ಮಾರ್ಕೆಟಿಂಗ್ ಸೊಸೈಟಿ ಚುನಾವಣೆ: 13 ಸ್ಥಾನಗಳಲ್ಲಿ 12ರಲ್ಲಿ ಬಿಜೆಪಿ ಅವಿರೋಧ ಆಯ್ಕೆ

| Published : Sep 17 2025, 01:07 AM IST

ಸಾರಾಂಶ

ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಳಿಯಾಳ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಂಗ ತಾಲೀಮು ಮಾಡುವ ಮೂಲಕ ಭಾರಿ ಪೈಪೋಟಿ ನೀಡಬಹುದೆಂದು ನಿರೀಕ್ಷಿಸಿದ ಕಾಂಗ್ರೆಸ್ ಚುನಾವಣಾ ಸಮರ ಆರಂಭಕ್ಕೂ ಮುನ್ನ ಕಣದಿಂದ ಹಿಂದಕ್ಕೆ ಸರಿದು ಮುಂಡಿಯೂರಿದೆ.

ನಿರ್ದೇಶಕ ಮಂಡಳಿಯ 13 ಸ್ಥಾನಗಳಲ್ಲಿ 12 ಸ್ಥಾನಗಳಿಗೆ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದು, ಇನ್ನೂ ಉಳಿದಿರುವ ಪರಿಶಿಷ್ಟ ಜಾತಿ ಕಾಯ್ದಿಟ್ಡ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಚುನಾವಣಾ ಪ್ರಕ್ರಿಯೆ:

ಸೆ.7ರಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿ, ಸೆ.14ರಂದು ನಾಮಪತ್ರ ಪರಿಶೀಲನೆ, ಸೆ.15ರಂದು ನಾಮಪತ್ರ ಹಿಂಪಡೆಯುವ, ಅರ್ಹ ಉಮೇದುವಾರರ ಯಾದಿ ಪ್ರಕಟಿಸುವ ಪ್ರಕ್ರಿಯೆ, ಸೆ.16ರಂದು ಮಾದರಿ ಪತ್ರ ಪ್ರಕಟಣೆ ಹಾಗೂ ಸೆ.21ರಂದು ಚುನಾವಣೆ ಹಾಗೂ ಮತ ಏಣಿಕೆ ಪ್ರಕ್ರಿಯೆ ನಡೆಯಲಿದೆ.

ಅವಿರೋಧ ಆಯ್ಕೆ:

ಎ ವರ್ಗದ ಪ್ರಾಥಮಿಕ ಸಹಕಾರಿ ಸಂಘಗಳ 5 ಸ್ಥಾನಗಳಿಗೆ ಮಾರುತಿ ಲಕ್ಷ್ಮಣ ಕಾಂಬ್ರೇಕರ, ಪುಂಡ್ಲಿಕ್ ಮಾರುತಿ ಗಾಡೇಕರ, ಮಾರುತಿ ಬಾಬು ಪಾಟೀಲ, ಶಿವಾಜಿ ಪೀಶಪ್ಪ ಮುರ್ಕಾಡಿ, ಹರಿದಾಸ ಶಂಕರ ಬೊಬ್ಲಿ, ಸಾಮಾನ್ಯ ಕ್ಷೇತ್ರದ 2 ಸ್ಥಾನಗಳಿಗೆ ಶ್ರೀನಿವಾಸ ಶ್ರೀಕಾಂತ ಘೋಟ್ನೇಕರ, ಮೇಘರಾಜ್ ಶಿವರಾಮ ಪಾಟೀಲ, ಮಹಿಳಾ ವರ್ಗದ ಕಾಯ್ದಿಟ್ಟ 2 ಸ್ಥಾನಗಳಿಗೆ ನಿರ್ಮಲಾ ಸುಭಾಸ್ ಪಾಟೀಲ, ಜ್ಯೋತಿ ಚನ್ನಬಸಪ್ಪ ಗರಗ ಹಾಗೂ ಹಿಂದುಳಿದ ಅ ವರ್ಗದ ಸ್ಥಾನಕ್ಕೆ ಅಶ್ಪಾಕಹ್ಮದ ಲಿಯಾಖತ ಪುಂಗಿ, ಹಿಂದುಳಿದ ಬ ವರ್ಗದ ಸ್ಥಾನಕ್ಕೆ ವಿಜಯಕುಮಾರ ನೀಲಕಂಠ ಬೊಬಾಟೆ, ಪರಿಶಿಷ್ಟ ಪಂಗಡದ ಕಾಯ್ದಿಟ್ಟ ಸ್ಥಾನಕ್ಕೆ ಜುಜೆ ಇಂತ್ರೋಜ ಹಂಚಿನಮನಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪರಿಶಿಷ್ಟ ಜಾತಿ ಸ್ಥಾನಕ್ಕೆ ಹಣಾಹಣಿ:

ಪರಿಶಿಷ್ಟ ಜಾತಿ ಕಾಯ್ದಿಟ್ಟ ಸ್ಥಾನಕ್ಕೂ ಅವಿರೋಧ ಆಯ್ಕೆ ನಡೆಸುವ ಪ್ರಯತ್ನಗಳು ನಡೆದವು. ಆದರೆ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯಲು ಅಭ್ಯರ್ಥಿಗಳು ಒಪ್ಪದಿರುವ ಕಾರಣ ಒಂದೇ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಪರಿಶಿಷ್ಟ ಜಾತಿ ಕಾಯ್ದಿಟ್ಟ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಜಪ್ಪ ಮೇತ್ರಿ ಸಾ. ನಂದಿಗದ್ದಾ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಕಾಶ ಕೊರವರ ಮಧ್ಯೆ ಹಣಾಹಣಿ ನಡೆಯುವ ಸಾಧ್ಯತೆಗಳಿವೆ. ಸೆ.21ರಂದು ಚುನಾವಣೆ ನಡೆಯಲಿದೆ.

ಕೈ ಹಿಡಿತ ಕಳೆದುಕೊಂಡ ಸಹಕಾರಿ ರಂಗ:

ಪ್ರತಿಷ್ಠಿತ ಮಾರ್ಕೆಟಿಂಗ್ ಸೊಸೈಟಿಯಲ್ಲಿ ಬಹು ವರ್ಷಗಳಿಂದ ಕಾಂಗ್ರೆಸ್ ಹಿಡಿತವಿತ್ತು. ಹಿಂದಿನಿಂದಲೂ ಸಹಕಾರಿ ಕ್ಷೇತ್ರದ ಮೇಲ್ವಿಚಾರಣೆಯನ್ನು ಶಾಸಕ ದೇಶಪಾಂಡೆ ತನ್ನ ಪರಮಾಪ್ತ ಶಿಷ್ಯ ಮಾಜಿ ವಿಪ ಸದಸ್ಯ ಎಸ್.ಎಲ್. ಘೋಟ್ನೇಕರ ಅವರಿಗೆ ವಹಿಸಿದ್ದರು. ಹೀಗಾಗಿ ತಾಲೂಕಿನ ಎಲ್ಲ ಸಹಕಾರಿ ಸಂಘಗಳ ಚುನಾವಣೆ ಹಾಗೂ ಅಭ್ಯರ್ಥಿ ಆಯ್ಕೆ ಎಲ್ಲ ಜವಾಬ್ದಾರಿಯನ್ನು ಘೋಟ್ನೇಕರ ಅವರೇ ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಮಾರ್ಕೆಟಿಂಗ್ ಸೊಸೈಟಿಯ ಜೊತೆಯಲ್ಲಿ ತಾಲೂಕಿನ ಬಹುತೆಕ ಸೊಸೈಟಿಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅನ್ನುವುದಕ್ಕಿಂತ ತನ್ನ ಬೆಂಬಲಿಗರನ್ನೇ ಆಯ್ಕೆ ಮಾಡಿಸಿಕೊಳ್ಳುವ ಮೂಲಕ ಘೋಟ್ನೇಕರ ಸಹಕಾರಿ ಕ್ಷೇತ್ರದಲ್ಲಿ ಹಿಡಿತವನ್ನು ಸಾಧಿಸಿದ್ದರು. ಘೋಟ್ನೇಕರ ಬಿಜೆಪಿ ಸೇರ್ಪಡೆಯಾದ ನಂತರ ಸಹಜವಾಗಿ ಎಲ್ಲ ಸೊಸೈಟಿಗಳಲ್ಲಿ ಕಮಲ ಅರಳಲಾರಂಭಿಸಿತು. ಇತ್ತ ಘೋಟ್ನೇಕರ ಕೈ ಬಿಟ್ಟ ನಂತರ ಸಹಕಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿಡಿತವನ್ನು ಕಳೆದುಕೊಳ್ಳಲಾರಂಭಿಸಿತು.