ಕುಶಾಲನಗರ: ದುಬಾರೆ ಸಾಕಾನೆ ಶಿಬಿರದಲ್ಲಿ ಕಂಜನ್ ಆನೆಯಿಂದ ಸೋಮವಾರ ತೀವ್ರ ತರದ ದಾಳಿಗೆ ಒಳಗಾದ ಸಾಕಾನೆ ಮಾರ್ತಾಂಡ (43) ಮಂಗಳವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಶಿಬಿರದ ಸಮೀಪ ನದಿಯಲ್ಲಿ ನಡೆದ ಕಾಳಗದಿಂದ ಮಾರ್ತಾಂಡ ಆನೆಯ ಹೊಟ್ಟೆ ಭಾಗ ಮತ್ತು ತಲೆ ಭಾಗಗಳಿಗೆ ತೀವ್ರ ಪ್ರಮಾಣದ ಹಾನಿ ಉಂಟಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಆನೆ ಮೃತಪಟ್ಟಿರುವುದಾಗಿ ಶಿಬಿರದ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ತಾಂಡ ಆನೆಯನ್ನು ಕಳೆದ ಮೂರು ವರ್ಷಗಳ ಹಿಂದೆ ಆಲೂರು ಬಳಿಯ ಅರಣ್ಯದಿಂದ ಸೆರೆಹಿಡಿದು ತರಲಾಗಿತ್ತು. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಶಿಬಿರಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಪಶು ವೈದ್ಯಾಧಿಕಾರಿ ಡಾ ಮುಜೀಬ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆದು ಮುಂದಿನ ಕ್ರಮ ಕೈಗೊಳ್ಳಲಾಯಿತು.