ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಅನ್ನಸಂತರ್ಪಣೆಯಲ್ಲಿ ಕುಂಬಾರರ ಬೀದಿಯ ನಿವಾಸಿಗಳು ಒಗ್ಗಟ್ಟಿನಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇಂದಿನ ಆಧುನಿಕ ಜೀವನಶೈಲಿಯಲ್ಲಿ ಅಕ್ಕಪಕ್ಕದವರು ಹಾಗೂ ನೆರೆಹೊರೆಯವರೊಂದಿಗೆ ಬೆರೆಯುವ ಅವಕಾಶಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಬೀದಿಯ ಎಲ್ಲ ನಿವಾಸಿಗಳು ಒಟ್ಟಾಗಿ ಸೇರಿ ಅನ್ನಸಂತರ್ಪಣೆಗೆ ಅಗತ್ಯವಿರುವ ಅಡುಗೆ ಸಿದ್ಧಪಡಿಸಿ, ಭಕ್ತರಿಗೆ ಊಟ ಬಡಿಸುವ ಮೂಲಕ ಪರಸ್ಪರ ಬಾಂಧವ್ಯ ಹಾಗೂ ಒಗ್ಗಟ್ಟಿನ ಸಂದೇಶ ಸಾರಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಕುಂಬಾರರ ಬೀದಿಯ ಶ್ರೀ ವಿದ್ಯಾಗಣಪತಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿರುವ 14ನೇ ವರ್ಷದ ಶ್ರೀ ವಿದ್ಯಾಗಣಪತಿ ಪ್ರತಿಷ್ಠಾಪನ ಹಾಗೂ ವಿಸರ್ಜನಾ ಮಹೋತ್ಸವದ ಅಂಗವಾಗಿ ಬುಧವಾರ ಶ್ರೀ ಗಣಪತಿ ಸನ್ನಿಧಿಯಲ್ಲಿ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಅನ್ನಸಂತರ್ಪಣೆಯಲ್ಲಿ ಕುಂಬಾರರ ಬೀದಿಯ ನಿವಾಸಿಗಳು ಒಗ್ಗಟ್ಟಿನಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇಂದಿನ ಆಧುನಿಕ ಜೀವನಶೈಲಿಯಲ್ಲಿ ಅಕ್ಕಪಕ್ಕದವರು ಹಾಗೂ ನೆರೆಹೊರೆಯವರೊಂದಿಗೆ ಬೆರೆಯುವ ಅವಕಾಶಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಬೀದಿಯ ಎಲ್ಲ ನಿವಾಸಿಗಳು ಒಟ್ಟಾಗಿ ಸೇರಿ ಅನ್ನಸಂತರ್ಪಣೆಗೆ ಅಗತ್ಯವಿರುವ ಅಡುಗೆ ಸಿದ್ಧಪಡಿಸಿ, ಭಕ್ತರಿಗೆ ಊಟ ಬಡಿಸುವ ಮೂಲಕ ಪರಸ್ಪರ ಬಾಂಧವ್ಯ ಹಾಗೂ ಒಗ್ಗಟ್ಟಿನ ಸಂದೇಶ ಸಾರಿದರು.ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ ವಿವಿಧ ವಯೋಮಾನದವರು ಬೆಳಗ್ಗಿನಿಂದಲೇ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು. ಎಲ್ಲರೂ ತಮ್ಮದೇ ಜವಾಬ್ದಾರಿಗಳನ್ನು ವಹಿಸಿಕೊಂಡು ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿ, ನಂತರ ಭಕ್ತರಿಗೆ ಊಟ ಬಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.ಗಣಪತಿ ಮಹೋತ್ಸವದ ಧಾರ್ಮಿಕ ಆಚರಣೆಯ ಜೊತೆಗೆ ಸಾಮಾಜಿಕ ಸೌಹಾರ್ದತೆ, ಪರಸ್ಪರ ಸಹಕಾರ ಹಾಗೂ ಸಾಮೂಹಿಕ ಬಾಂಧವ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ನಗರದ ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.ಈ ಸಂದರ್ಭದಲ್ಲಿ ನಗರಸಭಾ ನಿಕಟಪೂರ್ವ ಅಧ್ಯಕ್ಷ ಎಂ. ಸಮೀವುಲ್ಲಾ, ನಗರಸಭೆ ಮಾಜಿ ಅಧ್ಯಕ್ಷ ವಿದ್ಯಾಧರ್, ಪತ್ರಕರ್ತರ ಸಂಘದ ಅಧ್ಯಕ್ಷ ಟಿ. ಆನಂದ್, ಬಿಜೆಪಿ ಮುಖಂಡ ಮನೋಜ್ ಕುಮಾರ್, ಕಾಂಗ್ರೆಸ್ ಮುಖಂಡ ಬಾಬು, ಕರವೇ ಮುಖಂಡ ಕಿರಣ್ ಕುಮಾರ್, ರುದ್ರಾಕ್ಷ ಫೌಂಡೇಶನ್‌ನ ಜೈಪ್ರಕಾಶ್ ಗುರೂಜಿ, ಆಟೋ ನಾಗರಾಜ್, ರಾಮು ಸೇರಿದಂತೆ ಗಣ್ಯರು, ಸ್ಥಳೀಯ ಮುಖಂಡರು, ಬಳಗದ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

ಮಹೋತ್ಸವದ ಅಂಗವಾಗಿ ಕುಂಬಾರರ ಬೀದಿಯ ನಿವಾಸಿಗಳು ಒಗ್ಗಟ್ಟಿನಿಂದ ವಿವಿಧ ಧಾರ್ಮಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಶೇಷತೆ ಮೆರೆದರು. ರಂಗೋಲಿ ಸ್ಪರ್ಧೆ, ಮಡಿಕೆ ಹೊಡೆಯುವ ಸ್ಪರ್ಧೆ, ಮ್ಯೂಸಿಕಲ್ ಚೇರ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಬೀದಿಯ ನಿವಾಸಿಗಳಿಗಾಗಿ ಆಯೋಜಿಸಲಾಗಿತ್ತು. ಮಹಿಳೆಯರು, ಪುರುಷರು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.