ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೋಟೆ ಶ್ರೀ ಮಾರಿಕಾಂಬ ಜಾತ್ರೆಯ ಎರಡನೇ ದಿನವಾದ ಬುಧವಾರ ಮುಂಜಾನೆ 4ರ ಹೊತ್ತಿಗೆ ಅಮ್ಮ ಗಾಂಧಿಬಜಾರಿನ ತವರುಮನೆಯಿಂದ ಕೋಟೆ ರಸ್ತೆಯ ಗದ್ದುಗೆಗೆ ಗಂಗಾಮತಸ್ಥರ ಗಂಗಾಪೂಜೆ, ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದು ಕೋಟೆ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ನಂತರ ಹರಿಜನ ಸಮಾಜದ ಬಾಂಧವರು ಬೇವಿನುಡಿಗೆಯೊಂದಿಗೆ ಆಗಮಿಸಿ ಮಾರಿಕಾಂಬೆಗೆ ಪೂಜೆ ಸಲ್ಲಿಸಿದರು. ಬಳಿಕ ಕುರುಬ ಸಮಾಜದ ಚೌಡಿಕೆ ಕುಟುಂಬದವರು ದೇವಿಗೆ ನೈವೇದ್ಯ ಸಲ್ಲಿಸಿದರು. ಬೆಳಗ್ಗೆ 6ರಿಂದ 10ರವರೆಗೆ ವಾಲ್ಮೀಕಿ ಸಮಾಜದವರು ನಂತರ ಸಂಜೆ 4ರವರೆಗೆ ಉಪ್ಪಾರ ಸಮಾಜದವರು, 4ರಿಂದ 10.30ರವರೆಗೆ ಮಡಿವಾಳ ಸಮಾಜದವರು ನಾಲ್ಕು ದಿನಗಳ ಕಾಲ ಸರದಿಯಂತೆ ಗದ್ದುಗೆಯಲ್ಲಿ ಅಮ್ಮನವರಿಗೆ ಪೂಜೆಯನ್ನು ಸಲ್ಲಿಸಲಿದ್ದಾರೆ.

ಮಾರಿಕಾಂಬ ದೇವಾಲಯದ ಸುತ್ತಲೂ ಭಕ್ತಾಧಿಗಳಿಗೆ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದ್ದು, ದೇವಿಯ ದರ್ಶನಕ್ಕೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷ ದರ್ಶನಕ್ಕೂ 500 ರು. ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ಬರುವ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ಸುತ್ತಲೂ ನೂರಾರು ಮಳಿಗೆಗಳು ಜಾತ್ರೆಯ ಸಂಭ್ರಮಕ್ಕೆ ಮೆರುಗು ನೀಡಿದ್ದವು. ತಮ್ಮ ಹರಕೆ ತೀರಿಸಲು ಕೋಳಿ, ಕುರಿ ಅರ್ಪಣೆಗೆ ಭಕ್ತರು ಸಿದ್ಧರಾಗಿ ಬಂದಿದ್ದರು. ಬೇವಿನ ಉಡುಗೆಯನ್ನು ತೊಟ್ಟ ಭಕ್ತಾಧಿಗಳು ಸನ್ನಿಧಿಗೆ ಆಗಮಿಸಿ ತಮ್ಮ ಹರಕೆ ತೀರಿಸಿದರು.

ಸುತ್ತಮುತ್ತಲ ಹಳ್ಳಿಯ ಸಾವಿರಾರು ಜನರು ಸಾಗರೋಪಾದಿಯಲ್ಲಿ ಆಗಮಿಸಿ, ದೇವಿಯ ದರ್ಶನ ಪಡೆಯುತ್ತಿದ್ದಾರೆ. ದೇವಿಯ ಮಡಿಲಲ್ಲಿ ಪುಟ್ಟ ಮಕ್ಕಳನ್ನು ಕೂರಿಸಿ ಹರಕೆ ತೀರಿಸುವ ಸಂಪ್ರದಾಯ ಕೂಡ ಚಾಲ್ತಿಯಲ್ಲಿದ್ದು, ಪೋಷಕರು ವಿಶೇಷ ಪ್ರಾರ್ಥನೆ ನೆರವೇರಿಸಿದರು. ಸೀರೆ, ಮಡಿಲಕ್ಕಿ ಸಮರ್ಪಣೆ ವಿಶೇಷವಾಗಿ ನಡೆಯಿತು. ಭಕ್ತಾಧಿಗಳಿಗೆ ಕಾಂಗ್ರೆಸ್ ಮುಖಂಡ ಎಚ್.ಸಿ. ಯೋಗೇಶ್ ಮಸಾಲೆ ಮಜ್ಜಿಗೆ ವಿತರಿಸಿದರು. ಹಲವು ಸಂಘ-ಸಂಸ್ಥೆಗಳು ಬೆಳಿಗ್ಗೆಯಿಂದಲೇ ನಿರಂತರವಾಗಿ ಮಜ್ಜಿಗೆ ಮತ್ತು ಪಾನಕ ಹಂಚಿದರು. ಹಣ್ಣು-ಕಾಯಿ ಮಾಡಿಸಿಕೊಂಡು ಬಳಿಕ ದೇವಿಯ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಬಳೆಗಳ ಅಂಗಡಿಗಳು ಮಹಿಳೆಯರಿಂದ ತುಂಬಿ ತುಳುಕುತ್ತಿತ್ತು. ಈ ಹಬ್ಬದಲ್ಲಿ ಹಸಿರು ಬಳೆ ಪಡೆದು ಧರಿಸುವುದೇ ಶ್ರೇಷ್ಠ ಎಂದು ಭಾವಿಸಲಾಗಿದೆ.


ನಗರದ ಹಲವು ಮನೆಗಳಲ್ಲಿ ಶಾಮಿಯಾನ ಹಾಕಿ ನೆಂಟರಿಷ್ಠರಿಗೆ ಆಹ್ವಾನಿಸಿ ಜಾತ್ರೆಯ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿಯ ಹಣ್ಣು ಮತ್ತು ಹೂಗಳ ವಿಶೇಷ ಅಲಂಕಾರ ಊರ-ಪರ ಊರ ಭಕ್ತರ ಪ್ರಶಂಸೆಗೆ ಪಾತ್ರವಾಯಿತು. ಈ ಅಲಂಕಾರದ ಜವಾಬ್ದಾರಿಯನ್ನು ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ವಹಿಸಿದ್ದರು.