ಮಾಸ್ಕ್‌ ಮ್ಯಾನ್‌ ಆರೋಪಸುಳ್ಳು : ಸಹೋದ್ಯೋಗಿ ನುಡಿ

| N/A | Published : Aug 21 2025, 02:00 AM IST

ಸಾರಾಂಶ

 ಆತ ಯಾಕೆ ಈ ರೀತಿಯ ಹೇಳಿಕೆಗಳನ್ನು ಈಗ ನೀಡುತ್ತಿದ್ದಾನೋ ಗೊತ್ತಿಲ್ಲ. ಬಹುಶಃ ಅವನಿಗೆ ಯಾರೋ ಹಣದ ಆಸೆ ತೋರಿಸಿರಬೇಕು. ನಾವು ಎಂದೂ ಪೊಲೀಸರ ಅನುಮತಿ ಪಡೆಯದೆ ಯಾವುದೇ ಶವಸಂಸ್ಕಾರ ಮಾಡಿಲ್ಲ 

 ಮದ್ದೂರು :  ‘ಆತ ಯಾಕೆ ಈ ರೀತಿಯ ಹೇಳಿಕೆಗಳನ್ನು ಈಗ ನೀಡುತ್ತಿದ್ದಾನೋ ಗೊತ್ತಿಲ್ಲ. ಬಹುಶಃ ಅವನಿಗೆ ಯಾರೋ ಹಣದ ಆಸೆ ತೋರಿಸಿರಬೇಕು. ನಾವು ಎಂದೂ ಪೊಲೀಸರ ಅನುಮತಿ ಪಡೆಯದೆ ಯಾವುದೇ ಶವಸಂಸ್ಕಾರ ಮಾಡಿಲ್ಲ. ನಮಗೆ ಯಾರೂ ಕೂಡ ಬಂದು ಅಪರಿಚಿತ ಶವ ಹೂಳುವಂತೆ ಹೇಳಿಲ್ಲ. ಅನ್ನ ಹಾಕಿ, ಸಾಕಿ, ಸಲುಹಿದ ಧಣಿಗಳ ಬಗ್ಗೆ ಈ ರೀತಿ ಆರೋಪ ಮಾಡುತ್ತಿರುವುದು ಸರಿಯಿಲ್ಲ’.

- ಹೀಗೆಂದು ಹೇಳಿದವರು ಧರ್ಮಸ್ಥಳದ ಅನಾಮಿಕ ಮುಸುಕುಧಾರಿಯ ಸ್ನೇಹಿತ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವೈದ್ಯನಾಥಪುರದ ರಾಜು. ಹತ್ತು ವರ್ಷಗಳ ಹಿಂದೆ ಧರ್ಮಸ್ಥಳದ ನೇತ್ರಾವತಿ ನದಿ ಬಳಿ ಮುಸುಕುಧಾರಿ ಮತ್ತು ರಾಜು ಇಬ್ಬರು ಒಟ್ಟಿಗೆ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಆತನ ವಿಚಾರವಾಗಿ ಕೆಲವೊಂದು ವಿವರಗಳನ್ನು ಮಾಧ್ಯಮಗಳೆದುರು ರಾಜು ಬಿಚ್ಚಿಟ್ಟಿದ್ದಾರೆ.

ಅಲ್ಲಿ ನೂರಾರು, ಸಾವಿರಾರು ಹೆಣ ಹೂತಿದ್ದೇನೆ ಎನ್ನುವುದೆಲ್ಲಾ ಸುಳ್ಳು. ಅಷ್ಟೊಂದು ಶವಗಳನ್ನು ಹೂತಿದ್ದರೆ ಮೂಳೆಗಳು ಸಿಗಬೇಕಿತ್ತು. ಜೆಸಿಬಿ ತಂದು ಅವನು ತೋರಿಸಿದ ಜಾಗದಲ್ಲೆಲ್ಲಾ ಅಗೆದರೂ ಮೂಳೆಗಳು ಸಿಕ್ಕಿಲ್ಲ. ಆತ ನೀಡಿರುವ ಹೇಳಿಕೆಗಳು, ದೂರೆಲ್ಲವೂ ಸುಳ್ಳು ಎಂದರು.

ಹತ್ತು ವರ್ಷಗಳ ಹಿಂದೆ ನಾನು ಮತ್ತು ಅವನು ಒಟ್ಟಿಗೇ ಧರ್ಮಸ್ಥಳದ ನೇತ್ರಾವತಿ ನದಿ ಬಳಿ ಸ್ವಚ್ಛತಾ ಕೆಲಸ ಮಾಡುತ್ತಿದ್ದೆವು. ನಮಗೆ ಕಚೇರಿಯಿಂದ ವಿಷಯ ತಿಳಿಸಿದಾಗ ನಾವು ಹೆಣಗಳನ್ನು ನೀರಿನಿಂದ ಎತ್ತಿ ದಡಕ್ಕೆ ತರುತ್ತಿದ್ದೆವು. ಬಳಿಕ ಶವವನ್ನು ಬೆಳ್ತಂಗಡಿಗೆ ಆ್ಯಂಬುಲೆನ್ಸ್‌ನಲ್ಲಿ ಸಾಗಿಸಲಾಗುತ್ತಿತ್ತು. ನಾವು ಯಾವತ್ತೂ ಪೊಲೀಸರ ಅನುಮತಿ ಪಡೆಯದೆ ಯಾವುದೇ ಶವಸಂಸ್ಕಾರ ಮಾಡಿಲ್ಲ. ನಮಗೆ ಯಾರು ಕೂಡ ಬಂದು ಅಪರಿಚಿತ ಶವ ಹೂಳುವಂತೆ ಸೂಚಿಸಿಲ್ಲ ಎಂದು ಹೇಳಿದರು.

ಮೊದಲು ಧರ್ಮಸ್ಥಳದಲ್ಲಿ ನನ್ನ ಅತ್ತೆ, ಮಾವ ಸ್ವಚ್ಛತಾ ಕೆಲಸ ಮಾಡುತ್ತಿದ್ದರು. ನಂತರ ಅವರಿಗೆ ಹುಷಾರಿಲ್ಲದ ಕಾರಣ ನಾನು ಹೋಗಿ ಸುಮಾರು 4 ವರ್ಷ ಕೆಲಸ ಮಾಡಿದ್ದೇನೆ. ಆ ಸಮಯದಲ್ಲಿ ಮುಸುಕುಧಾರಿ ಕುಟುಂಬ ಮತ್ತು ನಮ್ಮ ಕುಟುಂಬ ಒಂದೇ ಕಡೆ ನೆಲೆಸಿದ್ದೆವು. ನಾನು ದೇವಸ್ಥಾನ, ನೇತ್ರಾವತಿಯ ಸ್ನಾನಘಟ್ಟ, ಬಾಹುಬಲಿ ಬೆಟ್ಟದಲ್ಲಿ ಕೆಲಸ ಮಾಡಿದ್ದೇನೆ. ಮೂರು ತಿಂಗಳಿಗೊಮ್ಮೆ ಕೆಲಸದ ಜಾಗ ಬದಲಾವಣೆ ಆಗುತ್ತಿತ್ತು. ಧಣಿಗಳು ಯಾವತ್ತಿಗೂ ಆ ಕೆಲಸ ಮಾಡು, ಈ ಕೆಲಸ ಮಾಡು ಎಂದು ಹೇಳುತ್ತಿರಲಿಲ್ಲ. ಎದುರಿಗೆ ಸಿಕ್ಕಾಗ ನಾವು ನಮಸ್ಕಾರ ಮಾಡುತ್ತಿದ್ದೆವು. ಮಾಹಿತಿ ಕಚೇರಿಯಿಂದ ಬರುತ್ತಿದ್ದ ಸೂಚನೆ ಮೇರೆಗೆ ಕೆಲಸ ಮಾಡುತ್ತಿದ್ದುದಾಗಿ ವಿವರಿಸಿದರು.

ಮಕ್ಕಳು ನಾಪತ್ತೆಯಾಗಿದ್ದರೆ ಮೈಕ್ ಮೂಲಕ ಪ್ರಕಟಣೆ ಹೊರಡಿಸಲಾಗುತ್ತಿತ್ತು. ಮಕ್ಕಳು ಸಿಕ್ಕಿದರೆ ಮಾಹಿತಿ ಕಚೇರಿಗೆ ಬಿಡುತ್ತಿದ್ದರು. ನಂತರ ಪೋಷಕರ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮಕ್ಕಳನ್ನು ಅವರಿಗೆ ಹಸ್ತಾಂತರಿಸಲಾಗುತ್ತಿತ್ತು. ನನ್ನ ನಾಲ್ಕು ವರ್ಷದ ಕೆಲಸದ ಅವಧಿಯಲ್ಲಿ ನೇತ್ರಾವತಿ ಬಳಿ ಎರಡು ಶವ ಸಿಕ್ಕಿತ್ತು. ಸಿಕ್ಕಿದ ಕೂಡಲೇ ಶವಗಳನ್ನು ಹೂಳುತ್ತಿರಲಿಲ್ಲ. ಶವವನ್ನು ನದಿಯಿಂದ ಹೊರತೆಗೆದ ಬಳಿಕ ಆ್ಯಂಬುಲೆನ್ಸ್ ಬರುತ್ತಿತ್ತು. ವೈದ್ಯರು, ಪೊಲೀಸರು ಬರುತ್ತಿದ್ದರು. ಬಳಿಕ ಆ ಮೃತದೇಹವನ್ನು ಬೆಳ್ತಂಗಡಿಗೆ ಸಾಗಿಸಲಾಗುತ್ತಿತ್ತು. ನಾನಿದ್ದ ಸಮಯದಲ್ಲಿ ಪುರುಷ ಮತ್ತು ಮಹಿಳೆಯ ಶವ ಸಿಕ್ಕಿದ್ದವು ಎಂದು ಹೇಳಿದರು.

ನೇತ್ರಾವತಿ ನದಿ ಬಳಿ ಯಾರು ಕೆಲಸ ಮಾಡುತ್ತಿದ್ದರೋ ಅವರು ಶವವನ್ನು ಮೇಲೆತ್ತುತ್ತಿದ್ದರು. ಶವ ಎತ್ತಿದ ದಿನ ನಮ್ಮ ಕೆಲಸಕ್ಕೆ ರಜೆ ಇರುತ್ತಿತ್ತು. ಒಟ್ಟು ನಾಲ್ಕು ಕುಟುಂಬಗಳು ಸ್ವಚ್ಛತಾ ಕೆಲಸದಲ್ಲಿ ತೊಡಗಿದ್ದವು. ಮಾಹಿತಿ ಕಚೇರಿ ಹೊರತುಪಡಿಸಿ ಬೇರೆ ಯಾರಿಂದಲೂ ಕೆಲಸದ ಸೂಚನೆ ಬರುತ್ತಿರಲಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದರು.

ನನ್ನ ಜೊತೆ ಕೆಲಸ ಮಾಡುವಾಗ ಮುಸುಕುಧಾರಿ ಚೆನ್ನಾಗಿಯೇ ಇದ್ದ. ನಾನು ಕೆಲಸ ಬಿಟ್ಟು ಬಂದ ನಂತರವೂ ಆತ ಅಲ್ಲಿ ಕೆಲಸ ಮಾಡುತ್ತಿದ್ದ. ಆತ ಶವದಿಂದ ಚಿನ್ನ ಕದಿಯುತ್ತಿದ್ದ ವಿಚಾರ ನನಗೆ ಗೊತ್ತಿಲ್ಲ. ನಾನು ಬಿಟ್ಟು ಬಂದ ನಂತರ ಆತ ಏಕೆ ಕೆಲಸ ಬಿಟ್ಟನೆಂಬುದೂ ನನಗೆ ಗೊತ್ತಿಲ್ಲ ಎಂದರು.

ಎಸ್‌ಐಟಿಯವರು ನನ್ನನ್ನೂ ವಿಚಾರಣೆ ನಡೆಸಿದ್ದರು. ಈಗ ನಾನೇನು ಹೇಳುತ್ತಿದ್ದೆನೋ ಆ ಎಲ್ಲಾ ವಿಚಾರವನ್ನು ಅವರಿಗೂ ತಿಳಿಸಿದ್ದೇನೆ. ಮುಂದೆ ಕೋರ್ಟ್‌ನಲ್ಲಿ ಹೇಳಬೇಕಾದರೂ ಇದನ್ನೇ ಹೇಳುತ್ತೇನೆ. ನಮಗೆ ಉದ್ಯೋಗ, ಅನ್ನ ಕೊಟ್ಟ ಧಣಿಯ ವಿರುದ್ಧ ಸುಳ್ಳು ಹೇಳುವುದು ಮನಸ್ಸಿಗೆ ಒಪ್ಪುವುದಿಲ್ಲ ಎಂದು ಭಾವುಕರಾಗಿ ಹೇಳಿದರು.

ಅರಣ್ಯದಲ್ಲಿ ಶವ ಹೂತಿದ್ದು ಸಾಬೀತಾದ್ರೆ ಕ್ರಮ: ಖಂಡ್ರೆಬೆಂಗಳೂರು: ಧರ್ಮಸ್ಥಳ ಗ್ರಾಮದ ಅರಣ್ಯ ಪ್ರದೇಶದೊಳಗೆ ಅತಿಕ್ರಮ ಪ್ರವೇಶಿಸಿ ಶವ ಹೂತಿರುವುದು ತನಿಖೆಯಿಂದ ಸಾಬೀತಾದರೆ, ಅರಣ್ಯ ಸಂರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದರು.ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೀಸಲು ಅರಣ್ಯದಲ್ಲಿ ಯಾವುದೇ ಅರಣ್ಯೇತರ ಚಟುವಟಿಕೆ ನಡೆಸಲು ಅವಕಾಶವಿಲ್ಲ. ಅಭಿವೃದ್ಧಿ ಕಾರ್ಯಗಳು ಸೇರಿ ಸಾರ್ವಜನಿಕ ಉದ್ದೇಶಕ್ಕೆ ಅರಣ್ಯ ಭೂಮಿ ಬಳಕೆ ಮಾಡಬೇಕಾದಲ್ಲಿ ನಿಯಮಾನುಸಾರ ತೀರುವಳಿ ಅನುಮತಿ (ಎಫ್‌ಸಿ) ಪಡೆಯಬೇಕಾಗುತ್ತದೆ. ಅದೇ ಅರಣ್ಯದಲ್ಲಿ ಅಕ್ರಮವಾಗಿ ಶವ ಸಂಸ್ಕಾರ ಮಾಡಿರುವುದು ಎಸ್‌ಐಟಿ ತನಿಖೆಯಲ್ಲಿ ಸಾಬೀತಾದರೆ, ಅದನ್ನು ಮಾಡಿದವರ ವಿರುದ್ಧ ನಿಯಮದಂತೆ ಕ್ರಮವಾಗಲಿದೆ ಎಂದರು.

Read more Articles on