ಶಿರಸಿ ಮಾರಿಕಾಂಬಾ ಜಾತ್ರೆ ಸಮಯದಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಭಕ್ತಾದಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ನಾವೆಲ್ಲರೂ ಸೇರಿ ಜಾತ್ರೆಯನ್ನು ಯಶಸ್ವಿಯಾಗಿ ನಡೆಸೋಣ ಎಂದು ಸಹಾಯಕ ಆಯುಕ್ತ ಚಂದ್ರಶೇಖರ್ ಆರ್.ಜಿ. ಹೇಳಿದರು.
ಶಿರಸಿ: ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ವಿಜೃಂಭಣೆಯಿಂದ ಆಚರಿಸಲು ಎಲ್ಲ ಇಲಾಖೆಗಳ ಅಧಿಕಾರಿ ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಹಾಯಕ ಆಯುಕ್ತ ಚಂದ್ರಶೇಖರ್ ಆರ್.ಜಿ. ಹೇಳಿದರು.
ನಗರದ ಮಿನಿವಿಧಾನಸೌಧದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾತ್ರಾ ವಿಶೇಷ ಸಭೆಯಲ್ಲಿ ಮಾತನಾಡಿದರು. ಐತಿಹಾಸಿಕ ಹಿನ್ನೆಲೆ ಇರುವ ಮಾರಿಕಾಂಬಾ ದೇವಿಯ ಜಾತ್ರೆ ಫೆ. 24ರಿಂದ ಮಾ. 4ರ ವರೆಗೆ ನಡೆಯಲಿದೆ. ಅಹಿತಕರ ಘಟನೆಗಳು ನಡೆಯದಂತೆ ಎಲ್ಲರ ಸಹಕಾರದೊಂದಿಗೆ ನಡೆಸುವುದು ನಮ್ಮ ಉದ್ದೇಶ. ಎಲ್ಲ ಸಮುದಾಯದವರೂ ಜಾತ್ರೆಯಲ್ಲಿ ಪಾಲ್ಗೊಂಡು ಜಾತ್ರೆಯ ಯಶಸ್ಸಿಗೆ ಸಹಕರಿಸಬೇಕು ಎಂದರು.ಜಾತ್ರೆಗೆ ಬರುವ ಭಕ್ತಾದಿಗಳ ರಕ್ಷಣೆಗೆ ಸಿಸಿ ಕ್ಯಾಮೆರಾ, ವಾಚ್ ಟವರ್‌ಗಳನ್ನು ಅಳವಡಿಸಲಾಗುತ್ತಿದೆ. ಫೆ. 23ರಿಂದ ಜಾತ್ರೆ ಮುಗಿಯುವ ವರೆಗೆ ಕೆಂದ್ರ ಸ್ಥಾನವನ್ನು ಬಿಟ್ಟು ಅಧಿಕಾರಿಗಳು ತೆರಳುವಂತಿಲ್ಲ. ರಜೆ ಹಾಕುವಂತಿಲ್ಲ. ಇಲಾಖೆ ನೀಡಿದ ಗುರುತಿನ ಪತ್ರವನ್ನು ಧರಿಸಿ ಕರ್ತವ್ಯ ನಿರ್ವಹಿಸಬೇಕು. ಜಾತ್ರೆ ಸಮಯದಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಭಕ್ತಾದಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ನಾವೆಲ್ಲರೂ ಸೇರಿ ಜಾತ್ರೆಯನ್ನು ಯಶಸ್ವಿಯಾಗಿ ನಡೆಸೋಣ ಎಂದರು.
ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಆರ್.ಜಿ. ನಾಯ್ಕ ಮಾತನಾಡಿ, ವಿಶೇಷಚೇತನರಿಗೆ, ಅಂಗವಿಕಲರಿಗೆ ಬೆಳಗ್ಗೆ 10ರಿಂದ12.30 ಹಾಗೂ ರಾತ್ರಿ 10ರ ಆನಂತರ ಕೆಲಸಮಯ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ದೇವಿಯ ದರ್ಶನಕ್ಕೆ ಬರುವ ಗಣ್ಯರಿಗೆ ವಿಶೇಷ ಪ್ರವೇಶ ದ್ವಾರ ತೆರೆಯಲಾಗಿದೆ ಎಂದರು.ಕೆಎಸ್ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿ, ಶನಿವಾರ ರಾತ್ರಿಯಿಂದ ಕೇಂದ್ರೀಯ ಬಸ್ ನಿಲ್ದಾಣವನ್ನು ಗಣೇಶನಗರ ಬಸ್ ನಿಲ್ದಾಣಕ್ಕೆ ವರ್ಗಾಯಿಸಲಾಗುವುದು. ಅಲ್ಲಿಂದಲೇ ಬಸ್ ಸಂಚಾರ ನಡೆಯಲಿದೆ. ಹನುಮಾನ ವ್ಯಾಯಾಮ ಶಾಲೆಯಲ್ಲಿ ಬಸ್ ಪಿಕಪ್ ಪಾಯಿಂಟ್ ಮಾಡಲಾಗಿದೆ. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಅನೂಕೂಲವಾಗುವ ಉದ್ದೇಶದಿಂದ 200 ಬಸ್‌ಗಳು ಜಾತ್ರೆ ವಿಶೇಷವಾಗಿ ಸಂಚಾರ ಮಾಡಲಿದೆ ಎಂದರು.
ನಗರಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ್ ಮಾಹಿತಿ ನೀಡಿ, ಪಾರ್ಕಿಂಗ್ ಜಾಗಗಳಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ನಾಲ್ಕು ಕಡೆ ಜನರಿಗೆ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ. 54ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ವಾಚ್ ಟವರ್‌ಗಳನ್ನು ಸಿದ್ದಪಡಿಸಲಾಗಿದೆ. ಹಕ್ಕಿಪಿಕ್ಕಿ ಜನಾಂಗದವರಿಗೆ ಅಂಗಡಿಗಳನ್ನು ಹಾಕಲು ಜಾಗವನ್ನು ಗುರುತಿಸಲಾಗಿದೆ ಎಂದರು.ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿ, ಎರಡು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಇರಲಿದೆ. ಇದರ ಜತೆಗೆ ಜಾತ್ರಾ ಗದ್ದುಗೆ ಸಮೀಪ ಹಾಗೂ ಕೋಟೆಕೆರೆ ಸಮೀಪ ಅಗ್ನಿ ಬೈಕ್‌ಗಳು ಇರಲಿವೆ ಎಂದರು.
ಡಿವೈಎಸ್ಪಿ ಗೀತಾ ಪಾಟೀಲ್ ಮಾತನಾಡಿ, ಶಿರಸಿ ನಗರವನ್ನು ಪ್ರವೇಶಿಸುವ ಎಲ್ಲ ಮುಖ್ಯ ರಸ್ತೆಗಳಲ್ಲೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ಇರಲಿದ್ದಾರೆ. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಸಾರ್ವಜನಿಕರು ಸಹಕಾರ ನೀಡಬೇಕು. ಈಗಾಗಲೇ ಪಾರ್ಕಿಂಗ್ ಜಾಗವನ್ನು ಗುರುತಿಸಲಾಗಿದ್ದು, ಮಾಹಿತಿಯನ್ನು ನೀಡಲಾಗುವುದು ಎಂದರು.ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿ, ವಿದ್ಯುತ್ ಅವಘಡಗಳು ಆಗದಂತೆ ಕ್ರಮಕೈಗೊಳ್ಳಲಾಗಿದೆ. ಜಾತ್ರೆ ಸಮಯದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದರು.
ಅನಿಸ್ ತಹಸೀಲ್ದಾರ್ ಮಾತನಾಡಿ, ಶಿರಸಿ ಜಾತ್ರೆಗೆ ನಮ್ಮ ಸಮುದಾಯದ ಸಂಪೂರ್ಣ ಸಹಕಾರವಿದೆ. ನಮ್ಮ ಸಮುದಾಯದವರಿಂದ ಯಾವುದೇ ರೀತಿಯ ಸಹಾಯ ಸಹಕಾರ ಬೇಕಿದ್ದರೂ ನೀಡಲು ನಾವು ಸಿದ್ಧರಿದ್ದೇವೆ. ಶಿರಸಿ ಜಾತ್ರೆ ನಮಗೆ ಹೆಮ್ಮೆ ಎಂದರು.ತಹಸೀಲ್ದಾರ್ ಪಟ್ಟರಾಜ ಗೌಡ, ಸಿಪಿಐ ಶಶಿಕಾಂತ ವರ್ಮಾ, ನಗರ ಠಾಣೆ ಪಿಎಸ್ಐ ನಾಗಪ್ಪ ಬಿ. ಹಾಗೂ ಪ್ರಮುಖರಾದ ಖಾದರ್ ಆನವಟ್ಟಿ ಸೇರಿದಂತೆ ಹಲವರು ಇದ್ದರು.