ ₹10 ಸಾವಿರ ದಂಡ, 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ.ನಗರದಲ್ಲಿ ಈಗ ಗಾಂಜಾ ಸೇದುವವರನ್ನು ಪತ್ತೆ ಹಚ್ಚುವ ಕಾರ್ಯ ಪೊಲೀಸ್ ಇಲಾಖೆಯಿಂದ ಚುರುಕುಗೊಂಡಿದ್ದು, ನಗರದಲ್ಲಿ ವ್ಯಾಪಾಕವಾಗಿ ಪೊಲೀಸರು ಸಂಚರಿಸುತ್ತಿದ್ದಾರೆ.ಕಿಟ್ ಉಪಯೋಗಿಸಿ ಮೊದಲ ಪ್ರಕರಣ ದಾಖಲು:ಗಾಂಜಾ ಸೇವನೆ ಮಾಡಿದ ವ್ಯಕ್ತಿಯನ್ನು ಮಾರಿಜೋನಾ ಕಿಟ್ ಉಪಯೋಗಿಸಿ ಪತ್ತೆ ಹಚ್ಚಲಾಗಿದೆ ಎಂದು ನಗರ ಪೊಲೀಸ್ ಠಾಣೆ ಪಿಐ ಪ್ರಕಾಶ ಮಾಳೇ ತಿಳಿಸಿದ್ದಾರೆ.
ಗುಂಡಮ್ಮ ಕ್ಯಾಂಪಿನ ಅಸ್ಲಂ ಪಾಷಾ ಚಾಂದಾ ಪಾಷ ಎನ್ನುವರು ಗಾಂಜಾ ಸೇವನೆ ಮಾಡಿದ್ದು, ಕಿಟ್ ಮೂಲಕ ಪತ್ತೆ ಹಚ್ಚಿ ವ್ಯಕ್ತಿಯ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಿಐ ತಿಳಿಸಿದ್ದಾರೆ.