ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆ ಕುಶಾಲನಗರದ ಪಟ್ಟಣ ಹಾಗೂ ಸುತ್ತಮುತ್ತ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಸಂಭ್ರಮದ ವಾತಾವರಣ ಕಂಡುಬಂದಿತ್ತು.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯ ದೇವಾಲಯಗಳ ಲಯಗಳನ್ನು ವಿದ್ಯುತ್ ಅಲಂಕರಿಸುವುದರೊಂದಿಗೆ ಹೋಮ ಹವನ, ವಿಶೇಷ ಪೂಜಾ ಕಾರ್ಯಕ್ರಮಗಳು, ಕಾವೇರಿ ನದಿಗೆ ವಿವಿಧ ಧರ್ಮಗಳ ಧಾರ್ಮಿಕ ಗುರುಗಳಿಂದ ವಿಶೇಷ ಮಹಾ ಆರತಿ ಕಾರ್ಯಕ್ರಮ, ಕರಸೇವಕರಿಗೆ ಸನ್ಮಾನ ಮುಂತಾದ ಸ್ಮರಣೀಯ ಕಾರ್ಯಕ್ರಮಗಳು ಜರುಗಿದವು.ಪಟ್ಟಣದ ಗಣಪತಿ , ಆಂಜನೇಯ ದೇವಾಲಯಗಳು ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ಬೆಳಗ್ಗಿನಿಂದಲೇ ಹೋಮ ಮತ್ತಿತರ ಪೂಜಾ ಕಾರ್ಯಕ್ರಮಗಳು ನಡೆದವು.
ಬೆಳಗ್ಗೆ ಒಂಬತ್ತು ಗಂಟೆಗೆ ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಜೀವನದಿ ಕಾವೇರಿ ನದಿಗೆ ಆರತಿ ಕಾರ್ಯಕ್ರಮ, ಕುಶಾಲನಗರ ಪಟ್ಟಣ ವ್ಯಾಪ್ತಿಯ ಕರಸೇವಕರನ್ನು ಗುರುತಿಸಿ ಸನ್ಮಾನ ಕಾರ್ಯಕ್ರಮಗಳು ಜರುಗಿದವು. ಇದೆ ವೇಳೆ ಕಾವೇರಿ ಮಹಾ ಆರತಿ ಬಳಗದ ವತಿಯಿಂದ ಕುಶಾಲನಗರ ಪಟ್ಟಣದ ದೇವಾಲಯಗಳ ಅಧ್ಯಕ್ಷರಿಗೆ ಗೌರವ ಸಲ್ಲಿಕೆ ಕಾರ್ಯಕ್ರಮಗಳು ನಡೆಯಿತು. ಕಳೆದ 153 ತಿಂಗಳುಗಳಿಂದ ನಿರಂತರವಾಗಿ ಕಾವೇರಿ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅರ್ಚಕರಾದ ಕೃಷ್ಣಮೂರ್ತಿ ಭಟ್ ದಂಪತಿಗೆ ಸನ್ಮಾನ ಮಾಡಲಾಯಿತು. ಕುಶಾಲನಗರ ಗಣಪತಿ ದೇವಾಲಯದ ಪ್ರಧಾನ ಅರ್ಚಕರಾದ ಆರ್ ಕೆ ನಾಗೇಂದ್ರ ಬಾಬು ಅವರನ್ನು ಗೌರವಿಸಲಾಯಿತು.ಕುಶಾಲನಗರ ಕಾವೇರಿ ಮಹಾ ಆರತಿ ಬಳಗ ಆಶ್ರಯದಲ್ಲಿ ಕುಶಾಲನಗರ ದೇವಾಲಯಗಳ ಒಕ್ಕೂಟ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಿರಿ ಕೊಡ್ಲಿ, ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಪ್ಪ ಭಾರತ ಮಾತಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಫಾ. ಅಭಿನ್ ಮತ್ತು ನೆರೆಯ ಬೈಲಕುಪ್ಪೆ ಕರ್ಮಫ ಟಿಬೇಟಿಯನ್ ದೇವಾಲಯದ ಧರ್ಮ ಗುರುಗಳು ಪಾಲ್ಗೊಂಡು ನದಿಗೆ ಸಾಮೂಹಿಕವಾಗಿ ಮಹಾ ಆರತಿ ಬೆಳಗಿದರು.
ಈ ಸಂದರ್ಭ ಕಾವೇರಿ ಆರತಿ ಬಳಗದ ಪದಾಧಿಕಾರಿಗಳು, ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ವಿವಿಧ ದೇವಾಲಯಗಳ ಆಡಳಿತ ಮಂಡಳಿ ಸದಸ್ಯರು, ಮಾಜಿ ಸೈನಿಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಮಹಿಳಾ ಭಜನಾ ಮಂಡಳಿ ಸದಸ್ಯರು ಇದ್ದರು.ಕುಶಾಲನಗರ ಆಂಜನೇಯ ದೇವಾಲಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಯೋಧ್ಯೆಯಿಂದ ಪ್ರಸಾರವಾದ ನೇರ ಕಾರ್ಯಕ್ರಮದ ಆನ್ಲೈನ್ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕಿರಿ ಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ , ಕೊಡ್ಲಿಪೇಟೆ ಕಲ್ಮಠ ಶ್ರೀ ಮಹಾಂತ ಸ್ವಾಮೀಜಿ ಅಮತ್ತಿ ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕಿನ 11 ಮಂದಿ ಕರಸೇವಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕುಶಾಲನಗರ ದೇವಾಲಯ ಗಳ ಒಕ್ಕೂಟದ ಅಧ್ಯಕ್ಷರಾದ ಎಂ ಕೆ ದಿನೇಶ್ ಮತ್ತು ವಿವಿಧ ದೇವಾಲಯಗಳ ಪ್ರತಿನಿಧಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು. ಕಾರ್ಯಕ್ರಮದಲ್ಲಿ ಭಜನಾ ತಂಡದಿಂದ ಭಜನೆ ಕೀರ್ತನೆ ನಡೆಯಿತು.ಕುಶಾಲನಗರ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.
ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಕುಶಾಲನಗರ ದೇವಾಲಯಗಳು ಮತ್ತು ಶ್ರೀ ರಾಮ ಸೇವಾ ಮಂದಿರಗಳಲ್ಲಿ ದೀಪಾರಾಧನೆ ಕಾರ್ಯಕ್ರಮ ನಡೆಯಿತು.ಕುಶಾಲನಗರ ಶ್ರೀ ಗಣಪತಿ ದೇವಾಲಯದಿಂದ ನೀಡಲಾದ ಲಡ್ಡು ಭಕ್ತಾದಿಗಳಿಗೆ ವಿತರಣೆ ಮಾಡಲಾಯಿತು. ದೇವಾಲಯದ ವತಿಯಿಂದ ಕುಶಾಲನಗರ ತಾಲೂಕಿನ ಭಕ್ತಾದಿಗಳಿಗೆ 40 ಸಾವಿರಕ್ಕೂ ಅಧಿಕ ಲಡ್ಡುಗಳನ್ನು ತಯಾರಿಸಿ ವಿತರಣೆಗೆ ಕ್ರಮ ಕೈಗೊಳ್ಳಲಾಯಿತು.
ಕುಶಾಲನಗರ ಪಟ್ಟಣದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ತಮ್ಮ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದ್ದವು. ಸ್ಥಳೀಯ ಆಡಳಿತಗಳು ಮಾಂಸ ಮೀನು ಮಾರುಕಟ್ಟೆ, ಮಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು.