ಜೆಡಿಎಸ್‌ ಎಂಎಲ್‌ ಸಿ ಮರಿತಿಬ್ಬೇಗೌಡ ರಾಜೀನಾಮೆ

| Published : Mar 22 2024, 01:01 AM IST / Updated: Mar 22 2024, 01:07 PM IST

ಜೆಡಿಎಸ್‌ ಎಂಎಲ್‌ ಸಿ ಮರಿತಿಬ್ಬೇಗೌಡ ರಾಜೀನಾಮೆ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ವಿಧಾನಪರಿಷತ್‌ನ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ರಾಜೀನಾಮೆ ಸಲ್ಲಿಸಿದ್ದಾರೆ

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ವಿಧಾನಪರಿಷತ್‌ನ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ರಾಜೀನಾಮೆ ಸಲ್ಲಿಸಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಅವರ ನಗರದಲ್ಲಿನ ನಿವಾಸಕ್ಕೆ ಗುರುವಾರ ಆಗಮಿಸಿದ್ದ ಅವರು, ರಾಜೀನಾಮೆ ಸಲ್ಲಿಸಿದರು.

ಸ್ವ ಇಚ್ಚೆಯಿಂದ ರಾಜೀನಾಮೆ ನೀಡಿದ್ದಾಗಿ ಹೇಳುತ್ತ ಜೆಡಿಎಸ್‌ನಲ್ಲಿನ ಕುಟುಂಬ ರಾಜಕಾರಣಕ್ಕೆ ಬೇಸತ್ತು ಈ ನಿರ್ಧಾರಕ್ಕೆ ಬಂದಿರುವುದಾಗಿ ಸ್ಪಷ್ಟಪಡಿಸಿದರು.ಮಧ್ಯಾಹ್ನ 12ರ ಸುಮಾರಿಗೆ ಹೊರಟ್ಟಿ ಅವರ ನಿವಾಸಕ್ಕೆ ಆಗಮಿಸಿದ್ದ ಮರಿತಿಬ್ಬೇಗೌಡ ಪರಿಷತ್‌ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದರು. 

ರಾಜೀನಾಮೆ ಪತ್ರ ಸ್ವೀಕರಿಸಿದ ಸಭಾಪತಿ ಹೊರಟ್ಟಿ, ಮರಿತಿಬ್ಬೇಗೌಡ ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಇದಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮರಿತಿಬ್ಬೇಗೌಡ, ನಾನು ಸ್ವಇಚ್ಛೆಯಿಂದ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳುತ್ತಲೇ ಜೆಡಿಎಸ್‌ ಕುಟುಂಬ ರಾಜಕಾರಣದ ಬಗ್ಗೆ ಕಿಡಿಕಾರಿದರು.ಪಕ್ಷದಲ್ಲಿ ನಿಷ್ಠಾವಂತ ಶಾಸಕನಾಗಿ ಕೆಲಸ ಮಾಡಿದ್ದೇನೆ. 

ನಾಲ್ಕುಬಾರಿ ಆಯ್ಕೆಯಾಗಿ ಶಿಕ್ಷಕ ಸಮುದಾಯ ಹಿತವನ್ನು ಕಾಪಾಡಿದ್ದೇನೆ. ಕುಮಾರಸ್ವಾಮಿ ಅವರು ನಮ್ಮಲ್ಲಿ ಭಿನ್ನಾಭಿಪ್ರಾಯ ತಂದು ನಮ್ಮನ್ನು ಕಡೆಗಣನೆ ಮಾಡಿದರು. ಜೆಡಿಎಸ್‌ನಲ್ಲಿ ಬರೀ ಕುಟುಂಬ ರಾಜಕಾರಣವೇ ಇದೆ. ಇದರಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ ಎಂದರು.

ನಾನು ಭಿನ್ನಾಭಿಪ್ರಾಯಗಳ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಆದರೆ ಅದು ಅವರಿಗೆ ಇಷ್ಟವಾಗಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಅಭ್ಯರ್ಥಿಯಾಗುವುದು ಬೇಡ. 

ಮಂಡ್ಯದಲ್ಲಿನ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡುವಂತೆ ಹೇಳಿದ್ದೆ. ಇದು ನಮ್ಮ ನಾಯಕರಿಗೆ ಇಷ್ಟವಾಗಿಲ್ಲ. ನನ್ನ ಮೇಲೆ ಸಂಶಯಾಸ್ಪದ ದೃಷ್ಟಿಯಿಂದ ನೋಡುತ್ತಿದ್ದರು. ಪಕ್ಷದ ಸಂಘಟನೆಗೂ ನನ್ನನ್ನು ಪರಿಗಣಿಸಲಿಲ್ಲ. ನನ್ನ ಕ್ಷೇತ್ರದ ಶಿಕ್ಷಕ ಮತದಾರ ಅಭಿಪ್ರಾಯದಂತೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು.

ಶೀಘ್ರವೇ ನಿರ್ಧಾರ ತಿಳಿಸುವೆ: ಕೆಲವೇ ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ. ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದೇನೆ. ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. 

ನಮ್ಮ ನಾಯಕರು ಮೊಸಳೆ ಮೇಲೆ ಸವಾರಿ ಮಾಡುತ್ತಿದ್ದಾರೆ. ಇದು ಬಹಳಷ್ಟು ಅಪಾಯಕಾರಿ. ಮೊಸಳೆ ಅಂದರೆ ಬಿಜೆಪಿ ಎಂದು ಅವರು ಕಿಡಿ‌ಕಾರಿದರು.

ಕುಮಾರಸ್ವಾಮಿ, ದೇವೇಗೌಡ, ರೇವಣ್ಣ ಮಾತ್ರ ಪಕ್ಷದ ಬಗ್ಗೆ ನಿರ್ಧಾರ ಮಾಡುತ್ತಾರೆ. ಸಾಮಾನ್ಯ ಕಾರ್ಯಕರ್ತರು ಮತ್ತು ಮುಖಂಡರ ಜತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುವುದಿಲ್ಲ. 

ಜೆಡಿಎಸ್ ಒಂದು ಕುಟುಂಬದ ಪಕ್ಷ ಅಂತ ಎಲ್ಲರಿಗೂ ಗೊತ್ತು. ಪ್ರಧಾನಿ ನರೇಂದ್ರ ಮೋದಿ ಸಹ ಈ ಹಿಂದೆ ಇದನ್ನು ಸಾಕಷ್ಟು ಬಾರಿ ಹೇಳಿದ್ದಾರೆ. ಜೆಡಿಎಸ್ ಜಾತ್ಯತೀತ ಪಕ್ಷ ಅಲ್ಲ ಒಂದು ಕುಟುಂಬದ ಪಕ್ಷ. 

ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ನಾವು ಅದನ್ನು ಕಾದು ನೋಡುತ್ತೇವೆ ಎಂದು ಅವರು ಹೇಳಿದರು.