ಹುತಾತ್ಮರ ದಿನಾಚರಣೆ: ಗಾಂಧೀಜಿ ಚಿತಾಭಸ್ಮ ಮೆರವಣಿಗೆ

| Published : Jan 31 2025, 12:47 AM IST

ಸಾರಾಂಶ

ಜಿಲ್ಲಾಡಳಿತ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ವೋದಯ ಸಮಿತಿ ವತಿಯಿಂದ ‘ಹುತಾತ್ಮರ ದಿನಾಚರಣೆ’ ನಗರದಲ್ಲಿ ಗುರುವಾರ ಶ್ರದ್ಧೆಯಿಂದ ಜರುಗಿತು. ಈ ಸಂದರ್ಭ ಮಹಾತ್ಮಾ ಗಾಂಧಿ ಚಿತಾಭಸ್ಮದ ಮೆರವಣಿಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲಾಡಳಿತ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ವೋದಯ ಸಮಿತಿ ವತಿಯಿಂದ ‘ಹುತಾತ್ಮರ ದಿನಾಚರಣೆ’ ನಗರದಲ್ಲಿ ಗುರುವಾರ ಶ್ರದ್ಧೆಯಿಂದ ಜರುಗಿತು. ಈ ಸಂದರ್ಭ ಮಹಾತ್ಮಾ ಗಾಂಧಿ ಚಿತಾಭಸ್ಮದ ಮೆರವಣಿಗೆ ನೆರವೇರಿತು.

ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಖಜಾನೆಯಲ್ಲಿರಿಸಲಾಗಿದ್ದ ಮಹಾತ್ಮ ಗಾಂಧೀಜಿ ‘ಚಿತಾಭಸ್ಮ’ವನ್ನು ಹೊರತೆಗೆದು ಪುಷ್ಪಮಾಲೆಗಳಿಂದ ಶೃಂಗರಿಸಿ ಗೌರವ ಸಮರ್ಪಿಸಲಾಯಿತು.

ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ಸದಸ್ಯರ ನೇತೃತ್ವದಲ್ಲಿ ಪೊಲೀಸ್ ವಾದ್ಯದೊಂದಿಗೆ ನಗರದ ಮಂಗೇರಿರ ಮುತ್ತಣ್ಣ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದ ಮುಖ್ಯ ರಸ್ತೆ ಮೂಲಕ ಗಾಂಧೀಜಿ ಚಿತಾಭಸ್ಮವನ್ನು ಕೊಂಡೊಯ್ದು ಗಾಂಧಿ ಮಂಟಪ ಬಳಿ ಇರಿಸಿ ಪೊಲೀಸ್ ಗೌರವದೊಂದಿಗೆ ಗೌರವ ಸಲ್ಲಿಸಲಾಯಿತು. ಬಳಿಕ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು.

ಪೊಲೀಸ್ ಮೀಸಲು ಪಡೆಯ ಸಬ್ ಇನ್‌ಸ್ಪೆಕ್ಟರ್‌ ಹನುಮಂತ ಕೌಜಲಗಿ ಮತ್ತು ತಂಡದವರು ಮೂರು ಸುತ್ತುಗಳ ಕುಶಾಲತೋಪು ಹಾರಿಸುವ ಮೂಲಕ ರಾಷ್ಟ್ರಪಿತನಿಗೆ ಪೊಲೀಸ್ ಗೌರವ ಸಲ್ಲಿಸಲಾಯಿತು. ನಂತರ ಮೌನಾಚರಣೆ ನಡೆಯಿತು. ವೆಂಕಟೇಶ್ ನೇತೃತ್ವದಲ್ಲಿ ಪೊಲೀಸ್ ತಂಡದವರು ರಾಷ್ಟ್ರಗೀತೆ ನುಡಿಸಿದರು.

ಬಳಿಕ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಗಾಂಧೀಜಿ ಮೆಚ್ಚಿನ ಭಜನಾ ಗಾಯನವನ್ನು ಸಂತ ಮೈಕಲರ ಶಾಲೆ, ಭಾರತ್ ಸೇವಾ ದಳ ಹಾಗೂ ಕ್ರೆಸೆಂಟ್ ಶಾಲೆಯ ಗೈಡ್ಸ್ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಸರ್ವಧರ್ಮ ಗುರುಗಳಿಂದ ಭಗವದ್ಗೀತೆ (ಸಂತೋಷ್ ಭಟ್), ಬೈಬಲ್ (ರೆವೆರಂಡ್ ಫಾದರ್ ದೀಪಕ್), ಕುರಾನ್ (ಇಸಾಕ್ ಅಹ್ಮದ್) ಸಂದೇಶಗಳನ್ನು ಬೋಧಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ‘ನನ್ನ ಜೀವನವೇ ನನ್ನ ಸಂದೇಶ’ವೆಂದು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರ ಜೀವನವೂ ಗಾಂಧೀಜಿ ಸಂದೇಶವಾಗಬೇಕು ಎಂದರು.

ಮಡಿಕೇರಿಯಲ್ಲಿ ಗಾಂಧಿ ಭವನ ನಿರ್ಮಾಣವಾಗಿದ್ದು, ವಿವಿಧ ಚಟುವಟಿಕೆಗಳು ನಡೆಯುತ್ತಿವೆ. ಹಾಗೆಯೇ ಗಾಂಧಿ ಸ್ಮಾರಕ ಉದ್ಯಾನದ ಮುಂದುವರಿದ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಆ ನಿಟ್ಟಿನಲ್ಲಿ ಮಡಿಕೇರಿಯಲ್ಲಿ ಗಾಂಧೀಜಿ ಸಂದೇಶಗಳು ಎಲ್ಲೆಡೆ ಫಸರಿಸಲಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಹುತಾತ್ಮರ ದಿನಾಚರಣೆ ಪ್ರಯುಕ್ತ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು ಮೆರವಣಿಗೆ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಗಾಂಧೀ ಸ್ಮಾರಕ ಉದ್ಯಾನವನ ಕಾಮಗಾರಿ ಪೂರ್ಣಗೊಂಡ ನಂತರ ಚಿತಾಭಸ್ಮ ಇಡಲಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಪ್ರತಿಯೊಬ್ಬರೂ ಮತ್ತೊಬ್ಬರನ್ನು ಗೌರವಿಸಬೇಕು. ಯಾರೂ ಸಹ ಅಶಾಂತಿ ಉಂಟು ಮಾಡಬಾರದು. ಶಾಂತಿ, ಸೌಹಾರ್ದತೆ ಕಾಪಾಡಿದಲ್ಲಿ ಗಾಂಧೀಜಿಯವರನ್ನು ಗೌರವಿಸಿದಂತೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ, ಗಾಂಧೀಜಿ ಸಮಾನತೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಹಾಗೆಯೇ ಪರಿಸರ ಶುಚಿತ್ವಕ್ಕೆ ಒತ್ತು ನೀಡಿದ್ದರು. ಇವರು ವಿಶಾಲ ಮನೋಭಾವ ಹೊಂದಿ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ಸರ್ವೋದಯ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಗಾಂಧಿ ಸ್ಮಾರಕ ಉದ್ಯಾನ ನಿರ್ಮಾಣ ನಂತರ ಚಿತಾಭಸ್ಮ ಇಟ್ಟು ಗೌರವಿಸಲಾಗುತ್ತದೆ ಎಂದು ಹೇಳಿದರು.

ಸರ್ವೋದಯ ಸಮಿತಿ ಪ್ರಧಾನ ಕಾರ್ಯದರ್ಶಿ ಮುನಿರ್ ಅಹ್ಮದ್ ಅವರು ಮಾತನಾಡಿದರು. ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಸರ್ವೋದಯ ಸಮಿತಿ ಸದಸ್ಯರಾದ ತೆನ್ನಿರಾ ಮೈನಾ, ಚಂದ್ರಶೇಖರ್, ಪ್ರಕಾಶ್ ಆಚಾರ್ಯ, ಕಾನಹಿತ್ಲು ಮೊಣ್ಣಪ್ಪ, ತೋರೇರ ಮುದ್ದಯ್ಯ, ರೇವತಿ ರಮೇಶ್, ಪ್ರಭು ರೈ, ಕೆ.ಎಂ.ವೆಂಕಟೇಶ್, ಭಾರತ್ ಸೇವಾದಳದ ಕಾರ್ಯದರ್ಶಿ ಮೋಂತಿ ಗಣೇಶ್, ಅಂಬೆಕಲ್ಲು ನವೀನ್, ಎಸ್.ಪಿ.ವಾಸುದೇವ, ಎಂ.ಎನ್.ಸುಬ್ರಮಣಿ, ಜಿ.ಸಿ.ರಮೇಶ್, ಸದಾ ಮುದ್ದಪ್ಪ, ಜಗದೀಶ್, ಚುಮ್ಮಿ ದೇವಯ್ಯ, ಮೀನಾಜ್, ಜಿಲ್ಲಾ ಖಜಾನಾಧಿಕಾರಿ ರಘುನಾಥ್, ಪಶುಪಾಲನೆ ಇಲಾಖೆ ಉಪ ನಿರ್ದೆಶಕರಾದ ಲಿಂಗರಾಜ ದೊಡ್ಡಮನಿ, ಐಟಿಡಿಪಿ ಇಲಾಖೆ ಅಧಿಕಾರಿ ಎಸ್.ಹೊನ್ನೇಗೌಡ, ಪೌರಾಯುಕ್ತರಾದ ಎಚ್.ಆರ್.ರಮೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳಾ, ತಹಶೀಲ್ದಾರ್ ಪ್ರವೀಣ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಿ.ಪಿ.ಕವಿತಾ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ, ಕೃಷ್ಣಪ್ಪ, ಸ್ಕೌಟ್ಸ್ ಮತ್ತು ಗೈಡ್ಸ್ ದಮಯಂತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ಮಣಜೂರು ಮಂಜುನಾಥ್ ಮತ್ತಿತರರು ಇದ್ದರು.