ಉತ್ತರ ಕರ್ನಾಟಕದಿಂದ ಆಹಾರ-ಪಾನೀಯ, ನಾಶವಾಗುವ ವಸ್ತು ಹಾಗೂ ಸೂಕ್ಷ್ಮ ವಸ್ತುಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲು ಮರ್ಮಗೋವಾ ಬಂದರು ಮಹತ್ವದ ಅವಕಾಶ ಒದಗಿಸಲಿದೆ.

ಹುಬ್ಬಳ್ಳಿ:

ಉತ್ತರ ಕರ್ನಾಟಕದ ರಫ್ತುಗಾರರಿಗೆ ಮರ್ಮಗೋವಾ ಬಂದರಿನ ಪುನಃ ಆರಂಭವಾದ ಕಂಟೈನರ್ ಸಾಗಾಣಿಕೆಗೆ ನೆರವಾಗಲಿದೆ ಎಂದು ಮರ್ಮಗೋವಾ ಬಂದರು ಪ್ರಾಧಿಕಾರದ ಅಧ್ಯಕ್ಷ ಎನ್‌. ವಿನೋದಕುಮಾರ್‌ ಹೇಳಿದರು.

ಗುರುವಾರ ಇಲ್ಲಿನ ಡೆನಿಸನ್ಸ್‌ ಹೊಟೇಲ್‌ನಲ್ಲಿ ಕರ್ನಾಟಕ ಚೇಂಬರ್‌ ಆಫ್‌ ಕಾಮರ್ಸ್‌ ಅಂಡ್‌ ಇಂಡಸ್ಟ್ರಿ (ಕೆಸಿಸಿಐ) ಹಾಗೂ ಮರ್ಮಗೋವಾ ಬಂದರು ಪ್ರಾಧಿಕಾರ ಸಂಯುಕ್ತವಾಗಿ ಆಯೋಜಿಸಿದ್ದ ವ್ಯಾಪಾರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.

ಉತ್ತರ ಕರ್ನಾಟಕದಿಂದ ಆಹಾರ-ಪಾನೀಯ, ನಾಶವಾಗುವ ವಸ್ತು ಹಾಗೂ ಸೂಕ್ಷ್ಮ ವಸ್ತುಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲು ಮರ್ಮಗೋವಾ ಬಂದರು ಮಹತ್ವದ ಅವಕಾಶ ಒದಗಿಸಲಿದೆ. ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಕೆಲ ವರ್ಷ ಬಂದರಿನಲ್ಲಿ ಕಂಟೈನರ್ ಸಾಗಾಣಿಕೆ ಸ್ಥಗಿತಗೊಂಡಿತ್ತು. ಇದೀಗ ಅದನ್ನು ಪುನಃ ಆರಂಭಿಸಲಾಗಿದೆ. ವ್ಯಾಪಾರ ಚಟುವಟಿಕೆ ಸುಧಾರಿಸಲು ಹಾಗೂ ಹೆಚ್ಚಿನ ಸೌಲಭ್ಯ ಒದಗಿಸಲು ಸಾರ್ವಜನಿಕ- ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಕೈಜೋಡಿಸಿ ಬಂದರು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದರು.ವ್ಯಾಪಾರಿಗಳು ಬೇಡಿಕೆಯಿಟ್ಟ ಸೌಲಭ್ಯಗಳನ್ನು ಒದಗಿಸಲು ಬಂದರು ಸಿದ್ಧವಿದ್ದು, ಕೆಸಿಸಿಐ, ಗೋವಾ ಚೇಂಬರ್‌ ಆಫ್‌ ಕಾಮರ್ಸ್‌ ಸೇರಿದಂತೆ ವಿವಿಧ ವ್ಯಾಪಾರ ಸಂಸ್ಥೆಗಳೊಂದಿಗೆ ನಿರಂತರವಾಗಿ ಸಭೆ ನಡೆಸಿ ಆಮದು-ರಫ್ತು ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಹೇಳಿದರು.

ವಿಶ್ವೇಶ್ವರಯ್ಯ ವ್ಯಾಪಾರ ಪ್ರೋತ್ಸಾಹ ಕೇಂದ್ರ (ವಿಟಿಪಿಸಿ) ನಿರ್ದೇಶಕ (ರಫ್ತು) ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಿ.ಕೆ. ಶಿವಕುಮಾರ ಮಾತನಾಡಿ, ರಫ್ತು ಚಟುವಟಿಕೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾಗೃತಿ, ತರಬೇತಿ ಹಾಗೂ ಆರ್ಥಿಕ ನೆರವು ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಬೆಂಬಲ ನೀಡುತ್ತಿವೆ ಎಂದರು.

ದೇಶದ ಒಟ್ಟು ರಫ್ತಿನಲ್ಲಿ ಕರ್ನಾಟಕದ ಪಾಲು ಶೇ. 41ರಷ್ಟಿದ್ದು, ಇದು ರಾಜ್ಯಗಳಲ್ಲಿ ಅತಿ ಹೆಚ್ಚಾಗಿದೆ. ಆದರೆ, ಇದರಲ್ಲಿ ಶೇ. 35ರಷ್ಟು ಸೇವಾ ವಲಯದ ರಫ್ತು ಆಗಿದ್ದು, ಸರಕು ರಫ್ತು ಕೇವಲ ಶೇ. 6.7 ಮಾತ್ರವಾಗಿದೆ. ಮುಂದಿನ 10 ವರ್ಷಗಳಲ್ಲಿ ಸರಕು ರಫ್ತನ್ನು ಶೇ. 15ಕ್ಕೆ ಹೆಚ್ಚಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ 60 ರಫ್ತುಗಾರರು ಭಾಗವಹಿಸಿದ್ದರು. ಬಳಿಕ ಉತ್ತರ ಕರ್ನಾಟಕದ ಗೇಟ್‌ವೇ: ಕೌಶಲ್ಯಗಳು ಮತ್ತು ಜಾಗತಿಕ ಮಾರುಕಟ್ಟೆಗಳ ಸಂಧಿ ಹಾಗೂ ಸ್ಮಾರ್ಟ್ ಬಂದರುಗಳು, ಸ್ಮಾರ್ಟರ್ ವ್ಯಾಪಾರ ವಿಷಯಗಳ ಕುರಿತು ಪ್ಯಾನೆಲ್‌ ಚರ್ಚೆಗಳು ನಡೆದವು.

ಕೆಸಿಸಿಐ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ, ಗೌರವ ಕಾರ್ಯದರ್ಶಿ ಉದಯ ರೇವಣಕರ, ತಜ್ಞರಾದ ಉಮೇಶ ವಿ, ವಿವೇಕ ನಾಯಕ, ವೀರಣ್ಣ ಹವಾಲ್ದಾರ, ಬೃಂದಾ ಅಮ್ಮನವರ ಸೇರಿದಂತೆ ಹಲವರಿದ್ದರು.