ನಗರದಲ್ಲೇ ಇದ್ದರೂ ಮಾರುತಿ ನಗರಕ್ಕಿಲ್ಲ ಸಮರ್ಪಕ ರಸ್ತೆ

| Published : Feb 13 2025, 12:50 AM IST

ನಗರದಲ್ಲೇ ಇದ್ದರೂ ಮಾರುತಿ ನಗರಕ್ಕಿಲ್ಲ ಸಮರ್ಪಕ ರಸ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರವಾರ ನಗರದಲ್ಲೇ ಇದ್ದರೂ 19ನೇ ವಾರ್ಡ್‌ನ ಮಾರುತಿನಗರಕ್ಕೆ ಸಮರ್ಪಕ ರಸ್ತೆಯೇ ಇಲ್ಲ. ಮಳೆಗಾಲ ಬಂತೆಂದರೆ ಅವರು ಸಂಚಾರಕ್ಕೆ ಹರಸಾಹಸ ಮಾಡಬೇಕು. ನಗರಸಭೆಗೆ ಅರ್ಜಿ ಕೊಟ್ಟು ಅಲ್ಲಿಯ ಜನರು ಬೇಸತ್ತಿದ್ದಾರೆ.

ಕಾರವಾರ: ನಗರದಲ್ಲೇ ಇದ್ದರೂ ಇವರಿಗೆ ಸಮರ್ಪಕ ರಸ್ತೆ ಇಲ್ಲ. ಮಳೆಗಾಲ ಬಂತೆಂದರೆ ಕೆಸರುಗದ್ದೆಯಂತಾಗುವ ರಸ್ತೆ. ಬೇಸಿಗೆಯಲ್ಲಿ ತಗ್ಗು, ದಿಣ್ಣೆಗಳಲ್ಲಿ ಸಾಗಬೇಕಾದ ಪರಿಸ್ಥಿತಿ. 15-20 ವರ್ಷಗಳಿಂದ ಇವರು ರಸ್ತೆಗಾಗಿ ಅರ್ಜಿ ಹಿಡಿದು ಅಲೆದಾಡುತ್ತಿದ್ದರೂ ಇವರ ಗೋಳನ್ನು ಕೇಳುವವರೇ ಇಲ್ಲ.

ಇದು ಕಾರವಾರ ನಗರಸಭೆಯ 19ನೇ ವಾರ್ಡ್‌ನ ಮಾರುತಿ ನಗರ. ದೇವಳಿವಾಡ ರಸ್ತೆಯಿಂದ ತೆರಳಬೇಕು. ಸುಮಾರು 15 ಮನೆಗಳಿವೆ. ದಲಿತ, ಹಿಂದುಳಿದ ಸಮುದಾಯದ ವಿವಿಧ ಜಾತಿಯ ಜನರು ಇಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ನಗರಸಭೆ ತೆರಿಗೆ ಪಡೆಯುತ್ತಿದೆ. ನಗರಸಭೆ ಚುನಾವಣೆಯಲ್ಲಿ ಮತದಾನವನ್ನೂ ಇವರು ಮಾಡುತ್ತಿದ್ದಾರೆ. ಆದರೆ ಇಲ್ಲಿ ನಗರಸಭೆ ರಸ್ತೆ ನಿರ್ಮಿಸದೆ ಇರುವುದರಿಂದ ಇವರಿಗೆ ನಗರಸಭೆಯ ಬಗ್ಗೆಯೇ ಜಿಗುಪ್ಸೆ ಉಂಟಾಗಿದೆ.

ಇಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮನೆಯೂ ಇದೆ. ದಲಿತರಾದ ಇವರು ರಸ್ತೆ ನಿರ್ಮಾಣಕ್ಕಾಗಿ ಅರ್ಜಿ ಹಿಡಿದು ಎಲ್ಲೆಲ್ಲಿ ಕೊಡಬೇಕೋ ಅಲ್ಲೆಲ್ಲ ಅಲೆದಾಡಿ ಬಸವಳಿದಿದ್ದಾರೆ. ನಿವೃತ್ತ ಸೈನಿಕರ ಮನೆಯೂ ಇದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರು ದುಸ್ಥಿತಿಯಲ್ಲಿರುವ ರಸ್ತೆಯಲ್ಲೇ ಸಾಗಬೇಕು. ಆದರೆ ರಸ್ತೆ ನಿರ್ಮಾಣದ ಬಗ್ಗೆ ನಗರಸಭೆ ತಲೆಕೆಡಿಸಿಕೊಂಡಿಲ್ಲ.

ಕೇವಲ 500 ಮೀ. ರಸ್ತೆ ನಿರ್ಮಿಸಿದರೆ ಇವರಿಗೆಲ್ಲ ಅನುಕೂಲವಾಗಲಿದೆ. ಮಳೆಗಾಲದಲ್ಲಿ ರಸ್ತೆಯ ಮೇಲೆ ನೀರು ನಿಂತು ಪಾದಚಾರಿಗಳು, ಬೈಕ್ ಸವಾರರು ಪ್ರಯಾಸಪಟ್ಟು ಸಾಗಬೇಕು. ಬೇಸಿಗೆಯಲ್ಲಿ ಕಲ್ಲು, ಹೊಂಡಗಳ ನಡುವೆ ಸಾಗಬೇಕು.

ಬೇರೆ ಎಲ್ಲ ವಾರ್ಡಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಹಾಗಂತ ಇವರು ಕಾಂಕ್ರೀಟ್ ರಸ್ತೆಯನ್ನು ಕೇಳುತ್ತಿಲ್ಲ. ಡಾಂಬರು ರಸ್ತೆಯನ್ನಾದರೂ ನಿರ್ಮಿಸಿಕೊಡಿ ಎಂದು ಬೇಡಿಕೆ ಮಂಡಿಸುತ್ತಿದ್ದಾರೆ.

ಈ ವಾರ್ಡಿನ ಸದಸ್ಯ ಹನುಮಂತ ತಳವಾರ ಅವರನ್ನು ಪ್ರಶ್ನಿಸಿದರೆ, ರಸ್ತೆ ಮಾಡಿಕೊಡುತ್ತೇವೆ, ಆದರೆ ನಗರಸಭೆಯಲ್ಲಿ ಈಗ ಹಣ ಇಲ್ಲ ಎಂದು ಹೇಳುತ್ತಾರೆ. ಹಣ ಬಂದಾಗ ರಸ್ತೆ ನಿರ್ಮಿಸುವುದಾಗಿ ಹೇಳುತ್ತಾರೆ. ಹಣ ಇರುವಾಗ ಬೇರೆ ಬೇರೆ ಕಡೆ ರಸ್ತೆ ನಿರ್ಮಿಸಲಾಯಿತೆ ಹೊರತೂ ಈ ರಸ್ತೆಯನ್ನು ಕೇಳುವವರೇ ಇರಲಿಲ್ಲ. ಸಮಸ್ಯೆ ಕೇಳುವವರೇ ಇಲ್ಲ: ನಗರದ ಎಲ್ಲೆಡೆ ರಸ್ತೆ ಇದೆ. ಇಲ್ಲಿ ಮಾತ್ರ ನಾವು ಸಂಚರಿಸಲು ಶಿಕ್ಷೆ ಅನುಭವಿಸಬೇಕು. ರಸ್ತೆ ನಿರ್ಮಿಸುವಂತೆ 15 ವರ್ಷಗಳಿಂದ ಅರ್ಜಿ ಕೊಡುತ್ತಿದ್ದೇವೆ. ವಿನಂತಿಸುತ್ತಿದ್ದೇವೆ. ಆದರೆ ನಮ್ಮ ಸಮಸ್ಯೆ ಕೇಳುವವರೇ ಇಲ್ಲ ಎಂದು ಸ್ಥಳೀಯ ನಿವಾಸಿ ಉಲ್ಲಾಸ ನಾಯ್ಕ ಹೇಳುತ್ತಾರೆ.ಅನುದಾನ ಇಲ್ಲ: ನಗರಸಭೆಯಲ್ಲಿ ಅನುದಾನ ಇಲ್ಲ. ಮಾರ್ಚ್‌ನಲ್ಲಿ ತೆರಿಗೆ ಸಂಗ್ರಹವಾಗಲಿದೆ. ಆ ಹಣದಲ್ಲಿ ಎಲ್ಲ ವಾರ್ಡಿಗೂ ಅನುದಾನ ನೀಡಲಾಗುವುದು. ಮಾರ್ಚ್‌ ನಂತರ ಮಾರುತಿ ನಗರದಲ್ಲೂ ರಸ್ತೆ ನಿರ್ಮಿಸಿಕೊಡುತ್ತೇವೆ ಎಂದು ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ ಹೇಳುತ್ತಾರೆ.