ಸಾರಾಂಶ
ಸ್ಟಾರ್ ಚಂದ್ರು ಸಹ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದವರು. ಇನ್ನು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಮರಿತಿಬ್ಬೇಗೌಡ ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ಅಧಿಕಾರ ಅನುಭವಿಸಿ ಈಗ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಹೋಗಿದ್ದಾರೆ.
ಮದ್ದೂರು : ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಮತ್ತು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸ್ಟಾರ್ ಚಂದ್ರು ಹರಕೆಯ ಕುರಿಗಳಾಗಿದ್ದಾರೆ. ಇಬ್ಬರಿಗೂ ಚುನಾವಣೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಜೆಡಿಎಸ್ ಮುಖಂಡ ಎಸ್.ಗುರುಚರಣ್ ಲೇವಡಿ ಮಾಡಿದರು.
ತಾಲೂಕಿನ ಸೋಮನಹಳ್ಳಿ ವಿದ್ಯಾಸಂಸ್ಥೆ, ಕೆ.ಹೊನ್ನಲಗೆರೆ ಆರ್.ಕೆ.ವಿದ್ಯಾ ಸಂಸ್ಥೆ, ಮಂಡ್ಯ ಐಟಿಐ ಕಾಲೇಜು ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿ ಕೆ. ವಿವೇಕಾನಂದ ಪರ ಮತಯಾಚನೆ ಬಳಿಕ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಟೀಕಾ ಪ್ರಹಾರ ಮಾಡಿದರು.
ಲೋಕಸಭಾ ಚುನಾವಣೆ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಈಗಾಗಲೇ ತಮ್ಮ ಸೋಲಿನ ಸುಳಿವು ಗೊತ್ತಾಗಿದೆ. ಅದೇ ಪರಿಸ್ಥಿತಿ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಮರಿತಿಬ್ಬೇಗೌಡ ಅವರನ್ನು ಕಾಡುತ್ತಿದೆ ಎಂದು ಟೀಕಿಸಿದರು.
ಶಿಕ್ಷಕರ ಕ್ಷೇತ್ರದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಬಿ.ವಿವೇಕಾನಂದ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ. ಈತನಿಗೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು.
ಸ್ಟಾರ್ ಚಂದ್ರು ಸಹ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದವರು. ಇನ್ನು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಮರಿತಿಬ್ಬೇಗೌಡ ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ಅಧಿಕಾರ ಅನುಭವಿಸಿ ಈಗ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಹೋಗಿದ್ದಾರೆ. ಇವರ ಅಧಿಕಾರದ ಆಸೆಯಿಂದ ಬೇಸರ ಗೊಂಡಿರುವ ಶಿಕ್ಷಕ ಮತದಾರರು ಚುನಾವಣೆಯಲ್ಲಿ ಮರಿತಿಬ್ಬೇಗೌಡ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.