ದೇವಾಲಯಗಳ ನಾಡು ಎಂದೇ ಖ್ಯಾತಿ ಪಡೆದಿರುವ ನಾಗಮಂಗಲದಲ್ಲಿ ಸೋಮವಾರ ಎರಡನೇ ವರ್ಷದ ಸಾಮೂಹಿಕ ಗಣೇಶೋತ್ಸವ ಬಹಳ ವೈಭವದಿಂದ ಜರುಗಲಿದೆ.ಬೃಹತ್ ಡಿಜೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ೧೫ ಗಣಪತಿ ಮೂರ್ತಿಗಳ ಅದ್ಧೂರಿ ಮೆರವಣಿಗೆ ನಡೆಸಿ ವಿಸರ್ಜಿಸುವ ಮೂಲಕ ಮತ್ತೊಮ್ಮೆ ಇತಿಹಾಸ ಬರೆಯಲು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ.

ಕರಡಹಳ್ಳಿ ಸೀತಾರಾಮು

ಕನ್ನಡಪ್ರಭ ವಾರ್ತೆ ನಾಗಮಂಗಲ

ದೇವಾಲಯಗಳ ನಾಡು ಎಂದೇ ಖ್ಯಾತಿ ಪಡೆದಿರುವ ನಾಗಮಂಗಲದಲ್ಲಿ ಸೋಮವಾರ ಎರಡನೇ ವರ್ಷದ ಸಾಮೂಹಿಕ ಗಣೇಶೋತ್ಸವ ಬಹಳ ವೈಭವದಿಂದ ಜರುಗಲಿದೆ.ಬೃಹತ್ ಡಿಜೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ೧೫ ಗಣಪತಿ ಮೂರ್ತಿಗಳ ಅದ್ಧೂರಿ ಮೆರವಣಿಗೆ ನಡೆಸಿ ವಿಸರ್ಜಿಸುವ ಮೂಲಕ ಮತ್ತೊಮ್ಮೆ ಇತಿಹಾಸ ಬರೆಯಲು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ.

ಪಟ್ಟಣದ ಸಾಮೂಹಿಕ ಗಣೇಶ ವಿಸರ್ಜನಾ ಸಮಿತಿಯಿಂದ ಆಯೋಜಿಸಿರುವ ಗಣೇಶೋತ್ಸವದಲ್ಲಿ ಪುರಸಭೆ ವ್ಯಾಪ್ತಿಯ ಉಪ್ಪಾರಹಳ್ಳಿಯ ವಿನಾಯಕ ಗೆಳೆಯರ ಬಳಗದ 16 ಅಡಿ ಎತ್ತರದ ನಾಟ್ಯರೂಪದ ಗಣಪತಿಮೂರ್ತಿ ಗಮನ ಸೆಳೆಯಲಿದೆ.

ಇನ್ನುಳಿದಂತೆ ಉಪ್ಪಾರಹಳ್ಳಿಯ ಸ್ನೇಹಜೀವಿ ಗಣಪತಿ ಗೆಳೆಯರ ಬಳಗ, ವಾನರಸೇನಾ ಗೆಳೆಯರ ಬಳಗ, ಬದರಿಕೊಪ್ಪಲಿನ ಗಜಪಡೆ ಯುವಕರ ಬಳಗ, ಪಟ್ಟಣದ ಅಂಬೇಡ್ಕರ್ ನಗರದ ಭೀಮಸೇನಾ ಯುವಕರ ಬಳಗ, ಎಲ್ಲಮ್ಮ ದೇವಸ್ಥಾನ ರಸ್ತೆಯ ಸಿದ್ದಿವಿನಾಯಕ ಗೆಳೆಯರ ಬಳಗ, ಗಾಣಿಗರ ಬೀದಿಯ ಬಭ್ರುವಾಹನ ಯುವಕರ ಬಳಗ, ಸಾರಿಮೇಗಲಕೊಪ್ಪಲಿನ ಟೀಮ್ ಕೆಂಪೇಗೌಡ ಗೆಳೆಯರ ಬಳಗ, ಕೆ.ಮಲ್ಲೇನಹಳ್ಳಿಯ ಕರುನಾಡ ವಿನಾಯಕ ಗೆಳೆಯರ ಬಳಗ, ಪುಣ್ಯಕೋಟಿ ಬಡಾವಣೆಯ ಪುಣ್ಯಕೋಟಿ ಶಿಶುಮಂದಿರದ ಗಣಪತಿ, ತೊಳಲಿ ಗ್ರಾಮದ ನವಜ್ಯೋತಿ ವಿನಾಯಕ ಗೆಳೆಯರ ಬಳಗ, ಪಟ್ಟಣದ ಟ್ಯಾಂಕ್ ಸಮೀಪದ ಸೀನಣ್ಣ ವಠಾರ ಗೆಳೆಯರ ಬಳಗ ಹಾಗೂ ಕುಂಬಾರಬೀದಿಯ ಹಳೇಊರಮ್ಮ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿರುವ 13 ಗಣೇಶ ಮೂರ್ತಿಗಳ ಜೊತೆಗೆ ಮತ್ತೆರಡು ಗಣಪತಿ ಸೇರಿ ಒಟ್ಟು 15 ಗಣೇಶ ಮೂರ್ತಿಗಳು ಸಾಮೂಹಿಕ ಗಣೇಶ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಬೆಳಿಗ್ಗೆ ೮ಗಂಟೆಗೆ ಹೋಮ ಹವನಾದಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದ ನಂತರ ಸುಮಾರು 11 ಗಂಟೆ ವೇಳೆಗೆ ಸಾಮೂಹಿಕ ಗಣೇಶ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ಸಿಗಲಿದೆ.

ಟಿ.ಬಿ.ಬಡಾವಣೆ ಬಿಜಿಎಸ್ ವೃತ್ತದಿಂದ ಆರಂಭಗೊಳ್ಳುವ ಅದ್ದೂರಿ ಮೆರವಣಿಗೆ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಮಂಡ್ಯ ವೃತ್ತ ತಲುಪಲಿದೆ. ಮಂಡ್ಯ ವೃತ್ತದಲ್ಲಿ ತಿರುವು ಪಡೆದು ಕೆಎಸ್‌ಟಿ ರಸ್ತೆ ಮೂಲಕ ಸಂಚರಿಸಿ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಆಸುಪಾಸಿನಲ್ಲಿರುವ ಪ್ರಮುಖ ಬೀದಿಗಳಲ್ಲಿ ರಾತ್ರಿ ವರೆಗೂ ವೈಭವದ ಮೆರವಣಿಗೆ ನಡೆಯಲಿದೆ.

ಹಂಪೆ ಅರಸನ ಕೊಳದಲ್ಲಿ ವಿಸರ್ಜನೆ:

ಮೆರವಣಿಗೆ ನಡೆಸಿದ ನಂತರ ಎಲ್ಲಾ ಗಣಪತಿ ಮೂರ್ತಿಗಳನ್ನು ಕ್ರೇನ್ ಯಂತ್ರದ ಮೂಲಕ ಪಟ್ಟಣದ ಐತಿಹಾಸಿಕ ಹಂಪೆ ಅರಸನ ಕೊಳದಲ್ಲಿ ವಿಸರ್ಜಿಸಲಾಗುವುದು. ಇದಕ್ಕಾಗಿ ಕೊಳದ ಸುತ್ತಮುತ್ತ ವರ್ಣರಂಜಿತ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಹದ್ದಿನ ಕಣ್ಣಿಟ್ಟಿರುವ ಖಾಕಿ ಪಡೆ:

ಕಳೆದ ಎರಡು ವರ್ಷಗಳ ಹಿಂದೆ ಗಣೇಶೋತ್ಸವ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು ದಳ್ಳುರಿಯಲ್ಲಿ ಬೆಂದುಹೋಗಿತ್ತು. ಈ ಬಾರಿ ಯಾವುದೇ ಸಣ್ಣ ಪುಟ್ಟ ಘಟನೆಗಳೂ ಕೂಡ ನಡೆಯದಂತೆ ಸಾಮೂಹಿಕ ಗಣೇಶೋತ್ಸವವನ್ನು ಅತ್ಯಂತ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಲ್ಲಾ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಅವರ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಡಿವೈಎಸ್‌ಪಿ ಚಲುವರಾಜು ಮತ್ತು ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ 500 ಕ್ಕೂ ಹೆಚ್ಚು ಪೊಲೀಸರು ಮೆರವಣಿಗೆ ವೇಳೆ ಶಾಂತಿ ಸೌಹಾರ್ದತೆಗೆ ಧಕ್ಕೆ ಉಂಟು ಮಾಡಲು ಯತ್ನಿಸುವ ಕಡಿಗೇಡಿಗಳ ಹೆಡೆಮುರಿಕಟ್ಟಲು ಎಲ್ಲೆಡೆ ಹದ್ದಿನ ಕಣ್ಣಿಟ್ಟು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಿದ್ದಾರೆ.

ಮದ್ಯ ಮಾರಾಟ ಸಾಗಾಟ ನಿಷೇಧ

ಪಟ್ಟಣದಲ್ಲಿಂದು ಸಾಮೂಹಿಕ ಗಣೇಶ ಮೆರವಣಿಗೆ ಮತ್ತು ವಿಸರ್ಜನಾ ಕಾರ್ಯಕ್ರಮ ನಡೆಯಲಿರುವುದರಿಂದ ಪಟ್ಟಣ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಕಳೆದ ಎರಡು ವರ್ಷದ ಹಿಂದೆ ಗಣೇಶ ಮೆರವಣಿಗೆ ವೇಳೆ ನಡೆದ ಘಟನಾವಳಿಗಳ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸೆ.21ರ ಬೆಳಗ್ಗೆ 6 ರಿಂದ ರಾತ್ರಿ 12ರವರೆಗೆ ಪಟ್ಟಣ ಸೇರಿದಂತೆ ಸುತ್ತಮುತ್ತಲ 10 ಕಿ.ಮೀ. ಸುತ್ತಳತೆ ವ್ಯಾಪ್ತಿ ಎಲ್ಲಾ ಮಾದರಿಯ ಮದ್ಯದ ಅಂಗಡಿಗಳು, ರೆಸ್ಟೋರೆಂಟ್‌ಗಳನ್ನು ಮುಚ್ಚಲು ಮತ್ತು ಎಲ್ಲಾ ಬಗೆಯ ಮದ್ಯ ಮಾರಾಟ, ಸಾಗಾಟ ಮತ್ತು ಶೇಖರಣೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.