ಜಿಲ್ಲಾಧಿಕಾರಿಗಳ ವಿರುದ್ಧ ಮಂಡಿಸಿರುವ ಹಕ್ಕುಚ್ಯುತಿಯನ್ನು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ತಕ್ಷಣವೇ ಹಿಂಪಡೆಯಬೇಕು ಎಂದು ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಆರ್. ಮರಿಜೋಸೆಫ್ ಒತ್ತಾಯಿಸಿದರು. ೪೭ ಹಳ್ಳಿಗಳ ನಿವಾಸಿಗಳಿಗೆ ಹಕ್ಕುಪತ್ರ ಹಾಗೂ ಬದಲಿ ಭೂಮಿ ಒದಗಿಸುವ ಕಾರ್ಯವನ್ನು ವೇಗವಾಗಿ ಮುಂದುವರಿಸಲಾಗುತ್ತಿದೆ. ದಶಕಗಳ ಕಾಲ ನ್ಯಾಯಕ್ಕಾಗಿ ಕಾಯುತ್ತಿದ್ದ ಜನರಿಗೆ ಇದು ಭರವಸೆ ಮೂಡಿಸಿರುವುದಾಗಿ ಅವರು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾಧಿಕಾರಿಗಳ ವಿರುದ್ಧ ಮಂಡಿಸಿರುವ ಹಕ್ಕುಚ್ಯುತಿಯನ್ನು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ತಕ್ಷಣವೇ ಹಿಂಪಡೆಯಬೇಕು ಎಂದು ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಆರ್. ಮರಿಜೋಸೆಫ್ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಜಿಲ್ಲಾಧಿಕಾರಿಗಳು ದಕ್ಷ, ಪ್ರಾಮಾಣಿಕ ಹಾಗೂ ಜನಪರ ಆಡಳಿತ ನೀಡುತ್ತಿರುವ ಅಧಿಕಾರಿಯಾಗಿದ್ದು, ಶೋಷಿತ ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಸುಮಾರು ೨೦ ಸಾವಿರಕ್ಕೂ ಹೆಚ್ಚು ನಿವೇಶನ ಹಕ್ಕುಪತ್ರಗಳನ್ನು ವಿತರಿಸುವ ಮೂಲಕ ಬಡ ಕುಟುಂಬಗಳಿಗೆ ಭೂಸ್ವಾಮ್ಯ ಹಕ್ಕು ಒದಗಿಸಲಾಗಿದೆ. ಇದು ಜಿಲ್ಲೆಯ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ ಎಂದರು. ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರ ಸಮಸ್ಯೆಗಳಿಗೆ ವಿಶೇಷ ಆದ್ಯತೆ ನೀಡಿ, ಸುಮಾರು ಐವತ್ತು ವರ್ಷಗಳಿಂದ ಬಾಕಿ ಉಳಿದಿದ್ದ ೪೭ ಹಳ್ಳಿಗಳ ನಿವಾಸಿಗಳಿಗೆ ಹಕ್ಕುಪತ್ರ ಹಾಗೂ ಬದಲಿ ಭೂಮಿ ಒದಗಿಸುವ ಕಾರ್ಯವನ್ನು ವೇಗವಾಗಿ ಮುಂದುವರಿಸಲಾಗುತ್ತಿದೆ. ದಶಕಗಳ ಕಾಲ ನ್ಯಾಯಕ್ಕಾಗಿ ಕಾಯುತ್ತಿದ್ದ ಜನರಿಗೆ ಇದು ಭರವಸೆ ಮೂಡಿಸಿರುವುದಾಗಿ ಅವರು ಹೇಳಿದರು.ಇಂತಹ ಜನಪರ ಹಾಗೂ ಪ್ರಗತಿಪರ ಕಾರ್ಯಗಳನ್ನು ನಿರ್ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಹಕ್ಕು ಚುತಿ ಮಂಡಿಸಿರುವುದು ನ್ಯಾಯಸಮ್ಮತವಲ್ಲದೆ, ರಾಜಕೀಯ ಪ್ರೇರಿತ ಕ್ರಮವೆಂದು ಅವರು ಆರೋಪಿಸಿದರು. ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೇ ಇದ್ದು, ಈಗ ಅಧಿಕಾರಿಗಳ ವಿರುದ್ಧ ಆರೋಪ ಮಾಡುತ್ತಿರುವುದು ವಿಷಾದನೀಯ ಎಂದು ಟೀಕಿಸಿದರು. ಹಿಂದಿನಿಂದಲೇ ವಿಧಾನಸಭೆಯಲ್ಲಿ ಈ ಸಮಸ್ಯೆಗಳ ಕುರಿತು ಸಮರ್ಪಕವಾಗಿ ಧ್ವನಿ ಎತ್ತದವರು, ಈಗ ಹಿಂದುಳಿದ ವರ್ಗದ ಅಧಿಕಾರಿಗಳು ಜಿಲ್ಲೆಗೆ ಬಂದಾಗ ಮಾತ್ರ ವಿರೋಧ ವ್ಯಕ್ತಪಡಿಸುತ್ತಿರುವುದು ಏಕೆ ಎಂಬುದನ್ನು ಪ್ರಶ್ನಿಸಿದ ಅವರು, ಇದು ಸಾಮಾಜಿಕ ನ್ಯಾಯದ ವಿರುದ್ಧದ ನಡೆ ಎಂದು ಅಭಿಪ್ರಾಯಪಟ್ಟರು.ಇದಲ್ಲದೆ, ಹಾಸನ ಜಿಲ್ಲೆಯ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳ ಬೇನಾಮಿ ಆಸ್ತಿಗಳ ಕುರಿತು ವಿಧಾನಸಭೆಯಲ್ಲಿ ಹಕ್ಕು ಮಂಡಿಸಿ, ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಸಕಲೇಶಪುರ ಮತ್ತು ಆಲೂರು ತಾಲೂಕುಗಳಲ್ಲಿ ವಿವಿಧ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳ ಕಾಲದಲ್ಲಿ ಎಷ್ಟು ಬೇನಾಮಿ ಭೂಮಿಯನ್ನು ಸಂಪಾದಿಸಲಾಗಿದೆ ಎಂಬುದರ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕೆಂದೂ ಅವರು ಆಗ್ರಹಿಸಿದರು. ಹಕ್ಕು ಚುತಿ ತಕ್ಷಣ ಹಿಂಪಡೆಯದಿದ್ದರೆ ಜಿಲ್ಲಾಮಟ್ಟದಲ್ಲಿ ಮಾತ್ರವಲ್ಲ, ರಾಜ್ಯವ್ಯಾಪಿ ಹೋರಾಟವನ್ನು ಆರಂಭಿಸಲಾಗುವುದು ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ. ಮುಂದಿನ ದಿನಗಳಲ್ಲಿ ಪ್ರತಿಭಟನೆ, ಧರಣಿ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಬಿ.ಎನ್. ಶಿವಪ್ಪ ನಾಯಕ್, ಆದಿವಾಸಿ ಮುಖಂಡ ನವೀನ್ ಸದಾ, ಮುಖಂಡ ಮಲ್ಲೇಶ್ ಅಂಬೂಗ, ಸಂದೀಪ್, ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.