ಲಕ್ಷಾಂತರ ಭಕ್ತಾದಿಗಳ ಹರ್ಷೋದ್ಗಾರದ ನಡುವೆ ಮಹಾರಥೋತ್ಸವಕ್ಕೆ ಅದ್ಧೂರಿ ಚಾಲನೆಕನ್ನಡಪ್ರಭ ವಾರ್ತೆ ಶಿರಸಿ
ಇತಿಹಾಸ ಪ್ರಸಿದ್ಧ, ರಾಜ್ಯದ ಅತ್ಯಂತ ದೊಡ್ಡ ಜಾತ್ರೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಪ್ರತಿ 2 ವರ್ಷಗಳಿಗೊಮ್ಮೆ ನಡೆಯುವ ಶಿರಸಿಯ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಬುಧವಾರ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.ಬುಧವಾರ ಬೆಳಗ್ಗೆ 5 ಗಂಟೆಯಿಂದಲೇ ಧಾರ್ಮಿಕ ವಿಧಿವಿಧಾನಗಳ ಮೂಲಕ ಪೂಜಾ ಕೈಂಕರ್ಯಗಳನ್ನು ಸಲ್ಲಿಸಿ 7.27ಕ್ಕೆ ದೇವಸ್ಥಾನದಿಂದ ಶ್ರೀ ದೇವಿಯನ್ನು ಹೊರತಂದು ರಥದಲ್ಲಿ ಕೂಡಿಸಲಾಯಿತು.
ನಂತರ ಮಹಾರಥೋತ್ಸವಕ್ಕೆ ಮಾರಿಕಾಂಬಾ ದೇವಸ್ಥಾನದ ಮುಂಭಾಗ ಅತ್ಯಂತ ಸಂಭ್ರಮದಿಂದ ಭಕ್ತಿ ಪೂರ್ವಕವಾಗಿ ಬೆಳಗ್ಗೆ 9.07ಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.ಚಾಲನೆ ದೊರೆತ ನಂತರ ಲಕ್ಷಾಂತರ ಭಕ್ತಾದಿಗಳು ಹರ್ಷೋದ್ಗಾರದಿಂದ ಭಕ್ತಿಪೂರ್ವಕವಾಗಿ ಸಂಭ್ರಮಿಸುತ್ತಾ ಶ್ರೀ ದೇವಿಯ ರಥವನ್ನು ಎಳೆಯಲು ಆರಂಭಿಸಿದಾಗ ಭಕ್ತಾದಿಗಳು ತಮ್ಮ ಹರಕೆ ತಿರಿಸಲು ಉರುಳು ಸೇವೆ, ಬಾಳೆಹಣ್ಣು, ಉತ್ತತ್ತಿ ಮತ್ತು ಜೀವಂತ ಕೋಳಿಗಳನ್ನು ಎಸೆದು ದೇವಿಯ ಕೃಪೆಗೆ ಪಾತ್ರರಾದರು. ಇನ್ನು ಮಂಗಳವಾರ ರಾತ್ರಿ ಶ್ರೀ ದೇವಿಯ ಕಲ್ಯಾಣೋತ್ಸವ ಅತ್ಯಂತ ಸಡಗರದಿಂದ ಭಕ್ತಿಭಾವದೊಂದಿಗೆ ನೆರವೇರಿತು.
ಅದೇ ರೀತಿ ರಥವು ಸಾಗಿದ ದಾರಿಯುದ್ದಕ್ಕೂ ಅಪಾರ ಜನ ಸಮೂಹದೊಂದಿಗೆ ಭಜನೆ, ಡೊಳ್ಳುಕುಣಿತ, ಯಕ್ಷಗಾನ ನೃತ್ಯಗಳು ಭಕ್ತರನ್ನು ಪುಳಕಿತಗೊಳಿಸಿದವು. ಭಾರೀ ಪೊಲೀಸ್ ಬಿಗಿ ಭದ್ರತೆ ಕಂಡುಬಂತು.
ಪೀಠದಲ್ಲಿ ಶ್ರೀ ಮಾರಿಕಾಂಬೆ:
ರಥೋತ್ಸವದ ಬಳಿಕ ಶ್ರೀ ದೇವಿಯು ಮಧ್ಯಾಹ್ನ ಬಿಡಕಿಬೈಲಿನ ಭವ್ಯ ಮಂಟಪದ ಪೀಠದಲ್ಲಿ ಆಸೀನಗೊಂಡಳು.ಶಾಸಕ ಭೀಮಣ್ಣ ನಾಯ್ಕ, ಯುವ ಉದ್ಯಮಿ ಅಶ್ವಿನ್ ಭೀಮಣ್ಣ ನಾಯ್ಕ, ದೇವಸ್ಥಾನದ ಅಧ್ಯಕ್ಷ ಆರ್.ಜಿ. ನಾಯ್ಕ, ಉಪಾಧ್ಯಕ್ಷ ಸುದೇಶ ಜೊಗಳೇಕರ, ಧರ್ಮದರ್ಶಿ ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ಹಾಗೂ ಬಾಬುದಾರರ ಪ್ರಮುಖರಾದ ಜಗದೀಶ ಗೌಡ ಸೇರಿದಂತೆ ಹಲವಾರು ಗಣ್ಯರು ಹಾಗೂ ಲಕ್ಷಾಂತರ ಸಂಖ್ಯೆಯ ಭಕ್ತಾದಿಗಳು ಸಾಕ್ಷಿಯಾದರು.ಮಾರಿಕಾಂಬಾ ದೇವಿಯ ರಥೋತ್ಸವದ ಅಂಗವಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಅನೇಕರು ಭಕ್ತಾದಿಗಳಿಗೆ ಕುಡಿಯುವ ನೀರು, ಮಜ್ಜಿಗೆ, ಪಾನಕ ಸೇರಿದಂತೆ ಹಲವಾರು ರೀತಿಯಲ್ಲಿ ತಂಪು ಪಾನೀಯ ವಿತರಿಸಿದರು.
ಸೇವೆಗಳನ್ನು ಸಲ್ಲಿಸಲು ಅವಕಾಶಭಕ್ತರು ಶ್ರೀ ಮಾರಿಕಾಂಬಾ ದೇವಿಗೆ ಸೇವೆಗಳನ್ನು ಸಲ್ಲಿಸಲು ಫೆ.26ರಿಂದ ಅವಕಾಶ ಕಲ್ಪಿಸಲಾಗಿದೆ. ಈ ಸಡಗರ ಮಾ. 4 ರವರೆಗೆ ಮುಂದುವರಿಯಲಿದ್ದು, ಅಂದು ಜಾತ್ರೆಯು ಅಧಿಕೃತವಾಗಿ ಸಂಪನ್ನಗೊಳ್ಳಲಿದೆ.