ರಂಜಾನ್‌ ಹಬ್ಬಕ್ಕೆ ಕಳೆಗಟ್ಟಿದ ಮಾರುಕಟ್ಟೆ

| Published : Mar 20 2025, 01:16 AM IST

ಸಾರಾಂಶ

ಇಲ್ಲಿನ ದುರ್ಗದ ಬೈಲ್‌, ಶಾಹ ಬಜಾರ್‌ನಲ್ಲಿ ಭರ್ಜರಿ ಮಾರಾಟ ನಡೆಯುತ್ತಿದೆ. ಬಟ್ಟೆ ಖರೀದಿ, ಮಸಾಲೆ ವಸ್ತುಗಳು, ಡ್ರೈಫ್ರೂಟ್ಸ್‌, ಜತೆಗೆ ಬಗೆಬಗೆಯ ಮಸಾಲೆ ಪದಾರ್ಥಗಳು ನೋಡುಗರನ್ನು ತನ್ನತ್ತ ಸೆಳೆಯುತ್ತಿವೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಕಳೆದ 15 ದಿನಗಳಿಂದ ಎಲ್ಲೆಡೆ ರಂಜಾನ್‌ ಉಪವಾಸ ವ್ರತಾಚರಣೆ ಆರಂಭವಾಗಿದ್ದು, ಇಲ್ಲಿನ ದುರ್ಗದ ಬೈಲ್‌, ಶಾಹ ಬಜಾರ್‌ನಲ್ಲಿ ಭರ್ಜರಿ ಮಾರಾಟ ನಡೆಯುತ್ತಿದೆ. ಬಟ್ಟೆ ಖರೀದಿ, ಮಸಾಲೆ ವಸ್ತುಗಳು, ಡ್ರೈಫ್ರೂಟ್ಸ್‌(ಒಣಹಣ್ಣು), ಜತೆಗೆ ಬಗೆಬಗೆಯ ಮಸಾಲೆ ಪದಾರ್ಥಗಳು ನೋಡುಗರನ್ನು ತನ್ನತ್ತ ಸೆಳೆಯುತ್ತಿವೆ.

ರಂಜಾನ್‌ ಎಂದರೆ ಮುಸಲ್ಮಾನ್‌ ಬಾಂಧವರ ಪವಿತ್ರ ಹಬ್ಬ. ಒಂದು ತಿಂಗಳ ಕಾಲ ಉಪವಾಸ ವ್ರತಾಚರಣೆ ಕೈಗೊಂಡು ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯ. ಹಬ್ಬದ ದಿನದಂದು ಹೊಸಬಟ್ಟೆ ಹಾಕಿಕೊಂಡು ಹಬ್ಬ ಸಂಭ್ರಮಿಸುವುದು ಸಾಮಾನ್ಯ. ಹಾಗೆಯೇ ಉಪವಾಸ ವ್ರತಾಚರಣೆಯ ವೇಳೆ ಹೆಚ್ಚಾಗಿ ಹಣ್ಣು-ಹಂಪಲು, ಡ್ರೈಫ್ರೂರ್ಟ್ಸ್‌ ಬಳಕೆ ಹೆಚ್ಚಾಗಿರುತ್ತದೆ. ಜತೆಗೆ ಮಸಾಲೆ ಪದಾರ್ಥಗಳ ಖರೀದಿಯು ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಮಾರುಕಟ್ಟೆಗಳಲ್ಲಿ ಈಗ ಎಲ್ಲಿ ನೋಡಿದರಲ್ಲಿ ಹೆಚ್ಚಿನ ಜನಜಂಗುಳಿ ಕಂಡುಬರುತ್ತಿದೆ.

ನಗರದ ದುರ್ಗದಬೈಲ್, ಶಾಹಬಜಾರ್, ಸ್ಟೇಶನ್ ರಸ್ತೆ, ಜನತಾ ಬಜಾರ್, ಕೊಪ್ಪಿಕರ ರಸ್ತೆ ಸೇರಿದಂತೆ ವಿವಿಧ ಮಾರುಕಟ್ಟೆ ಪ್ರದೇಶಗಳಲ್ಲಿ ಕಳೆದ 8-10 ದಿನಗಳಿಂದ ಹೆಚ್ಚಿನ ಜನಜಂಗುಳಿ ಕಂಡುಬರುತ್ತಿದೆ. ಹೊಸ ಸೀರೆ, ಕುರ್ತಾ, ಚೂಡಿದಾರ, ಎಂಬ್ರಾಯ್ಡರಿ ಟಾಪ್ಸ್, ಪೈಜಾಮ್, ಟವೆಲ್ಸ್, ವಿನೂತನ ವಿನ್ಯಾಸದ ಫ್ಯಾನ್ಸಿ ಡ್ರೆಸ್, ವ್ಯಾನಿಟ್ ಬ್ಯಾಗ್, ಹ್ಯಾಂಡ್ ಪರ್ಸ್, ಮೆಟಲ್, ಪ್ಲಾಸ್ಟಿಕ್, ಗಾಜಿನ ಬಳೆಗಳು, ಜೀನ್ಸ್, ಬುರ್ಖಾ, ಗಾಗ್ರಾ, ಟೀಶರ್ಟ್, ಶರ್ಟ್, ಸಣ್ಣ ಮಕ್ಕಳ ಡ್ರೆಸ್, ಟೋಪಿ, ಸುಗಂಧ ದ್ರವ್ಯ, ಮನೆಯ ವಿವಿಧ ಅಲಂಕಾರಿಕ ವಸ್ತುಗಳು, ಮೆಹಂದಿ, ಇನ್ನು ಹಬ್ಬದೂಟಕ್ಕೆ ಬೇಕಾಗುವ ಶಾವಿಗೆ, ಖರ್ಜೂರ, ಗೋಡಂಬಿ, ಪಿಸ್ತಾ, ಬದಾಮಿ, ಅಕ್ರೋಟ್, ಉತ್ತತ್ತಿ, ಏಲಕ್ಕಿ, ಲವಂಗ, ಒಣದ್ರಾಕ್ಷಿ, ಅಂಜೂರ, ತುಪ್ಪ, ಮಸಾಲೆ ಪದಾರ್ಥಗಳಾದ ಚಕ್ಕೆ, ಕಸ್ತೂರಿ ಮೇತಿ, ಬಗೆಬಗೆಯ ಮಸಾಲೆ ಪ್ಯಾಕೆಟ್‌ಗಳು ಮತ್ತು ಸಾಂಬಾರ ಪದಾರ್ಥಗಳ ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿದೆ.

ಬೀದಿಬದಿಯಲ್ಲೇ ವ್ಯಾಪಾರ

ರಂಜಾನ್ ನಿಮಿತ್ತ ಬೀದಿ ಬದಿಯ ವ್ಯಾಪಾರಿಗಳಿಗಂತೂ ಸುಗ್ಗಿಯ ಕಾಲ. ನಗರದ ದುರ್ಗದ ಬೈಲ್‌, ಶಾಹ ಬಜಾರ್‌ನಲ್ಲಿ ವಿವಿಧ ನಮೂನೆ ಪಾದರಕ್ಷೆಗಳು, ತರಹೇವಾರಿ ಆಟಿಕೆಗಳು, ಪ್ಲಾಸ್ಟಿಕ್ ಸರಂಜಾಮುಗಳು, ಎಲೆಕ್ಟ್ರಾನಿಕ್ ವಸ್ತುಗಳು, ಪಾತ್ರೆಗಳು, ಗೃಹಬಳಕೆ ಸೇರಿದಂತೆ ನಾನಾ ರೀತಿಯ ವಸ್ತುಗಳ ಮಾರಾಟ ಬೀದಿಬದಿಯಲ್ಲಿಯೇ ನಡೆದಿದ್ದು, ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದಾರೆ.

ವಿದೇಶಿ ಸುಗಂಧ ದ್ರವ್ಯ

ಮುಸಲ್ಮಾನ್‌ ಹಬ್ಬಗಳಲ್ಲಿ ಸುಗಂಧ ದ್ರವ್ಯ ಪ್ರಮುಖ ಪಾತ್ರ ವಹಿಸುತ್ತದೆ. ಚಿಕ್ಕಮಕ್ಕಳಿಂದ ಹಿಡಿದು, ವೃದ್ಧರಾದಿಯಾಗಿ ಹಬ್ಬದ ದಿನದಂದು ಬಗೆಬಗೆಯ ಸುಗಂಧದ್ರವ್ಯಗಳನ್ನು ಬಳಸುವುದು ಸಾಮಾನ್ಯ. ಈ ಬಾರಿ ಮಾರುಕಟ್ಟೆಗೆ ವಿದೇಶಿ ಸುಗಂಧದ್ರವ್ಯಗಳು ಲಗ್ಗೆಯಿಟ್ಟಿದ್ದು, ದುಬಾರಿಯಾದರೂ ಗ್ರಾಹಕರು ಖರೀದಿಸುತ್ತಿದ್ದಾರೆ. ಸುಮಾರು ₹50 ರಿಂದ ಹಿಡಿದು ಸಾವಿರಾರು ರುಪಾಯಿ ವರೆಗೂ ಬಗೆಬಗೆಯ ಸುಗಂಧದ್ರವ್ಯಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಗ್ರಾಹಕರು ಆಸಕ್ತಿಯಿಂದ ಖರೀದಿಸುತ್ತಿದ್ದಾರೆ.

ತರಹೇವಾರಿ ಖರ್ಜೂರ

ನಗರದ ಮಾರುಕಟ್ಟೆಯಲ್ಲಿ 20ಕ್ಕೂ ಹೆಚ್ಚಿನ ಬಗೆಬಗೆಯ ಖರ್ಜೂರಗಳು ಮಾರಾಟಕ್ಕಿವೆ. ಸೌದಿ ಅರೇಬಿಯಾ, ಜೋರ್ಡಾನ್, ಇರಾನ್, ದಕ್ಷಿಣ ಆಫ್ರಿಕಾಗಳಿಂದ ಖರ್ಜೂರ ತರಿಸಲಾಗಿದೆ. ಇರಾನ್‌ನ ಒಣ ಅಂಜೂರ, ಇರಾನಿಯಿಂದ ಬಾದಾಮಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಗ್ರಾಹಕರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

ದರ ಕಡಿಮೆ

ಸಾಮಾನ್ಯ ದಿನಗಳಿಗೆ ಹೋಲಿಸಿದರೆ ರಂಜಾನ್‌ ಹಬ್ಬದಲ್ಲಿ ದರವೂ ಕಡಿಮೆಯಾಗಿದೆ. ಈ ಬಾರಿ ಮಾರುಕಟ್ಟೆಗೆ ಖರ್ಜೂರ ಹೆಚ್ಚಿನ ಪ್ರಮಾಣದಲ್ಲಿ ಬಂದಿದೆ. ಸಾಮಾನ್ಯ ಖರ್ಜೂರ ಪ್ರತಿ ಕೇಜಿಗೆ ₹250-1000ರ ವರೆಗೆ ಮಾರಾಟವಾಗುತ್ತಿದೆ. ಒಣಖರ್ಜೂರ ಮಾತ್ರ ₹350ರಿಂದ 400ಕ್ಕೆ ಕೆಜಿಗೆ ದೊರೆಯುತ್ತಿದೆ. ಸೌದಿ ಅರೇಬಿಯಾದ ಖರ್ಜೂರವೂ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಕೇಜಿಗೆ ₹600 ರಿಂದ ₹1200ರ ವರೆಗೆ ದೊರೆಯುತ್ತಿದೆ.ಖರೀದಿ ಅಧಿಕ

ಕಳೆದ ಒಂದು ವಾರದಿಂದ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಪ್ರತಿ ವರ್ಷಕ್ಕಿಂತಲೂ ಈ ಬಾರಿ ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ಖರೀದಿ ಹೆಚ್ಚಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಮಾರಾಟವಾಗುತ್ತಿದೆ.

- ಸುಭಾನ್‌ ಬೆಟಗೇರಿ, ಡ್ರೈಫ್ರೂರ್ಟ್ಸ್‌ ವ್ಯಾಪಾರಸ್ಥ

ಬಟ್ಟೆ ಖರೀದಿ

ರಂಜಾನ್‌ ನಮಗೆ ದೊಡ್ಡ ಹಬ್ಬ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರಾದಿಯಾಗಿ ಎಲ್ಲರಿಗೂ ಹೊಸಬಟ್ಟೆ ಖರೀದಿಸುತ್ತೇವೆ. ಈ ಬಾರಿ ರಂಜಾನ್‌ ಹಬ್ಬದ 15 ದಿನಗಳ ಮೊದಲೇ ಬಟ್ಟೆ, ಸಾಮಗ್ರಿ ಖರೀದಿಸಿದ್ದೇವೆ.

- ಅಷ್ರಫ್‌ಅಲಿ, ನಾಲಬಂದ, ರುಕ್ಸಾನಾ ನಾಲಬಂದ, ಬಟ್ಟೆ ಖರೀದಿಗೆ ಆಗಮಿಸಿದ್ದ ಗ್ರಾಹಕರು