ಮರಿತಿಬ್ಬೇಗೌಡರನ್ನು ಬಹುಮತದಿಂದ ಗೆಲ್ಲಿಸಿ

| Published : May 26 2024, 01:33 AM IST

ಸಾರಾಂಶ

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡರಿಗೆ ಪ್ರಥಮ ಪ್ರಾಶಸ್ತ್ಯ ಮತಗಳನ್ನು ನೀಡಿ, ಐದನೇ ಬಾರಿಗೆ ಅವರು ವಿಧಾನ ಪರಿಷತ್ ಪ್ರವೇಶ ಮಾಡಲು ಅವಕಾಶ ಮಾಡಿಕೊಡಿ ಎಂದು ಎಂಐಎಸ್‌ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡರಿಗೆ ಪ್ರಥಮ ಪ್ರಾಶಸ್ತ್ಯ ಮತಗಳನ್ನು ನೀಡಿ, ಐದನೇ ಬಾರಿಗೆ ಅವರು ವಿಧಾನ ಪರಿಷತ್ ಪ್ರವೇಶ ಮಾಡಲು ಅವಕಾಶ ಮಾಡಿಕೊಡಿ ಎಂದು ಎಂಐಎಸ್‌ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಮನವಿ ಮಾಡಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೆಎಸ್‌ಎಸ್ ಮಹಿಳಾ ಕಾಲೇಜುಗಳಿಗೆ ತೆರಳಿ ಅಲ್ಲಿನ ಶಿಕ್ಷಕ ಮತದಾರರನ್ನು ಭೇಟಿ ಮಾಡಿ, ಕರಪತ್ರಗಳನ್ನು ನೀಡಿ, ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದರು. ರಾಜ್ಯದಲ್ಲಿ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಅನುಭವಿಗಳು, ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರವಾಗಿ ತಿಳಿದು ಕೊಂಡಿರುವ ಉತ್ತಮ ಸಂಸದೀಯ ಪಟು ಮರಿತಿಬ್ಬೇಗೌಡರು. ನಿಮ್ಮೆಲ್ಲರ ಪ್ರತಿನಿಧಿಯಾಗಿ ಮೇಲ್ಮನೆಗೆ ಹೋಗುವುದು ಸೂಕ್ತ. ಈಗಾಗಲೇ ನಾಲ್ಕು ಬಾರಿ ಆಯ್ಕೆಯಾಗಿ ನಿಮ್ಮೆಲ್ಲರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದಾರೆ. ಈ ಬಾರಿಯು ಅವರನ್ನು ಪರಿಷತ್‌ಗೆ ಕಳುಹಿಸಿಕೊಟ್ಟರೆ, ನಿಮ್ಮೆಲ್ಲರ ಧ್ವನಿಯಾಗಿ ಕೆಲಸ ಮಾಡುವ ಜೊತೆಗೆ ಆಡಳಿತ ಪಕ್ಷದ ಸದಸ್ಯರಾಗಿರುವ ಕಾರಣದಿಂದ ಹೆಚ್ಚಿನ ಸೇವೆ ಮಾಡಲು ಸದಾವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶಿಕ್ಷಕರ ಪರವಾಗಿದ್ದು, ಈ ಹಿಂದಿನ ಚುನಾವಣೆಯಲ್ಲಿ ಘೋಷಣೆ ಮಾಡಿರುವಂತೆ ಹಳೇ ಪಿಂಚಣಿ ಪದ್ದತಿಯನ್ನು ಮರು ಜಾರಿ ಮಾಡಲು ಮುಂದಾಗಿದ್ದಾರೆ. ಜತೆಗೆ ಮರಿತಿಬ್ಬೇಗೌಡರು ನಾಲ್ಕು ಬಾರಿ ಆಯ್ಕೆಯಾಗಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಅತಿಹೆಚ್ಚು ತಿಳಿದುಕೊಂಡಿದ್ದಾರೆ. ಅವರು ಪರಿಷತ್‌ನಲ್ಲಿ ಕೇಳಿರುವ ಪ್ರಶ್ನೆಗಳು ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುವಲ್ಲಿ ಬಹಳಷ್ಟು ಕಾರ್ಯಕ್ರಮಗಳ ಕುರಿತು ಕಿರು ಹೊತ್ತಿಗೆಯನ್ನೇ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಶಿಕ್ಷಕರು ಮತ್ತೊಮ್ಮೆ ಮರಿತಿಬ್ಬೇಗೌಡರಿಗೆ ಮತ ನೀಡಿ, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ಮುಖಂಡರಾದ ಬಿಸಲವಾಡಿ ರವಿ, ಆಯೂಬ್ ಖಾನ್, ಕರಿನಂಜನಪುರ ಸ್ವಾಮಿ, ಕಾಲೇಜಿನ ಪ್ರಾಂಶುಪಾಲರಾದ ಚಂದ್ರಮ್ಮ, ಮಹದೇವಸ್ವಾಮಿ, ದೇವರಾಜು, ಉಪನ್ಯಾಸಕರ ವೃಂದವರು ಇದ್ದರು.