ಬರ್ಕಜೆ ಕ್ಷೇತ್ರದಲ್ಲಿ ಎರಡು ಪ್ರೇತ ಜೋಡಿಗಳ ವಿವಾಹ

| Published : Aug 13 2024, 12:51 AM IST

ಬರ್ಕಜೆ ಕ್ಷೇತ್ರದಲ್ಲಿ ಎರಡು ಪ್ರೇತ ಜೋಡಿಗಳ ವಿವಾಹ
Share this Article
  • FB
  • TW
  • Linkdin
  • Email

ಸಾರಾಂಶ

ವೇಣೂರು ಸನಿಹದ ನಿಟ್ಟಡೆ ಗ್ರಾಮದ ಬರ್ಕಜೆ ಶ್ರೀ ದುರ್ಗಾಪರಮೇಶ್ವರೀ ಮತ್ತು ನವಗುಳಿಗ ದೇವಸ್ಥಾನದ ವಠಾರದಲ್ಲಿ ಸೋಮವಾರ ಎರಡು ಜೋಡಿ ಪ್ರೇತಾತ್ಮಗಳ ಮದುವೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಶಾರದಾ ಹಾಗೂ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಸದಾಶಿವ ಹಾಗೂ ಬಂಟ್ವಾಳ ತಾಲೂಕಿನ ನಯನಾಡಿನ ಯಶೋದಾ ಮತ್ತು ಜಾರುಗುಡ್ಡೆಯ ಯಾದವ ಎಂಬುವರ ಮಧ್ಯೆ ಮದುವೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತುಳುನಾಡಿ ಹಲವಾರು ನಂಬಿಕೆಗಳಲ್ಲಿ ಪ್ರೇತ(ಕುಲೆ)ಗಳ ಮದುವೆಯೂ ಒಂದು. ಮದುವೆ ಆಗದೆ ಇಹಲೋಕ ತ್ಯಜಿಸಿದವರು ಕುಟುಂಬಕ್ಕೆ ತೊಂದರೆ ಕೊಡುತ್ತಾರೆ. ಅವರಿಗೆ ಆಟಿ ತಿಂಗಳಲ್ಲಿ ಮದುವೆ ಮಾಡಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಬಲವಾದ ನಂಬಿಕೆ ಇದೆ. ಅಂತಹದೊಂದು ವಿದ್ಯಮಾನ ವೇಣೂರು ಸನಿಹದ ನಿಟ್ಟಡೆ ಗ್ರಾಮದ ಬರ್ಕಜೆ ಶ್ರೀ ದುರ್ಗಾಪರಮೇಶ್ವರೀ ಮತ್ತು ನವಗುಳಿಗ ದೇವಸ್ಥಾನದ ವಠಾರದಲ್ಲಿ ಸೋಮವಾರ ನಡೆದಿದೆ.

ಎರಡು ಜೋಡಿ ಪ್ರೇತಾತ್ಮಗಳ ಮದುವೆ ಇಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಶಾರದಾ ಹಾಗೂ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಸದಾಶಿವ ಹಾಗೂ ಬಂಟ್ವಾಳ ತಾಲೂಕಿನ ನಯನಾಡಿನ ಯಶೋದಾ ಮತ್ತು ಜಾರುಗುಡ್ಡೆಯ ಯಾದವ ಎಂಬುವರ ಮಧ್ಯೆ ಮದುವೆ ನಡೆದಿದೆ.

ಈ ಎರಡೂ ಜೋಡಿಗಳು ಮದುವೆಯಾಗದೆ ಅಕಾಲಿಕವಾಗಿ ಮೃತಪಟ್ಟವರಾಗಿದ್ದರು. ಅವರ ವಯಸ್ಸು ಪ್ರಾಯಕ್ಕೆ ಬಂದಾಗ ಮದುವೆ ನಡೆಯುತ್ತದೆ. ಇಲ್ಲಿ 35 ವರ್ಷಗಳ ಬಳಿಕ ವಿವಾಹ ಸಂಪನ್ನವಾಗಿದೆ. ಆದಾಗ್ಯೂ ಜೋಡಿಗಳ ನಡುವಿನ ಬರಿ (ಗೋತ್ರ), ಜಾತಿ-ಜಾತಕ ಸರಿ ಹೊಂದಿದರೆ ಮಾತ್ರ ಮದುವೆ ಸಾಧ್ಯ.

ಜ್ಯೋತಿಷಿಗಳಲ್ಲಿ ಮಾತುಕತೆ ನಡೆಸಿ, ಪುರೋಹಿತರ ಮಾರ್ಗದರ್ಶನದಲ್ಲಿ ವಧು-ವರನ ಕಡೆಯವರು ಒಮ್ಮತದಿಂದ ಒಪ್ಪಿ ಮದುವೆ ನಡೆಯುತ್ತದೆ. ಬರ್ಕಜೆ ಕ್ಷೇತ್ರದಲ್ಲಿ ನಡೆದ ಮದುವೆಯಲ್ಲಿ ಎರಡು ಜೋಡಿಗಳ ತಂದೆ-ತಾಯಿ ಇದ್ದು ಕುಟುಂಬಸ್ಥರು ಸೇರಿ ಶಾಸ್ತ್ರೋಕ್ತವಾಗಿ ಮದುವೆಯನ್ನು ಸಂಪನ್ನಗೊಳಿಸಲಾಗಿದೆ.

ಜೀವಂತ ಜೋಡಿಗಳ ಮದುವೆ ಹೇಗೆ ಕ್ರಮಬದ್ಧವಾಗಿ ನಡೆಯುತ್ತದೆಯೋ ಅದೇ ರೀತಿ ಇಂತಹ ಸಂದರ್ಭದಲ್ಲೂ ವ್ಯವಸ್ಥಿತವಾಗಿ ನಡೆಸಲಾಗುತ್ತದೆ. ಬರ್ಕಜೆ ಕ್ಷೇತ್ರದ ಧರ್ಮದರ್ಶಿ ರಮೇಶ್ ಪೌರೋಹಿತ್ಯದಲ್ಲಿ, ಬೆಳ್ಳಿಯ ತಗಡಿನಲ್ಲಿ ವಧು ವರನ ಮೂರ್ತಿ ತಯಾರಿಸಿ ಮದುವೆ ಶಾಸ್ತ್ರ ನಡೆಸಿದ್ದಾರೆ. ವರನ ಮೂರ್ತಿ ಪಕ್ಕ ಬಾಸಿಂಗ, ಧೋತಿ,ಶಾಲು, ಮಾಂಗಲ್ಯ ಇತ್ಯಾದಿ, ವಧುವಿನ ಮೂರ್ತಿಯ ಬಳೀ ಧಾರೆ ಸೀರೆ ಇತ್ಯಾದಿಗಳನ್ನು ಇಡಲಾಗುತ್ತದೆ. ವರನನ್ನು ಸ್ವಾಗತಿಸುವ ಕಾರ್ಯಕ್ರಮದಿಂದ ಹಿಡಿದು ಹೋಮ, ಉಡುಗೋರೆ, ಊಟೋಪಚಾರವೂ ನಡೆದಿದೆ. ಸುಮಾರು 400 ಮಂದಿ ಭಾಗವಹಿಸಿದ್ದಾರೆ.

ಈ ರೀತಿ ಮದುವೆ ಮಾಡಿದರೆ ಮೃತರಾದವರಿಗೆ ಸದ್ಗತಿ ಪ್ರಾಪ್ತಿಯಾಗುತ್ತದೆ ಮತ್ತು ಕುಟುಂಬದ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದರ ಹಿಂದೆ ಇದೆ.

ಬರ್ಕಜೆ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಇಂತಹ ಅನೇಕ ಮದುವೆಗಳನ್ನು ನಡೆಸಲಾಗಿದೆ. ಶಾಸ್ತ್ರಕ್ಕೆ ಯಾವುದೇ ಅಪಚಾರವಾಗದಂತೆ ನಡೆಸಲಾಗುತ್ತದೆ. ಮದುವೆ ಮಾಡಿಸಿದ ಕುಟುಂಬಗಳು ಮುಂದಿನ ದಿನಗಳಲ್ಲಿ ಸುಖ-ಶಾಂತಿ-ನೆಮ್ಮದಿಯಿಂದ ಇರುವುದು ಕ್ಷೇತ್ರದ ಮಹಿಮೆಯಾಗಿದೆ ಎಂದು ಕ್ಷೇತ್ರದ ಧರ್ಮದರ್ಶಿ ರಮೇಶ್ ಹೇಳುತ್ತಾರೆ.